ಮುಂಗಾರು ಪೂರ್ವ ಸಿದ್ದತೆಗಳಿಗೆ ಅಧಿಕಾರಿಗಳು ಕ್ರಮ ವಹಿಸಿ : ಡಿಸಿ ನಲಿನ್ ಅತುಲ್

0

Get real time updates directly on you device, subscribe now.

: ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದAದು ಬರಗಾಲ ಹಾಗೂ ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಸಾಲಿನ ಮುಂಗಾರು ಸಂದರ್ಭಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತಹಶೀಲ್ದಾರರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಹಿಂದಿನ ಹಾನಿ ಮರುಕಳಿಸದಂತೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಪೈಪ್ ದುರಸ್ಥಿ, ಚರಂಡಿಗಳ ನಿರ್ವಹಣೆ, ಸೇರಿದಂತೆ ಮಳೆಯಿಂದ ಉಂಟಾಗಬಹುದಾದ ಹಾನಿ ಹಾಗೂ ಸಮಸ್ಯೆಗಳ ಕುರಿತು ಪೂರ್ವಸಿದ್ದತೆಯಾಗಿ ನಿರ್ವಹಣಾ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಹಿಂದಿನ ವರ್ಷಗಳ ಮುಂಗಾರು ಮಳೆಯಿಂದ ಉಂಟಾದ ಹಾನಿ ಕುರಿತು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಬಾಕಿ ಇರುವ ಬಿಲ್‌ಗಳನ್ನು ಶುಕ್ರವಾರದೊಳಗೆ ಸಲ್ಲಿಸಿ, ಪಾವತಿಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಅನುಷ್ಠಾನ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬರಗಾಲ ಮಾಹಿತಿ ವಿವರ :
ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಟಣಕನಕಲ್ ಹಾಗೂ ಬೂದಗುಂಪಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೇಶನಹಳ್ಳಿ ಹಾಗೂ ಜಬ್ಬಲಗುಡ್ಡ ಗ್ರಾಮಗಳಿಗೆ ಪ್ರತಿ ದಿನ 13 ಟ್ರಿಪ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮೇ 10 ರಂತೆ ಜಿಲ್ಲೆಯಾದ್ಯಂತ 35 ವಾರಗಳಿಗೆ ಸಾಕಾಗುವಷ್ಟು 5,28,994.91 ಟನ್ ಮೇವು ಲಭ್ಯವಿದೆ. ಮುಂದಿನ ದಿನಗಳ ಅಗತ್ಯತೆಗಾಗಿ ಮೇವು ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯಿಂದ ನೀಡಲಾದ 26,659 ಮಿನಿ ಮೇವಿನ ಕಿಟ್‌ಗಳಲ್ಲಿ 9,167 ರೈತರಿಗೆ 21,887 ಮಿನಿ ಮೇವು ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
2024-25ನೇ ಸಾಲಿನ ಅತಿವೃಷ್ಟಿ ಪರಿಹಾರ ವಿವರ :
ಏಪ್ರಿಲ್‌ನಿಂದ ಮೇ ವರೆಗೆ ಸುರಿದ ಮಳೆಯಿಂದ 3 ಮಾನವ ಜೀವ ಹಾನಿಯಾಗಿದ್ದು, ತಲಾ ರೂ.5 ಲಕ್ಷದಂತೆ ಒಟ್ಟು ರೂ.15 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ. ಸಿಡಿಲಿನ ಆಘಾತದಿಂದ ಉಂಟಾದ ಒಟ್ಟು 20 ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ರೂ.3,59,500/- ಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು. ತಹಶೀಲ್ದಾರ ಅವರ ವಿಪತ್ತಿನ ಪಿಡಿ ಖಾತೆಯಲ್ಲಿ ಎಲ್ಲ 7 ತಹಶೀಲ್ದಾರರ ಖಾತೆಯಲ್ಲಿ ಒಟ್ಟು 320.44 ಲಕ್ಷ ಗಳ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ರೈತರಿಗೆ ಸೂಕ್ತ ಮಾಹಿತಿ ನೀಡಲು ಸೂಚನೆ :
ಬರ ಹಾಗೂ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಲ್ಲಿ ಪರಿಹಾರ ವಿತರಣೆ ಪ್ರಕರಣಗಳಲ್ಲಿ ಸೂಕ್ತ ದಾಖಲೆ ಇರುವ ರೈತರಿಗೆ ಈಗಾಗಲೇ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ ಕೆಲವು ರೈತರು ಫ್ರೂಟ್ಸ್ ಐಡಿ, ಸರ್ವೇ ಸಂಖ್ಯೆ, ಬ್ಯಾಂಕ್ ಖಾತೆಗೆ ಸಂಬAಧಿಸಿದ ಸಮಸ್ಯೆಗಳಿಂದ ಪರಿಹಾರದಿಂದ ವಂಚಿತರಾಗಿದ್ದಾರೆ. ಪರಿಹಾರ ಮೊತ್ತ ಪಡೆಯಲು ಇರುವ ಸಮಸ್ಯೆಗಳ ಕುರಿತು ದೂರು/ಅಹವಾಲು ಸಲ್ಲಿಸಲು ತಾಲ್ಲೂಕು ಹಂತದಲ್ಲಿ ಕಾಲ್ ಸೆಂಟರ್‌ಗಳನ್ನು ತೆರೆಯಬೇಕು. ಜಿಲ್ಲಾ ಹಂತದಲ್ಲಿಯೂ ಕಾಲ್ ಸೆಂಟರ್ ಆರಂಭಿಸಬೇಕು. ಬರ ನಿರ್ವಹಣೆಗೆ ತೆರೆಯಲಾದ ಸಹಾಯವಾಣಿ ಸಂಖ್ಯೆಗಳನ್ನು ಈ ಕಾರ್ಯಕ್ಕೂ ಬಳಸಿಕೊಳ್ಳಬಹುದು. ಆದ್ದರಿಂದ ಎಲ್ಲ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ರೈತರು ಕೇಳುವ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಯಾವುದೇ ದಾಖಲೆ ಕೊರತೆ ಇದ್ದಲ್ಲಿ ದಾಖಲೆಯನ್ನು ಪಡೆಯುವ ಸ್ಥಳ ಹಾಗೂ ವಿಧಾನದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಕಂದಾಯ ನಿರೀಕ್ಷಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ, ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕುಗಳ ತಹಶೀಲ್ದಾರರು, ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: