ಚುನಾವಣಾ ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಹೇಮ ಪುಷ್ಪ ಶರ್ಮಾ
: ಚುನಾವಣಾ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಹೇಮ ಪುಷ್ಪ ಶರ್ಮಾ ಅವರು ಹೇಳಿದರು.
ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಏಜೆಂಟರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರಗಳ ಸಲ್ಲಿಕೆ ಈಗಾಗಲೇ ಪೂರ್ಣಗೊಂಡು ಅಂತಿಮವಾಗಿ ಚುನಾವಣಾ ಕಣದಲ್ಲಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಸಂಪೂರ್ಣ ವಿವರಣೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರ‍್ಯಾಲಿ, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಂದ ಹಾಗೂ ಜಿಲ್ಲಾಮಟ್ಟದ ಕೆಲವು ಅನುಮತಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳು ಚುನಾವಣಾ ವೆಚ್ಚ ನಿರ್ವಹಣೆಗಾಗಿಯೇ ಬ್ಯಾಂಕ್‌ನಲ್ಲಿ ಪ್ರತ್ಯೇಕವಾಗಿ ಹೊಸ ಖಾತೆಯನ್ನು ತೆರೆಯುವುದು ಕಡ್ಡಾಯವಾಗಿದೆ. ಚುನಾವಣಾ ವೆಚ್ಚದ ಸಂಪೂರ್ಣ ವಿವರಣೆಯನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಇದರ ಜೊತೆಗೆ ಪ್ರತಿ ಅಭ್ಯರ್ಥಿವಾರು ಶ್ಯಾಡೋ ವೆಚ್ಚ ರಿಜಿಸ್ಟರ್ ಅನ್ನು ನಿರ್ವಹಿಸಲಾಗುವುದು. ಅಭ್ಯರ್ಥಿಗಳು ವಾಸ್ತವವಾಗಿ ಚುನಾವಣಾ ವೆಚ್ಚ ಕೈಗೊಂಡಿದ್ದು, ಅಭ್ಯರ್ಥಿ ನೀಡುವ ವಿವರದಲ್ಲಿ ನಮೂದಾಗದೇ ಇರುವ ವೆಚ್ಚದ ವಿವರಗಳನ್ನು ಚುನಾವಣಾ ಅಧಿಕಾರಿಗಳು ಶ್ಯಾಡೋ ವೆಚ್ಚ ರಿಜಿಸ್ಟರ್‌ನಲ್ಲಿ ನಮೂದಿಸಿಟ್ಟುಕೊಳ್ಳುತ್ತಾರೆ. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಲು ಯತ್ನಿಸಿದಲ್ಲಿ, ಶ್ಯಾಡೋ ರಿಜಿಸ್ಟರ್‌ನಲ್ಲಿನ ಮಾಹಿತಿಯೊಂದಿಗೆ ತಾಳೆ ಹಾಕಲಾಗುವುದು. ಚುನಾವಣಾ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿ ಮೂರು ಬಾರಿ ವೆಚ್ಚದ ವಿವರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸಾಮಾನ್ಯ ವೀಕ್ಷಕರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 9,19,499 ಪುರುಷ, 9,46,763 ಮಹಿಳಾ ಹಾಗೂ 135 ಇತರೆ ಸೇರಿ ಒಟ್ಟು 18,66,397 ಮತದಾರರಿದ್ದಾರೆ. ಹೋಮ್ ವೋಟಿಂಗ್‌ಗಾಗಿ ರೂಟ್ ಮ್ಯಾಪ್‌ನ್ನು ವಿಧಾನಸಭಾ ಕ್ಷೇತ್ರವಾರು ಸಿದ್ದಪಡಿಸಿಕೊಳ್ಳಲಾಗಿದೆ. ಚುನಾವಣಾ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷರು, ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲಾಡಳಿತ ಭವನದಲ್ಲಿ ಬೆಳಿಗ್ಗೆ 11 ರಿಂದ ಮಾಧ್ಯಾಹ್ನ 3 ಗಂಟೆಯವರೆಗೆ ಲಭ್ಯವಿರುವರು ಎಂದು ಹೇಳಿದರು.
ಸಭೆಯಲ್ಲಿ ಪೊಲೀಸ್ ವೀಕ್ಷಕರಾದ ಡಾ.ಸತೀಶ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಅಭ್ಯರ್ಥಿಗಳು ಮತ್ತು ಏಜೆಂಟರು ಉಪಸ್ಥಿತರಿದ್ದರು.
Comments are closed.