ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ- ರೆಡ್ಡಿ
ಗಂಗಾವತಿ: ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ತಂದು ಅಂಜನಾದ್ರಿ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ವಿಧಾನಸಭಾ ಕ್ಷೇತ್ರದ ಆನೆಗೊಂದಿ ಮಹಾಶಕ್ತಿ ಕೇಂದ್ರದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶ್ರೀರಾಮಜನ್ಮ ಭೂಮಿ ಅಯೋಧ್ಯೆ ಯಲ್ಲಿ ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ, ಮೂಲಸೌಕರ್ಯ ಸೇರಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅದರಂತೆ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಮಾತನಾಡಿ, ಜನತೆ ಮತ್ತೊಮ್ಮೆ ಮೋದಿಜೀ ಅವರು ಪ್ರಧಾನಮಂತ್ರಿಯಾಗಲಿ ಎಂದು ಹರಿಸಿ, ಹಾರೈಸುತ್ತಿದ್ದಾರೆ. ಜನತೆಯ ಆಶೀರ್ವಾದ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮೊದಲ ಬಾರಿಗೆ ಅಭ್ಯರ್ಥಿಯಾದ ನನಗೆ ಶ್ರೀರಕ್ಷೆಯಾಗಲಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಆನೆಗೊಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ, ಗಂಗಾವತಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಚನ್ನಪ್ಪ ಮಳಗಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆನೆಗೊಂದಿ ರಾಜಮನೆತನದ ರಾಜಾ ಕೃಷ್ಣದೇವರಾಯ, ಪ್ರಮುಖರಾದ ಸಿದ್ರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ರಾಜು ನಾಯಕ, ರುದ್ರೇಶ ಡ್ಯಾಗಿ, ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರುರೂ, ದುರುಗಪ್ಪ ಆಗೋಲಿ, ಚನ್ನವೀರಗೌಡ ಕೋರಿ, ಹುಲಿಗೆಮ್ಮ ನಾಯಕ, ವಿಜಯ ಪದ್ಮಾ ಸೇರಿದಂತೆ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Comments are closed.