ಮತದಾನ ಜಾಗೃತಿ ಮಾಲಿಕೆ :- ದೂರುವುದನ್ನು ಬಿಟ್ಟು ದಾರಿ ಹುಡುಕಬೇಕಿದೆ -ಡಾ|| ಶಿವಕುಮಾರ ಮಾಲಿಪಾಟೀಲ್

0

Get real time updates directly on you device, subscribe now.

ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪ್ರಮುಖ ಘಟ್ಟಗಳು. ಈಗ ಅವು ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಸಾಗಿವೆ. ಚುನಾವಣೆಯ ಮೌಲ್ಯಗಳು ಕೆಡಲು ಹಲವಾರು ಕಾರಣಗಳಿರಬಹುದು. ನಾಯಕರು, ಮತದಾರರು ಸೇರಿ ಎಲ್ಲರೂ ಕಾರಣರಾಗಿರಬಹುದು. ಆದರೆ ಈಗ ಬರಿ ದೂರುವುದನ್ನು ಬಿಟ್ಟು ಪರಿಹಾರ ಕಂಡುಕೊಳ್ಳಲು ಯೋಚಿಸಬೇಕಿದೆ. ಪ್ರಜಾಪ್ರಭುತ್ವದ ಮಹತ್ವ ಪ್ರತಿಯೊಬ್ಬ ಪ್ರಜೆಯೂ ಅರಿಯಬೇಕಿದೆ.
ಶಾಲೆ, ಕಾಲೇಜುಗಳಲ್ಲಿ ಈಗ ಶೇ ೯೦, ೯೫ ಫಲಿತಾಂಶಗಳು ಬರುತ್ತವೆ. ಆದರೆ ಚುನಾವಣೆಗಳಲ್ಲಿ ಮಾತ್ರ ಶೇ ೫೦, ೬೦ ಹೆಚ್ಚೆಂದರೆ ೭೦ ಮತದಾನವಾಗುತ್ತದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಪ್ರಜೆಗಳು ಸ್ವ-ಇಚ್ಛೆಯಿಂದ ಪ್ರಯತ್ನಪಟ್ಟರೆ ಶೇ ೯೦ ರವರೆಗೂ ಮತದಾನವಾಗಬಹುದು. ಅವಿದ್ಯಾವಂತರೆ ಮತದಾನದಲ್ಲಿ ಮುಂದೆ ಇದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ನಗರಗಳಿಗಿಂತ ಮತದಾನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ “ಮತದಾನದ ಸಾಕ್ಷರತೆ” ಪ್ರಜಾಪ್ರಭುತ್ವದ ಅರಿವು ವಿದ್ಯಾವಂತರಿಗೂ ಬೇಕಾಗಿದೆ. ಒಂದು ಓಟು ಹಾಕದಿದ್ದರೆ ಏನು ಆಗುತ್ತೆ ಅಂತ ಮನೆಯಲ್ಲಿ ಕೂಡುವ, ಪಿಕ್‌ನಿಕ್‌ಗೆ ಹೋಗುವ ವಿದ್ಯಾವಂತರು ನಿಜವಾದ ದೇಶದ್ರೋಹಿಗಳು.

ವ್ಯವಸ್ಥೆ ಹದಗೆಟ್ಟಿದೆ ಎಂದು ದೂರುತ್ತಾ ಕೂಡದೇ ಅದರನ್ನು ಬದಲಿಸುವ, ಪ್ರಮುಖ ಆಯುಧ ಪ್ರಾಮಾಣಿಕವಾಗಿ ಯಾವ ಆಮೀಷಕ್ಕೆ ಒಳಗಾಗದೆ ಮತದಾನ ಮಾಡುವುದು.  ಮಕ್ಕಳು ಮೊದಲು ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಬೇಕು. ನಂತರ ಅವರು ವಿದ್ಯೆ ಕಲಿತೆ ಕಲಿಯುತ್ತಾರೆ. ಅದೆ ತರಹ ಮತದಾರರ ಮೇಲೆ ಹೆಚ್ಚು ಮತದಾನವಾಗಲು, ಮತಗಟ್ಟೆ ಕಡೆ ಸ್ವ-ಇಚ್ಛೆಯಿಂದ ಹೋಗುವುದು ಕಲಿಯಬೇಕು, ಆಗ ನಿಷ್ಠಾವಂತರು, ಪ್ರಾಮಾಣಿಕರು ಆಯ್ಕೆಯಾಗಿ ಬರುತ್ತಾರೆ. ಜಾತ್ರೆಗಳು ಬಂದಾಗ ಹೇಗೆ ಆ ಊರಿನಿಂದ ಊರೇ ಮದುಮಗಳಂತೆ ಶೃಂಗಾರಗೊಂಡು, ಜನರೆಲ್ಲರೂ ಸ್ವ-ಇಚ್ಛೆ, ಭಕ್ತಿಯಿಂದ ಪಾಲ್ಗೊಂಡು ಎಲ್ಲರೂ ಸೇರಿ ತೇರವನ್ನು ಎಳೆಯುತ್ತಾರೆಯೋ ಅದೇ ರೀತಿ ಈ ಚುನಾವಣೆಯೆಂಬ ತೇರನ್ನು ಸ್ವ-ಇಚ್ಛೆಯಿಂದ, ದೇಶಭಕ್ತಿಯಿಂದ ಎಲ್ಲರೂ ಪವಿತ್ರ ಮತದಾನ ಮಾಡುವ ಮುಖಾಂತರ ಎಳೆಯಬೇಕು.

ಮತದಾರರೇ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆ ವಿನಃ, ಅಭ್ಯರ್ಥಿಯೇ ಮತದಾರರನ್ನು ಆಯ್ಕೆ ಮಾಡಬಾರದು. ಪ್ರತಿ ಮನೆಯ ಬಾಗಿಲಿಗೆ ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಫಲಕವನ್ನು ಹಾಕುವ ಮನಸ್ಥಿತಿ, ಧೈರ್ಯ ಪ್ರತಿ ಮತದಾರರಲ್ಲಿ ಬಂದಾಗ ಮಾತ್ರ ನಾಯಕರ, ಪಕ್ಷಗಳ ಮನಸ್ಥಿತಿ ಬೇರೆಯಾಗುತ್ತದೆ.
ಮತವನ್ನು ಮಾರುತ್ತೇವೆ ಎಂದು ಗೊತ್ತಾದರೆ ಕೊಳ್ಳುವವರು ಇದ್ದೆ ಇರುತ್ತಾರೆ. ಮತದಾರರು ಸಣ್ಣಪುಟ್ಟ ಖುಷಿಗಳಿಗೆ ದೇಶವನ್ನು ಸಂಕಷ್ಟದ ಪರಿಸ್ಥಿತಿ ತಳ್ಳಬಾರದು. ನಾವು ಮತ ಹಾಕುವ ವ್ಯಕ್ತಿ ಎಷ್ಟು ಉತ್ತಮನು ಎಂದು ತಲನೆ ಮಾಡಿ ನೋಡಬೇಕು. ಆ ವ್ಯಕ್ತಿಗೆ ಸಮಾಜದ ಕಳಕಳಿ ಇರಬೇಕು .

ಮತದಾರರು ಅಭ್ಯರ್ಥಿಯ ಜಾತಿ, ಮತ, ಭಾಷೆಗೆ ಹೆಚ್ಚಿನ ಮಾನ್ಯತೆ ಕೊಡಬಾರದು. ವ್ಯಕ್ತಿ ಅಭಿವೃದ್ಧಿ ಪರ ಇದ್ದಾನೊ ಇಲ್ಲವೋ ಎನ್ನುವುದು ಮುಖ್ಯವಾಗಬೇಕು. ಅಭಿವೃದ್ಧಿಗಾಗಿ ಓಟು ಹಾಕಿದರೆ ಮಾತ್ರ ಊರು, ನಾಡು, ದೇಶ ಅಭಿವೃದ್ಧಿ ಹೊಂದುತ್ತದೆ.

“ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ” ಎಂಬ ಬಸವಣ್ಣನವರ ಸಾಲಿನಂತೆ ಈಗಿನ ಪರಿಸ್ಥಿತಿಗೆ “ಛಲಬೇಕು ಮತದಾರರಿಗೆ ಪರಧನವನೊಲ್ಲೆ ಎಂಬ ಛಲ ಮತದಾರರಿಗೆ ಬೇಕು, ಹಾಗೆ “ಛಲಬೇಕು ಅಭ್ಯರ್ಥಿಗಳಿಗೆ ಪ್ರಾಮಾಣಿಕತೆಯಿಂದ ಗೆದ್ದು ಬರುತ್ತೇವೆಂದು” ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಛಲ ಬೇಕು. ಪಕ್ಷಗಳು ಹಲವಾರು ಆಮೀಷಗಳನ್ನು ಒಡ್ಡಿ, ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಏನೆ ಮಾಡಿದರೂ ಆಮೀಷಗಳಿಗೆ ಒಪ್ಪದ ಗಟ್ಟಿ ಮನಸ್ಸು ಮತದಾರರಿಗೆ ಇರಬೇಕು. ಆ ಗಟ್ಟಿ ಮನಸ್ಸು ಸಂಸ್ಕಾರದಿಂದ ಬರುತ್ತದೆ. ಅಂತಹ ಸಂಸ್ಕಾರವನ್ನು ಅವಿದ್ಯಾವಂತರು, ವಿದ್ಯಾವಂತರೂ ಇಬ್ಬರೂ ಬೆಳೆಸಿಕೊಳ್ಳಬೇಕು. ಇಲ್ಲವೆಂದರೆ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಡುವಂತಾಗುವುದು.
“ತನಗೆ ತಾನೇ ಕಟ್ಟುಪಾಡುಗಳಿಗೆ ವಿಧಿಸಿಕೊಳ್ಳುವವನೇ ನಿಜವಾದ ಸ್ವತಂತ್ರ ವ್ಯಕ್ತಿ” ಎಂದು ಮಹಾತ್ಮ ಗಾಂಧಿಜಿಯವರು ಹೇಳಿದ್ದಾರೆ. ಸ್ವತಂತ್ರ ಅಂದರೆ ಹೇಗೆ ಬೇಕು ಹಾಗೆ ಬದುಕುವುದಲ್ಲ, ದೇಶದ ಒಳಿತಿಗಾಗಿ ಕಟ್ಟುಪಾಡು, ದೇಶ ಕಾನೂನಿನಡಿಯಲ್ಲಿ ಬದುಕುವುದೇ ನಿಜವಾದ ವ್ಯಕ್ತಿಯ ಸ್ವಾತಂತ್ರ.

ಅದೇ ತರಹ ನಾಯಕರಿಗೆ ಸ್ವತಂತ್ರ ಅಂದರೆ ಮತದಾರರನ್ನು ಅತಂತ್ರ ಸ್ಥಿತಿಗೆ ತಳ್ಳುವುದಲ್ಲ ಜನರ ಜೀವನ ಗುಣಮಟ್ಟವನ್ನು ಸುಧಾರಣೆ ಮಾಡುವುದು, ಹಾಗಾಗಿ ಮುಂದಿನ ತಿಂಗಳು ೭ನೇ ತಾರೀಖಿನಂದು ನಡೆಯುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಪ್ರಜಾಪ್ರಭುತ್ವದ ಅರಿವಿರಲಿ, ಅಡ್ಡದಾರಿಗೆ ಹೋಗದ ಛಲ ಇರಲಿ. ನಮ್ಮ ಮತ ನಮ್ಮ ಭವಿಷ್ಯವಾಗಲಿ.. ಚುನಾವಣೆಗಳಿಂದ ದೇಶಕ್ಕೆ ಹಿತವಾಗಲಿ…

ಡಾ|| ಶಿವಕುಮಾರ ಮಾಲಿಪಾಟೀಲ್
ದಂತವೈದ್ಯರು ಗಂಗಾವತಿ ಹಾಗೂ
ಜಿಲ್ಲಾ ಚುನಾವಣಾ ರಾಯಭಾರಿಗಳು ಕೊಪ್ಪಳ
ಮೊ.ನಂ: ೯೪೪೮೩೦೨೭೭೫
9448302775

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: