ಚುನಾವಣಾ ಪ್ರಚಾರಕ್ಕಾಗಿ ಮೇ.೦೨ಕ್ಕೆ ಗಂಗಾವತಿಗೆ ಸಿದ್ದರಾಮಯ್ಯ: ಸಂಗಣ್ಣ ಕರಡಿ
ಮಾಜಿ ಸಂಸದ ಹೆಚ್.ಜಿ.ರಾಮುಲು ನನ್ನ ರಾಜಕೀಯ ಗುರು
ಗಂಗಾವತಿ: ೧೯೭೮ರಲ್ಲಿ ತಾಲೂಕಾ ಬೋರ್ಡ್ ಚುನಾವಣೆಗಾಗಿ ಟಿಕೆಟ್ ನೀಡಿ ನನ್ನ ರಾಜಕೀಯ ಜೀವನ ಆರಂಭಕ್ಕೆ ಮುನ್ನುಡಿ ಬರೆದ ಮಾಜಿ ಸಂಸದ ಹೆಚ್.ಜಿ.ರಾಮುಲು ನನ್ನ ರಾಜಕೀಯ ಗುರುವಾಗಿದ್ದು, ಮೂಲ ಪಕ್ಷಕ್ಕೆ ನಾನು ಮರಳಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಕೆಲವೆ ದಿನಗಲ್ಲಿ ಮರೆಯಾಗಲಿವೆ, ಚುನಾವಣಾ ಪ್ರಚಾರಕ್ಕಾಗಿ ಮೇ.೦೨ ರಂದು ಗಂಗಾವತಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು.
ಅವರು ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಜನಮನ್ನಣೆಗಳಿಸಿವೆ, ಸಿದ್ದರಾಮಯ್ಯ ಅವರ ಗಟ್ಟಿ ನಾಯಕತ್ವ, ಸ್ಥಳಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದಾಗಿ ರಾಜಶೇಖರ್ ಹಿಟ್ನಾಳ್ ಗೆಲುವು ಖಚಿತವಾಗಿದ್ದು, ಮಾಜಿ ಸಂಸದ ಹೆಚ್.ಜಿ.ರಾಮುಲು ನೇತೃತ್ವದಲ್ಲಿ ಪಕ್ಷದಲ್ಲಿರುವ ಸಣ್ಣಪುಟ್ಟ ಗೊಂದಲಗಳು ಖಂಡಿತ ಸರಿಯಾಗಲಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತ ವೈಭವ ಮರುಕಳಿಸಲಿದೆ, ಸಾವಿರಾರು ಕಾರ್ಯಕರ್ತರು ಪಕ್ಷ ಸೇರಿದ್ದು ಕಾಂಗ್ರೆಸ್ ಪಕ್ಷದ ಶಕ್ತಿ ವೃದ್ಧಿಯಾಗಿದೆ ಎಂದರು,
ಮಾಜಿ ಎಂಎಲ್‌ಸಿ ಶ್ರೀನಾಥ್ ಮಾತನಾಡಿ, ಸಂಸದ ಕರಡಿ ಸಂಗಣ್ಣ ಪಕ್ಷಕ್ಕೆ ಬಂದಿರುವುದು ನಮಗೆ ಶಕ್ತಿ ಬಂದಿದೆ. ಎಲ್ಲರೊಡನೆ ಸರಳ ಸಜ್ಜನಿಕೆಯಿಂದ ಬೆರೆತು ಹೋಗುವ ಮಾಜಿ ಸಂಸದ ಕರಡಿಯವರು ಅವರದ್ದೇ ಆದ ಅಭಿಮಾನ ಬಳಗ ಹೊಂದಿದ್ದಾರೆ, ಸಹಜವಾಗಿಯೆ ಪಕ್ಷಕ್ಕೆ ಶಕ್ತಿ ಬಂದಿದೆ ಎಂದರು.
ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಶಾಮೀದ್ ಮನಿಯಾರ್ ಮಾತನಾಡಿ, ಸಂಸದ ಸಂಗಣ್ಣ ಕರಡಿಯವರು ಹಿರಿಯ ಮುತ್ಸದ್ದಿಗಳು, ಅವರ ರಾಜಕೀಯ ಅನುಭವ ಪಕ್ಷಕ್ಕೆ ವರವಾಗಲಿದೆ ಎಂದು ಹೇಳಿದರು.
ನಂತರ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್ ಅವರೊಂದಿಗೆ ರಾಜಕೀಯ ಮಾತುಕತೆ ನಡೆಸಿ ಬಳಿಕ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ರಾಜಶೇಖರ್ ಮುಷ್ಟೂರ್, ಸೋಮನಾಥ್ ಪಟ್ಟಣ ಶೆಟ್ಟಿ, ಗಂಗಾವತಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ್ ದೇವರಮನಿ, ನಗರಸಭೆ ಸದಸ್ಯ ಸೋಮನಾಥ್ ಭಂಡಾರಿ, ಮುಖಂಡರಾದ ಅಯೂಬ್ ಖಾನ್, ಬಾಗಣ್ಣ ಕಡ್ಲಿ, ಮೊಬ್ಮದ್ ಅಲಿ ಜಿನ್ನಾ, ಶಬ್ಬೀರ್, ಶಯೋಬ್ ಇತರರಿದ್ದರು.
Comments are closed.