ಡಾ. ಹನುಮಂತಪ್ಪ ಅಂಡಗಿ ಅವರ ಆತ್ಮಸ್ಥೈರ್ಯ ಅನುಕರಣೆಯ – ಜಗದೀಶ ಜಿ.ಹೆಚ್.
ಮೇ, ೩೧. : ಕೊಪ್ಪಳ: ಡಾ. ಹನುಮಂತಪ್ಪ ಅಂಡಗಿ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರಿಯಾಶೀಲ ಪ್ರಭಾರಿ ಪ್ರಾಚಾರ್ಯರಾಗಿ, ಹಿರೇಸಿಂದೋಗಿಯ ದಾನಿಗಳಾದ ಬಸವರೆಡ್ಡಿ ಮಾದಿನೂರ, ಸದಾಶಿವ ರೆಡ್ಡಿ ಮಾದಿನೂರು ಇವರಿಂದ ದಾನ ಪಡೆದು ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಉಚಿತ ಪ್ರವೇಶ ದೊರಕಿಸಿಕೊಟ್ಟ ಕೀರ್ತಿ ಡಾ.ಹನುಮಂತಪ್ಪ ಅಂಡಗಿ ಅವರಿಗೆ ಸಲ್ಲುತ್ತದೆ. ಇದಕ್ಕೆ ಆ ಕಾಲೇಜಿನ ಎಲ್ಲಾ ಉಪನ್ಯಾಸಕರ, ಗ್ರಾಮಸ್ಥರ, ಕೆಪಿಎಸ್‌ಸಿ ಕಾಲೇಜಿನ ಎಸ್.ಡಿ.ಎಂ.ಸಿ ಉಪಾಧ್ಯಕ್ಷರ, ಸದಸ್ಯರ ಪಾತ್ರ ತುಂಬಾ ಇದೆ. ಹನುಮಂತಪ್ಪ ಅಂಡಗಿ ಇವರು ಜ್ಞಾನದಾಯಿಗಳು. ಸಾಹಿತಿಗಳು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಡೀ ಕರ್ನಾಟಕದಲ್ಲಿಯೇ ರಾಜ್ಯಮಟ್ಟದ ೧೪ನೇ ಹಾಗೂ ೧೭ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕೊಪ್ಪಳ ಜಿಲ್ಲಾ ಮಟ್ಟದ ೧೦ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡು ಕೊಪ್ಪಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ನಂತರ ಡಾ. ಪ್ರಭುದೇವ ಅಂದಾನೆಪ್ಪ ಗಂಜೀಹಾಳ ಇವರ ಮಾರ್ಗದರ್ಶನದಲ್ಲಿ `ಸ್ವಾತಂತ್ರ್ಯೋತರ ಕಾಲದ ಕನ್ನಡದಲ್ಲಿ ಲಲಿತ ಪ್ರಬಂಧಗಳಲ್ಲಿ ಸಾಮಾಜಿಕ ವಾಸ್ತವ’ ಎನ್ನುವ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದಕ್ಕಾಗಿ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಇಂಥವರು ನಮ್ಮ ಇಲಾಖೆಯಲ್ಲಿರುವುದು ನಮ್ಮ ಇಲಾಖೆಗೆ ಹೆಮ್ಮೆಯ ಸಂಗತಿ. ಈ ಕಾರಣಕ್ಕಾಗಿ ಇಂದು ನಾವು ಇವರಿಗೆ ಸನ್ಮಾನಿಸುತ್ತಿದ್ದೇವೆ ಎಂದು ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ ಜಿ.ಎಚ್. ಹೇಳಿದರು.
ಅವರು ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೦೨೪ _೨೫ ನೇ ಸಾಲಿನ ಕೊಪ್ಪಳ ಜಿಲ್ಲಾಮಟ್ಟದ ಸರ್ಕಾರಿ, ಖಾಸಗಿ, ಅನುದಾನ ಮತ್ತು ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರ ಪ್ರಥಮ ಸಭೆಯಲ್ಲಿ ಹನುಮಂತಪ್ಪ ಅಂಡಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ, ಹನುಮಂತಪ್ಪ ಅಂಡಗಿ ಅವರು ಕಳೆದ ನಾಲ್ಕು ತಿಂಗಳಿಂದ ರೋಗದಿಂದ ಬಳಲುತ್ತಿದ್ದಾರೆ. ನಾವು ಅವರಿಗೆ ರೋಗದ ಬಗ್ಗೆ ಚಿಂತಿಸಬೇಡಿರಿ ಎಂದು ಹೇಳಬೇಕೆಂದರೆ, ಅವರೇ ನಮಗೆ ಧೈರ್ಯ ಹೇಳಿರುವುದು ಅವರ ಆತ್ಮಸ್ಥೈರ್ಯ ಮನೋಧೈರ್ಯ ಮೆಚ್ಚುವಂಥದ್ದು. ಆದರೂ ಇಂದು ಅವರು ಸಭೆಗೆ ಆಗಮಿಸಿ ನಮಗೆಲ್ಲರಿಗೆ ಇಂದು ಹೋಳಿಗೆ ಊಟ ಹಾಕಿಸಿದ್ದಕ್ಕೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ. ಎಂದರು.
ಸನ್ಮಾನ ಸ್ವೀಕರಿಸಿ ಹನುಮಂತಪ್ಪ ಅಂಡಗಿ ಅವರು ಮಾತನಾಡಿ, ನನಗೆ ಆತ್ಮಸ್ಥೈರ್ಯವಿದೆ. ನನಗೆ ರೋಗ ಬಂದಿದೆ ವಿನ:ಹ ಸಾವು ಬಂದಿಲ್ಲ. ಹೀಗಾಗಿ ನಾನು ಎದೆಗುಂದದೆ ಮುಂದೆ ಸಾಗಿದ್ದೇನೆ. ಆದ್ದರಿಂದ ರೋಗ ಬಂದವರು ಅದು ರೋಗವೆಂದು ಭಾವಿಸಬೇಕೆ ವಿನ:ಹ ಸಾವಲ್ಲ ಎಂದು ಪರಿಗಣಿಸಿ ಧೈರ್ಯದಿಂದ ಮುನ್ನುಗ್ಗಬೇಕು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಜಿ ಅನಿಲಕುಮಾರ, ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರಗೌಡ ಹನುಮಂತಪ್ಪ ಅಂಡಗಿಯವರ ವ್ಯಕ್ತಿತ್ವವನ್ನು ಕೊಂಡಾಡಿದರು. ಪ್ರಾಚಾರ್ಯರ ಸಂಘದ ಪದಾಧಿಕಾರಿಗಳಾದ ಡಾ. ರವಿ ಚೌವ್ಹಾಣ್, ಬಸಪ್ಪ ನಾಗೋಲಿ, ರಾಜಶೇಖರ ಪಾಟೀಲ, ಬಸವರಾಜ ಮುನಿರಾಬಾದ, ಶರಣಪ್ಪ ಬೆಲೇರಿ, ಎಚ್.ಬಿ. ಜಗ್ಗಲ್, ಶಾಂತಪ್ಪ ತೋಟದ, ಎ. ಆರ್. ಶಿವಾನಂದ, ಎಚ್. ಎಸ್ .ದೇವರಮನಿ, ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷರಾದ ಮಾರುತಿ ಲಕಮಾಪುರ, ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಹೊಳಗುಂದಿ, ಉಪನ್ಯಾಸಕರಾದ ಎಸ್.ವಿ. ಮೇಳಿ ಉಪಸ್ಥಿತರಿದ್ದರು.
Comments are closed.