ಕಾಂಗ್ರೆಸ್ ರೈತ ವಿರೋಧಿ ಸರ್ಕಾರ- ಗಾಲಿ ಜನಾರ್ದನ ರೆಡ್ಡಿ
ಕೊಪ್ಪಳ: ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಿಜೆಪಿ ರೈತರ ಹಿತ ಕಾಪಾಡಲಾಗಿದೆ. ಆದರೆ, ರಾಜ್ಯ ಸರ್ಕಾರವು ಈ ಯೋಜನೆ ನಿಲ್ಲಿಸಿದ್ದು, ರೈತ ವಿರೋಧಿ ಸರ್ಕಾರವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.
ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಬೆಟಗೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ವಾರ್ಷಿಕ 6 ಸಾವಿರ ನೀಡುತ್ತಿದೆ. ಇದಕ್ಕೆ ಅಂದಿನ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 4 ಸಾವಿರ ರೂ. ಸೇರಿಸಿ 10 ಸಾವಿರ ನೀಡಲಾಗುತ್ತಿತ್ತು. ನಂತರ ಬಂದ ಬೊಮ್ಮಾಯಿ ಸರ್ಕಾರವೂ ಇದನ್ನು ಮುಂದುವರಿಸಿತು. ಆದರೆ, ಕಾಂಗ್ರೆಸ್ ಸರ್ಕಾರ 4 ಸಾವಿರ ರೂ. ನಿಲ್ಲಿಸಿದೆ. ಇದೇ ನಾ ರೈತ ಪರ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದ್ದು, ಭಾರತ ಐಟಿ- ಬಿಟಿ ಹಬ್ ಆಗಿದೆ. ಇನ್ನು ಶಿಕ್ಷಣಕ್ಕೆ ಉತ್ತೇಜನೆ ನೀಡಲಾಗುತ್ತಿದ್ದು, ವಿದ್ಯಾವಂತ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸಾಧನೆ ತಿಳಿಸಬೇಕು ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಮಾತನಾಡಿ, 2013 ರಲ್ಲಿ 11ನೇ ಜಾಗತಿಕ ವ್ಯವಸ್ಥೆಯಾಗಿದ್ದ ಭಾರತ 2023 ರಲ್ಲಿ 5ನೇ ಸ್ಥಾನಕ್ಕೇರಿರುವುದು ಇಡೀ ವಿಶ್ವವೇ ಬೆರಗಾಗಿ ಭಾರತದತ್ತ ನೋಡುತ್ತಿದೆ. ಶಿಕ್ಷಣ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರಕಾರ ಕೆಲಸ ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಜೆ.ಡಿ.ಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಪ್ರದೀಪ ಹಿಟ್ನಾಳ, ಪ್ರಮುಖರಾದ ಪ್ರದೀಪಗೌಡ ಕವಲೂರು, ಮಹಾಂತೇಶ ಪಾಟೀಲ ಮೈನಳ್ಳಿ, ಕರಿಯಪ್ಪ ಮೇಟಿ, ಗುರುಮೂರ್ತಿ ಸ್ವಾಮಿಗಳು, ವಿರೇಶ ಸಜ್ಜನ, ವೀರಣ್ಣ ಲಿಕ್ಷಾಣಿ, ಈಶಪ್ಪ ಮಾದಿನೂರ, ಚಂದ್ರಶೇಖರ ಕವಲೂರು, ಅಜಯ ಅಂಗಡಿ, ವೆಂಕಟೇಶ ಹಾಲವರ್ತಿ, ಗಣೇಶ ಹೊರ್ತಟ್ನಾಳ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
Comments are closed.