‘ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಮೀಸಲಿಡಿ’-ಅವಿಜಿತ್ ಘೋಷ್

Get real time updates directly on you device, subscribe now.

ಮೇ ಸಾಹಿತ್ಯ ಮೇಳ ಸುದ್ದಿ

ಕೊಪ್ಪಳ, :  ಶಿಕ್ಷಣ ಕ್ಷೇತ್ರದತ್ತ ಸರ್ಕಾರಗಳು ತೋರುವ ಅನಾದರ ಕೊನೆಯಾಗಬೇಕು ಎಂದು ಒತ್ತಾಯಿಸಿದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ.ಎನ್.ಯು) ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅವಿಜಿತ್ ಘೋಷ್, ಶಿಕ್ಷಣ ಕ್ಷೇತ್ರಕ್ಕೆ ನಿಗದಿಪಡಿಸಿರುವ ದೇಶದ ಜಿಡಿಪಿಯ ಶೇ 3ರಷ್ಟು ಪ್ರಮಾಣವನ್ನು ಶೇ 10ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ನಡೆಯುತ್ತಿರುವ ‘ಮೇ ಸಾಹಿತ್ಯ ಮೇಳ’ದ ಅಂಗವಾಗಿ ಭಾನುವಾರ ನಡೆದ ‘ಚಳವಳಿ ಮತ್ತು ಧರ್ಮ ರಾಜಕಾರಣ’ ಗೋಷ್ಠಿಯಲ್ಲಿ ಅವರು ‘ವಿದ್ಯಾರ್ಥಿ ಚಳವಳಿ’ ಕುರಿತು ಮಾತನಾಡಿದರು.
ಶಿಕ್ಷಣದ ಬುನಾದಿ ಅನಿಸಿರುವ ವೈಜ್ಞಾನಿಕ ಮನೋಭಾವವನ್ನು ತೆಗೆದುಹಾಕಿ, ತಮ್ಮ ‘ಪ್ರೊಪಗಾಂಡಾ’ ಹೇರುವ ಸಂಚನ್ನು ಸರ್ಕಾರ ರೂಪಿಸಿದೆ. ಇದರ ವಿರುದ್ಧ ಜೆ.ಎನ್.ಯು ಪ್ರಬಲ ಹೋರಾಟ ನಡೆಸುತ್ತಿದೆ. ಅವಧಿ ಮುಗಿದು ನಾಲ್ಕು ವರ್ಷಗಳಾದರೂ ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆಸದೇ ಇರುವುದು ಇದಕ್ಕೆ ಸಾಕ್ಷಿ. ಎಬಿವಿಪಿ ಸಂಘಟನೆಯು ವಿವಿಯಲ್ಲಿ ನಡೆಸಿದ ಹಿಂಸಾಚಾರವೂ ಈ ಸಂಚಿನ ಭಾಗವೇ ಆಗಿದೆ ಎಂದು ಅವರು ಆರೋಪಿಸಿದರು. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಯವರ ಕೈಗೆ ಒಪ್ಪಿಸುವ ಪ್ರಯತ್ನ ನಡೆದಿವೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈತಪ್ಪುವಂತೆ ಮಾಡುವ ಈ ಹುನ್ನಾರವನ್ನು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.
‘ಮಹಿಳಾ ಚಳವಳಿ’ ಕುರಿತು ಮಾತನಾಡಿದ ಹೋರಾಟಗಾರ್ತಿ ಕೆ.ನೀಲಾ, ಈಗ ಅಸಂಖ್ಯಾತ ಸಾಮಾಜಿಕ ಪ್ರಶ್ನೆಗಳು ನಮ್ಮೆದುರು ಇವೆ. ಪರಿಸ್ಥಿತಿ ಸಂಕೀರ್ಣವಾಗಿದೆ. ಹೀಗಾಗಿ ಹೊಸ ಆಲೋಚನೆ ಕ್ರಮದಲ್ಲಿ ಚಳವಳಿಗಳನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯಪಟ್ಟರು. ಚಿಂತಕ ಡಾ. ಅಪ್ಪಗೆರೆ ಸೋಮಶೇಖರ್ ಅವರು ‘ದಲಿತ- ಆದಿವಾಸಿ ಚಳವಳಿ’ ಕುರಿತು ಮಾತನಾಡಿ, ವರ್ತಮಾನದ ದಲಿತ- ಆದಿವಾಸಿಗಳ ಎದುರು ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ ಎಂಬ ಎರಡು ಆಯ್ಕೆಗಳು ಇವೆ. ಇದರಲ್ಲಿ ಡಾ.‌ಅಂಬೇಡ್ಕರ್ ನೀಡಿದ ಸಂವಿಧಾನವೇ ಆಯ್ಕೆ ಆಗಬೇಕು’ ಎಂದು ಹೇಳಿದರು. ದಲಿತರಲ್ಲದ ವರ್ಗದ ನಾಯಕರು ದಲಿತರ ಪರ ಹೋರಾಟ ಮಾಡಿದ ಹಲವು ನಿದರ್ಶನಗಳು ಇವೆ. ಅಂಥ ಹೋರಾಟಗಳನ್ನು ಗಮನಿಸಿ, ಚಳವಳಿ ಮರುರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಅಪ್ಪಗೆರೆ ಸಲಹೆ ಮಾಡಿದರು. ‘ಕಾರ್ಮಿಕ-ರೈತ ಚಳವಳಿ’ ಕುರಿತು ಪತ್ರಕರ್ತ ಡಾ.‌ರವಿಕುಮಾರ್ ಬಾಗಿ ಮಾತನಾಡಿದರು. ಬಸವರಾಜ ಶೀಲವಂತರ್, ಡಿ.ಎಚ್. ಪೂಜಾರ, ಅಶೋಕ ಬರಗುಂಡಿ, ಹನುಮೇಶ ಕಲ್ಮಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಎಚ್.ಎಸ್. ಅನುಪಮಾ ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!