ಬಸವಣ್ಣರ ಮಾದರಿಯಲ್ಲೇ ಸಿದ್ದರಾಮಯ್ಯರ ಸಂಪುಟ: ಸಚಿವ ತಂಗಡಗಿ
ಹಡಪದ ಅಪ್ಪಣ್ಣರಂತಹ ಜಯಂತಿಗಳಿಂದ ಯುವಪೀಳಿಗೆಗೆ ಅವರ ಇತಿಹಾಸ ತಿಳಿಯುವಂತಾಗಬೇಕು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣ ಸಮುದಾಯದ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಜಗಜ್ಯೋತಿ ಬಸವಣ್ಣ ಅವರ ಅನುಕರಣೆಯಲ್ಲಿ ತಮ್ಮ ಸಚಿವ ಸಂಪುಟ ರಚಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾಡಳಿತದ ಸಹಯೋಗದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಂದು ಸಮುದಾಯಕ್ಕೂ ಪ್ರಾತಿನಿಧ್ಯ ದೊರಕಬೇಕು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಎಲ್ಲ ಸಮುದಾಯವರಿಗೂ ತಮ್ಮ ಸಂಪುಟದಲ್ಲಿ ಆದ್ಯತೆ ನೀಡಿದ್ದಾರೆ. ಪ್ರತಿಯೊಂದು ಸಣ್ಣ- ಸಣ್ಣ ಸಮುದಾಯವನ್ನು ಪ್ರೋತ್ಸಾಹಿಸಬೇಕು ಎಂಬ ನಿಟ್ಟಿನಲ್ಲಿ ಜಯಂತಿಗಳ ಆಚರಣೆಗೆ ನಾಂದಿಯಾಡಿದ್ದಾರೆ ಎಂದು ತಿಳಿಸಿದರು.
ಹಿಂದೆ ತಾನೂ ತನ್ನ ಜಿಲ್ಲೆಯ ಒಬ್ಬರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದೆ. ಈ ವೇಳೆ ಅವರು, ಯಾವ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹವರಿಗೆ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಹೇಳಿ, ಅಂದು ಯಾದವ ಸಮಾಜದವರಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿಸಿದ್ದರು ಎನ್ನುವ ಮೂಲಕ ತಳ ಸಮುದಾಯಗಳ ಅಭಿವೃದ್ಧಿ ಬಗ್ಗೆ ಅವರು ಹೊಂದಿದ್ದ ಕಾಳಜಿಯನ್ನು ನೆನೆದರು.
ಶಿವಶರಣರಂತಹ ಜಯಂತಿಯನ್ನು ಮೊದಲು ಸಿದ್ದರಾಮಯ್ಯ ಅವರೇ 2018ರಲ್ಲಿ ಮಾಡಲು ಅನುವು ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
ಹಡಪದ ಸಮಾಜ ಸಣ್ಣದಾದರೂ ಸಂಘಟಿತ ಹಾಗೂ ಬುದ್ದಿವಂತ ಸಮಾಜ. ಕುಲಕಸುಬಿನ ಮೇಲೆ ಜಾತಿ ಬಂದಿದೆ. ಯಾರು ಜಾತಿಯನ್ನು ಹೊತ್ತುಕೊಂಡು ಬಂದಿಲ್ಲ ಎಂದರು.
ಬಸವಣ್ಣನವರ ಅನುಭವ ಮಂಟಪಕ್ಕೆ ಬಂದವರಿಗೆಲ್ಲ ಹಡಪದ ಅಪ್ಪಣ್ಣನವರು ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು ಅಂತಹ ಮಹಾನ್ ವ್ಯಕ್ತಿಯ ಜತೆಗಿದ್ದವರು ಹಡಪದ ಅಪ್ಪಣ್ಣನವರು ಎಂದು ಶ್ಲಾಘಿಸಿದರು.
ಹಡಪದ ಅಪ್ಪಣ್ಣರಂತಹ ಜಯಂತಿಗಳಿಂದ ಯುವಪೀಳಿಗೆಗೆ ಅವರ ಇತಿಹಾಸ ತಿಳಿಯುವಂತಾಗಬೇಕು. ಮಹಾನೀಯರ ಸಂದೇಶಗಳು ಎಲ್ಲರಿಗೂ ತಿಳಿಯುವಂತಾಗಲಿ ಎಂದು ಸಲಹೆ ನೀಡಿದರು.
ನಿಗಮಕ್ಕೆ ಕೈ-ಕಾಲಿರಲಿಲ್ಲ
ಹಿಂದಿನ ಸರ್ಕಾರ ಹಡಪದ ಸಮಾಜ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರು. ಕೇವಲ ಪೇಪರ್ ನಲ್ಲಿ ಆದೇಶ ಮಾಡಲಾಗಿತ್ತೇ ಹೊರತು ನೊಂದಣಿ ಕೂಡ ಆಗಿಲ್ಲ. ಕೇವಲ ರಾಜಕೀಯ ಕಾರಣಗಳಿಗೆ ನಿಗಮ ಸ್ಥಾಪನೆ ಮಾಡಿದ್ದರು. ಸಚಿವನಾದ ಮೊದಲು ಅಧಿಕಾರಿಗಳ ಸಭೆ ನಡೆಸಿದಾದ ನಿಗಮಕ್ಕೆ ಕೈ-ಕಾಲು ಇಲ್ಲದಿರುವುದುನ್ನು ತಿಳಿದು ಬೇಸರವಾಯಿತು. ನಿಗಮಕ್ಕೆ ಬೇಕಾದ ಸೂಕ್ತ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಇನ್ನು ಈ ನಿಗಮಕ್ಕೆ ಸೂಕ್ತ ಅನುದಾನ ಒದಗಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಇದೇ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು.
Comments are closed.