ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ -ಏಪ್ರಿಲ್ 12ರಂದು ಅಧಿಸೂಚನೆ-ನಲಿನ್ ಅತುಲ್
ಭಾರತ ಚುನಾವಣಾ ಆಯೋಗವು ಈಗಾಗಲೇ 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಧಿಸೂಚನೆ ಹೊರಡಿಸಿದ ಏ.12 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು ಇಚ್ಛಿಸುವವರು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12 ರಿಂದ ಏ.19 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗಾಗಿ ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕಾರ್ಯಾಲಯದ 100 ಮೀ. ಪರೀದಿಯೊಳಗೆ ಗರಿಷ್ಠ 3 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಏ.20ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಏ.22ರಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮನಿರ್ದೇಶನವನ್ನು ವಾಪಸ್ ಪಡೆದುಕೊಳ್ಳಲು ಅವಕಾಶವಿದ್ದು, ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯ ಹಂಚಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದರು.
ಮತದಾನ ಕೇಂದ್ರಕ್ಕೆ 6724 ಸಿಬ್ಬಂದಿಗಳ ನೇಮಕ: 1681 ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್.ಓ), 1681 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್.ಓ) ಮತ್ತು 3362 ಮತಗಟ್ಟೆ ಅಧಿಕಾರಿಗಳು (ಪಿಓ) ಸೇರಿದಂತೆ ಒಟ್ಟಾರೆಯಾಗಿ 6724 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಏ.8ರಂದು ಬೆಳಿಗ್ಗೆ 10:30ಕ್ಕೆ ಸಂಬAಧಪಟ್ಟ ವಿಧಾನಸಭಾಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರಗಳು: ಮಾರ್ಚ್ 26ರಂದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ & ವಿವಿ ಪ್ಯಾಟ್) ಹಂಚಿಕೆ ಮಾಡಿ ರಾಜಕೀಯ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಂಬAಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ಸುಪರ್ದಿಗೆ ನೀಡಲಾಯಿತು. ಅದರಂತೆ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿ ಜಿಲ್ಲೆಯ 1317 ಮತಗಟ್ಟೆ ಪೈಕಿ 1628 ಬಿಯು, 1628 ಸಿಯು ಹಾಗೂ 1723 ವಿವಿ ಪ್ಯಾಟ್‌ಗಳನ್ನು ನೀಡಲಾಗಿದೆ. ಈ ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಸಂಬAಧಪಟ್ಟ ಸಹಾಯಕ ಚುನಾವಣಾಧಿಕಾರಿಗಳು ಅವರ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿರುವ ಭದ್ರತಾ ಕೊಠಡಿಯಲ್ಲಿ ಇರಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.
ಅಂಚೆ ಮತದಾನದ ಸೌಲಭ್ಯ: ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರಿಗೆ ಮತ್ತು 85+ ವಯೋಮಾನದ ಮತದಾರರಿಗೆ ಮತ್ತು ಕೋವಿಡ್ ಶಂಕಿತ ಅಥವಾ ಬಾಧಿತ ಮತದಾರರಿಗೆ ಮತಚಲಾಯಿಸಲು ಅನುಕೂಲವಾಗುವಂತೆ ಹೋಮ್ ವೋಟಿಂಗ್ ಸೌಲಭ್ಯವನ್ನು ಒದಗಿಸಿದ್ದು, ಮತದಾರರು ಈ ಸೌಲಭ್ಯ ಪಡೆಯಲು ಇಚ್ಛಿಸಿದಲ್ಲಿ ನಮೂನೆ-12ಡಿರಲ್ಲಿ ಮನವಿ ಸಲ್ಲಿಸುವ ಅರ್ಹ ಮತದಾರರ ಮನೆಗೆ ತೆರಳಿ ಮತದಾನ ಪಡೆಯುವ ಕಾರ್ಯವನ್ನು ಮಾಡಲಾಗುವುದು. ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಹಾಗೂ ಸಿರಗುಪ್ಪ ಈ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 38,294 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 18,456 ಮತದಾರರಿಗೆ ನಮೂನೆ-12ಡಿ ಅನ್ನು ನೀಡಲಾಗಿದ್ದು, 19,838 ಮತದಾರರಿಗೆ ನಮೂನೆ-12ಡಿ ನ್ನು ಪಡೆದಿರುವುದಿಲ್ಲ. 2342 ಮತದಾರರನ್ನು ನಮೂನೆ-12ಡಿಗೆ ಆಯ್ಕೆ ಮಾಡಲಾಗಿದೆ. 15,885 ಮತದಾರರು ನಮೂನೆ-12ಡಿ ಆಯ್ಕೆ ಮಾಡಿಕೊಂಡಿಲ್ಲ ಎಂದರು.
ಮತದಾರರ ವಿವರ: 8-ಕೊಪ್ಪಳ ಲೋಕಸಭಾ ಕ್ಷೇತ್ರವು ಕೊಪ್ಪಳ ಜಿಲ್ಲೆಯ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಯಚುರು ಜಿಲ್ಲೆಯ 58-ಸಿಂಧನೂರು ಮತ್ತು 59-ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳು ಸೇರಿ 8-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 1ರಂತೆ 9,15,535 ಪುರುಷ ಮತದಾರರು, 9,42,442 ಮಹಿಳಾ ಮತದಾರರು ಮತ್ತು 135 ಇತರೆ ಸೇರಿ ಒಟ್ಟು 18,58,112 ಮತದಾರರಿದ್ದಾರೆ. ಇದರಲ್ಲಿ 48,220 ಯುವ ಮತದಾರರು, 25,734 ವಿಕಲಚೇತನ ಮತದಾರರು, 12,904 ಹಿರಿಯ ಮತದಾರರು (85 ವರ್ಷ ಮೇಲ್ಪಟ್ಟವರು) ಹಾಗೂ 615 ಸೇವಾ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
ಮೂಲಭೂತ ಸೌಲಭ್ಯಗಳು: ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗಲು ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನರಿಗೆ ರೇಲಿಂಗ್ ಸಹಿತ ರ‍್ಯಾಂಪ್ ವ್ಯವಸ್ಥೆ, ನೆರಳಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ: ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 8-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 49 ಫ್ಲೆöÊಯಿಂಗ್ ಸ್ಕಾ÷್ವಡ್, 32 ಚೆಕ್‌ಪೋಸ್ಟ್ಗಳು, 27 ವಿಡಿಯೋ ಕಣ್ಗಾವಲು ತಂಡಗಳು, 168 ಸೆಕ್ಟರ್ ಅಧಿಕಾರಿಗಳುನ್ನು ನೇಮಕಮಾಡಲಾಗಿದೆ. ಮಾರ್ಚ್ 16 ರಿಂದ ಜೂನ್ 6 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಧಾನಸಭಾ ಮಟ್ಟದಲ್ಲಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
82.92 ಲಕ್ಷ ಹಣ, 4011.68 ಲೀ. ಮದ್ಯ ಜಪ್ತಿ, 6 ಎಫ್.ಐ.ಆರ್: ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಅವಧಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಚರಣೆಯಿಂದಾಗಿ ಏಪ್ರಿಲ್ 1ರವರೆಗೆ ರೂ. 82,92,500 ಹಣ ಮತ್ತು ರೂ.15,96,660 ಮೌಲ್ಯದ 4011.68 ಲೀಟರ್ ಮದ್ಯ ಜಪ್ತಿ ಮಾಡಲಾಗಿದ್ದು, ಈ ಕುರಿತು 6 ಎಫ್.ಐ.ಆರ್ ದಾಖಲಾಗಿರುತ್ತವೆ ಎಂದು ತಿಳಿಸಿದರು.
ಮತದಾರರ ಸಹಾಯವಾಣಿ: ಮತದಾರರರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು, ಯಾವುದೇ ಚುನಾವಣಾ ಸಂಬAಧಿತ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ 1950 ರೊಂದಿಗೆ ಜಿಲ್ಲಾ ಸಂಪರ್ಕ ಕೇಂದ್ರ (ಡಿಸಿಸಿ)ವನ್ನು ತೆರೆಯಲಾಗಿದೆ. ಮತದಾರರಿಗೆ ಅನುಕೂಲವಾಗಲು ಭಾರತ ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್ ಆಪ್ ಮತ್ತು ಕೆವೈಸಿ ಆಪ್‌ಗಳನ್ನು ಪರಿಚಯಿಸಿರುತ್ತದೆ. ಇದರ ಮೂಲಕ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ, ಸಂಖ್ಯೆ ಅಥವಾ ವಿವರಗಳನ್ನು ದಾಖಲಿಸಿ, ಮತಗಟ್ಟೆ ಹೆಸರು, ವಿಳಾಸ ತಿಳಿದುಕೊಳ್ಳಬಹುದು. ಸೇರ್ಪಡೆ, ತಿದ್ದುಪಡಿ ಅಥವಾ ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು. ಇ-ಎಪಿಕ್‌ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಹಾಗೂ ಮತದಾರರ ನೊಂದಣಾಧಿಕಾರಿಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವರ, ಅಫಿಡವಿಟ್‌ಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಸ್ವೀಪ್ ಕಾರ್ಯಕ್ರಮಗಳು ನಡೆಯುತ್ತಲಿವೆ. ಈ ಹಿಂದೆ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಗೆ ತೆರಳಿ ಅಲ್ಲಿನ ಮತದಾರರಿಗೆ ವಿಶೇಷ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ರವಿಕುಮಾರ ವಸ್ತçದ್, ನಾಗರಾಜ, ಪ್ರಸನ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.