ಮೃತ ಯುವಕನ ಮನೆಗೆ ಸಚಿವ ತಂಗಡಗಿ ಭೇಟಿ: ಸಾಂತ್ವನ
ವಾಂತಿ-ಭೇದಿಯಿಂದ ಯುವಕ ಸಾವು ಪ್ರಕರಣ
*ಕನಕಗಿರಿ:* ವಾಂತಿ, ಭೇದಿಯಿಂದ ಮೃತಪಟ್ಟ ಕನಕಗಿರಿಯ ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸನಹಟ್ಟಿ ಗ್ರಾಮದ ಮೃತ ಸುನೀಲ್ ಕುಮಾರ ಕೃಷ್ಣ ಕಂದಕೂರುವಿನ (24) ಮನೆಗೆ ಸ್ಥಳೀಯ ಶಾಕಸರೂ ಆದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮೃತ ಯುವಕನ ತಾಯಿ ಪಾರ್ವತಮ್ಮ ಅವರಿಗೆ ಸಚಿವರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಗ್ರಾಮಸ್ಥರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ನಿರ್ಲಕ್ಷ್ಯ ತೋರುತ್ತಾರೆ. ಸುನೀಲ್ ಅಸ್ವಸ್ಥಗೊಂಡ ವೇಳೆ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬರಲಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಕೂಡಲೇ ಸಚಿವರು ಜಿಲ್ಲಾ ವೈದ್ಯಾಧಿಕಾರಿಗೆ ಕರೆ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಕೂಡಲೇ ಗ್ರಾಮಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ. ಮುಸಲಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಪ್ರಯೋಗಾಲಯ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಿ ಎಂದು ಸೂಚಿಸಿದರು.
ಇನ್ನು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವಂತೆ ತಿಳಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳು ಮರುಕಳಿಸಬಾರದು. ನಿತ್ಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಶುದ್ಧ ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆದು ಕೊಳ್ಳುತ್ತಿ ದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಹಾಗೂ ಕನಕಗಿರಿ ಕಾರ್ಯನಿರ್ವಾಹಕ ಅಧಿಕಾರಿ ಇನ್ನಿತರರು ಹಾಜರಿದ್ದರು.
Comments are closed.