ಕಾರ್ಮಿಕರ ಮತ್ತು ಮಾಲೀಕರ ನಡುವೆ ನಡೆದ ಸಂಘರ್ಷದ ಗೆಲುವೇ ಕಾರ್ಮಿಕ ದಿನಾಚರಣೆ – ವಿಜಯ ಭಾಸ್ಕರ್.

Get real time updates directly on you device, subscribe now.

ಕೊಪ್ಪಳ :  1836ರಲ್ಲಿ ಚಿಕಾಗೋ ನಗರದಲ್ಲಿ ಕಾರ್ಮಿಕರನ್ನು 17, 18 ಗಂಟೆಗಳ ಕಾಲ ಆಗಿನ ಮಾಲೀಕ ವರ್ಗ  ದುಡಿಸಿ ಕೊಳ್ಳುತ್ತಿತ್ತು. ವೈಜ್ಞಾನಿಕವಾಗಿ ದಿನಕ್ಕೆ 24  ಗಂಟೆಗಳಿದ್ದು ಅದರಲ್ಲಿ ಎಂಟು ತಾಸು ದುಡಿಸಿ ಕೊಳ್ಳಬೇಕೆಂದು ಮಾಲೀಕ ವರ್ಗವನ್ನು ಕಾರ್ಮಿಕ ನಾಯಕರು ಆಗ್ರಸಿದ್ದರು.ಅದಕ್ಕೆ  ಮಾಲೀಕರು ಒಪ್ಪದಿದ್ದಾಗ ಕಾರ್ಮಿಕರ ಮತ್ತು ಮಾಲೀಕರ ನಡುವೆ ನಡೆದ ಸಂಘರ್ಷದಿಂದ ಹಲವಾರು ಕಾರ್ಮಿಕರು ಹುತಾತ್ಮರಾಗಿ ಕಾರ್ಮಿಕರ ಗೆಲುವು ಸಾಧಿಸುತ್ತಾರೆ. ಆ ದಿನವನ್ನು ನೆನಪಿಸುವ ದಿನವೇ ಕಾರ್ಮಿಕ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ವಿಜಯ ಭಾಸ್ಕರ್ ಡಿ. ನುಡಿದರು.
    ನಗರದ ಅಶೋಕ ವೃತ್ತದ ಬಳಿಯ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ 138ನೆಯ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಕೊಪ್ಪಳ ಜಿಲ್ಲಾ ಘಟಕದ ಪ್ರಥಮ ಸಮ್ಮೇಳವನ್ನು ಉದ್ಘಾಟಿಸಿ ಮುಂದುವರೆದು ಮಾತನಾಡಿದ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ. ಅವರು ಎಐಟಿಯುಸಿಯ ಹೋರಾಟದ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವಲ್ಲಿ ಸಂಘಟನೆ ಶ್ರಮಿಸಿದೆ, ಆದರೆ ಈಚೆಗೆ ಕಲ್ಯಾಣ ಮಂಡಳಿಯ ಅಧಿಕಾರಿಗಳಿಂದ ಕಾರ್ಮಿಕ ವರ್ಗಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಹೋರಾಟದ ಮೂಲಕವೇ ಪಡೆಯಬೇಕು ಎಂದು ಅವರು ಸೂಚಿಸಿದರು.
    ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎಚ್. ಜಿ. ಉಮೇಶ್ ಅವರು ಮಾತನಾಡಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ದುಡ್ಡನ್ನು ಬೇರೆ ಬೇರೆ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದನ್ನು ತಡೆಯಲು ನಮ್ಮ ಸಂಘಟನೆ ಸತತ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿಂದ ಹಳ್ಳಿವರೆಗೂ ಕಾರ್ಮಿಕ ಮಂಡಳಿಯ ವಿವಿಧ ಸೌಲಭ್ಯಗಳ ದುಡ್ಡು  ನೈಜ ಕಾರ್ಮಿಕರಿಗೆ ತಲುಪಿಸುವ ಕೆಲಸ ನಮ್ಮ ಕಟ್ಟಡ ಕಾರ್ಮಿಕರ ಸಂಘ ಮಾಡುತ್ತಿದೆ ಎಂದು ಹೇಳಿದರು.
     ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ: ಕೆ.ಎಸ್. ಜನಾರ್ಧನ ಪ್ರಸ್ತಾವಿಕವಾಗಿ ಮಾತನಾಡಿ  ಆನ್ ಲೈನ್(ಸಿ.ಎಸ್.ಸಿ) ಸೆಂಟರ್ ಗಳ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಗುರುತಿನ ಚೀಟಿಗಳನ್ನು ಮಾಡಿಸುವ ಕಾರಣಕ್ಕಾಗಿ ಈಚೆಗೆ ಲಕ್ಷಾಂತರ ನಕಲಿ  ಗುರುತಿನ ಚೀಟಿಗಳ ರಾಜ್ಯದಲ್ಲಿ ಆಗಿವೆ, ಹಾಗಾಗಿ ನಿಜವಾದ ಕಟ್ಟಡ ಮತ್ತು ಇತರೆ ನಿರ್ಮಾಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ತುಂಬಾ ಅನ್ಯಾಯವಾಗಿದೆ ಇದನ್ನು ಸರ್ಕಾರ ತಡೆಯಬೇಕು ಎಂದು ಆಗ್ರಹಿಸಿದರು.
    ಕಾರ್ಯಕ್ರಮಕ್ಕಿಂತ ಮುಂಚೆ ನಗರದ ಕಾರ್ಮಿಕ ವೃತ್ತದಿಂದ ಅಶೋಕ ವೃತ್ತದ ವರೆಗೆ ಕಟ್ಟಡ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
   ವೇದಿಕೆ ಮೇಲೆ ಮುಖಂಡರಾದ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುಲುಗಪ್ಪ ಅಕ್ಕಿ ರೊಟ್ಟಿ.ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ತುಮಕೂರು. ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ವಿಭಾಗೀಯ ಗೌರವಾಧ್ಯಕ್ಷ ವಕೀಲ ಯು.ಎಸ್.ಸೊಪ್ಪಿಮಠ. ಎ.ಬಿ. ದಿಂಡೂರ್. ಅಡಿವೆಪ್ಪ ಚಲವಾದಿ. ಹೊನ್ನಪ್ಪ ಮರೆಮ್ಮನವರ್. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಮುಮ್ತಾಜ್ ಬೇಗಂ.ರಾಜ್ಯ ಕಾರ್ಯಾಧ್ಯಕ್ಷ ಪ್ರಭುದೇವ್ ಯಳಸಂಗಿ. ತಾಲ್ಲೂಕಾ ಅಧ್ಯಕ್ಷ ನೂರ್ ಸಾಬ್ ಹೊಸಮನಿ. ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ. ಮುಖಂಡ ಜಾಫರ್ ಕುರಿ. ರಾಯಚೂರ ಜಿಲ್ಲಾಧ್ಯಕ್ಷ ಆನಂದ್. ಗುಡಿಹಳ್ಳಿ ಹಾಲೇಶ್. ಗದಗ ಜಿಲ್ಲಾಧ್ಯಕ್ಷ ಎಂ.ಐ. ನವಲೂರ್. ಭಾಗ್ಯನಗರ ಘಟಕದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌವ್ಹಾಣ್. ಕವಲೂರ ಗ್ರಾಮ ಘಟಕದ ಅಧ್ಯಕ್ಷ ಶರಣಯ್ಯ ಅಬ್ಬಿಗೇರಿ ಮಠ. ಹೊಸ ಕನಕಪುರ ಗ್ರಾಮ ಘಟಕದ ಅಧ್ಯಕ್ಷ ರೇಣುಕವ್ವ ಅಡ್ಡ ದೋಲಿ. ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ ಮುಂತಾದವರು ಉಪಸ್ಥಿತರಿದ್ದರು.
     ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲ್ಲೂಕಾ ಘಟಕದ ಕಾರ್ಯದರ್ಶಿ ರಾಜಾ ಸಾಬ್ ತಹಶೀಲ್ದಾರ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ನಿರೂಪಿಸಿದರು. ಕೊನೆಯಲ್ಲಿ ಸೆಬಾಸ್ಟಿನ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!