ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮ
ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮಜರುಗಿತು.
ಮಹಿಳೆ ಮತ್ತು ಶಿಕ್ಷಣ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಗುರುರಾಜ ಪಾಟೀಲ ಹುಬ್ಬಳ್ಳಿ ’ಕೌಟುಂಬಿಕವಾಗಿ ದೊಡ್ಡ ಜವಾಬ್ದಾರಿ ನಿರ್ವಹಣೆ ಮಾಡುವ ಮಹಿಳೆ ತನ್ನ ಆರೋಗ್ಯದ ಬಗ್ಗೆಯೂ ಕಾಳಜೆ ವಹಿಸಬೇಕು. ಆರೋಗ್ಯದಿಂದ ಇರುವುದೇ ಸಂತೋಷ. ಸಂಸಾರದಲ್ಲಿ ಜಂಜಾಟ, ಒತ್ತಡಗಳು ಇದ್ದೇ ಇರುತ್ತವೆ’ ಎಂದರು.
‘ಸಂಸಾರದ ನೊಗ ಹೊತ್ತ ಮಹಿಳೆ ಮೇಲೆ ಹಲವಾರು ಜವಾಬ್ದಾರಿಗಳು ಇವೆ. ಆದ್ದರಿಂದ ಮಹಿಳೆಗೆ ಉತ್ತಮ ಆರೋಗ್ಯ, ಸಂಸ್ಕಾರ, ಸಂಸ್ಕೃತಿ ಮತ್ತು ಸಮಯ ಪಾಲನೆ ಅಗತ್ಯ’ ಎಂದು ಸಲಹೆ ನೀಡಿದರು.
ಹೊಸಪೇಟೆಯ ಕಿರ್ಲೋಸ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ಗುಮಾಸ್ತೆ ಮಾತನಾಡಿ ‘ನಿತ್ಯದ ಕಾರ್ಯಭಾರದ ನಡುವೆಯೂ ಅನೇಕ ಮಹಿಳೆಯರು ಸೇರಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದು ಹೆಮ್ಮೆಯ ವಿಚಾರ. ಅನೇಕ ಜನ ಮಹಿಳೆಯರಿಗೆ ಮನೆಯಲ್ಲಿ ವೃದ್ಧರು, ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಅದೆಲ್ಲ ನಿರ್ವಹಣೆ ಮಾಡುವ ಮಹಿಳೆ ಶಕ್ತಿ ಅಸಾಮಾನ್ಯ’ ಎಂದರು.
ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ವೈಷ್ಣವಿ ಹುಲಗಿ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಜಿಲ್ಲಾ ಸಂಚಾಲಕ ಹನುಮಂತರಾವ್ ದೇಶಪಾಂಡೆ, ಸಹ ಸಂಚಾಲಕಿ ಮಧುರಾ ಕರ್ಣಂ, ಕೊಪ್ಪಳ ತಾಲ್ಲೂಕು ಸಂಚಾಲಕಿ ಸೌಮ್ಯಾ ಗುಡಿ, ವೈದ್ಯೆ ರಾಧಾ ಕುಲಕರ್ಣಿ, ಸಾಹಿತಿ ಸ್ನೇಹಲತಾ ಜೋಶಿ, ಸಮಾಜದ ಮುಖಂಡರಾದ ಕೆ.ಜಿ. ಕುಲಕರ್ಣಿ, ವೇಣುಗೋಪಾಲಾಚಾರ್ ಜಹಗೀರದಾರ್, ಮಂಜುನಾಥ ಹಳ್ಳಿಕೇರಿ, ಗುರುರಾಜ ಜೋಶಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Comments are closed.