ಜಿಲ್ಲಾಡಳಿತ ಗುಳೆ ತಡೆಯಲಿ- ಬಿ.ಗಿರೀಶಾನಂದ

Get real time updates directly on you device, subscribe now.

ಕೊಪ್ಪಳ,ಜೂ.೨೭: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೆಲಸವಿಲ್ಲದ್ದರಿಂದ ಗ್ರಾಮೀಣ ಜನರು ಬೇರೆ ಬೇರೆ ಜಿಲ್ಲೆಗಳಿಗೆ ಗುಳೆ ಹೊರಟಿರುವುದು ಶೋಚನೀಯವಾಗಿದ್ದು, ನರೇಗಾ ಯೋಜನೆಯಲ್ಲಿ ಪೂರ್ಣ ಪ್ರಮಾಣದ ಮಾನವ ದಿನಗಳ ಬಳಕೆಯಾಗದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ಬಲವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಹುಟ್ಟೂರಿನಲ್ಲಿ ನಾಲ್ಕು ತಿಂಗಳು ಜೀವನ ನಡೆಸಿದರೆ, ಎಂಟು ತಿಂಗಳು ಟೆಂಟ್‌ನಲ್ಲಿ ಜೀವನ ನಡೆಸುವ ಅಲೆಮಾರಿಯಂತಾಗಿರುವುದು ಖೇಧಕರ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯು ಕೇಂದ್ರ ಸರ್ಕಾರ ೭ ಸೆಪ್ಟೆಂಬರ್ ೨೦೦೫ ರಂದು ಜಾರಿಗೆ ತಂದಿದ್ದು, ೧೦೦ ದಿನಗಳ ಉದ್ಯೋಗವನ್ನು ಖಾತರಿಪಡಿಸುವ ವಿಶ್ವದ ಏಕೈಕ ಯೋಜನೆಯಾಗಿದೆ. ದೇಶದ ಗ್ರಾಮೀಣ ಬಡ ಮತ್ತು ನಿರುದ್ಯೋಗಿ ಕುಟುಂಬಗಳು ಯೋಜನೆ ಫಲಾನುಭವಿಗಳಾಗಿದ್ದು, ವಲಸೆ ಹೋಗುವುದನ್ನು ತಡೆದು ಸ್ವಂತ ಗ್ರಾಮ ಪಂಚಾಯತನಲ್ಲಿ ಉದ್ಯೋಗ ನೀಡಿ ಗ್ರಾಮೀಣ ಅಭಿವೃದ್ಧಿ ಜೊತೆಗೆ ಆರ್ಥಿಕ ಬಲವನ್ನು ಒದಗಿಸುವ ಮಹತ್ತರವಾದ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಬಹುತೇಕ ಗ್ರಾ.ಪಂ ಗಳಲ್ಲಿ ಈ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಂಡಿರದ ಕಾರಣ ಹಾಗೂ ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ೧೦೮ ತಾಂಡಾಗಳಲ್ಲಿ ಶೇ.೮೦ ರಷ್ಟು ಜನರು ತಮ್ಮ ಮಕ್ಕಳು ಸೇರಿ ಕುಟುಂಬ ಸಮೇತ ಮಂಡ್ಯ, ಮೈಸೂರು, ಹಾಸನ ಸೇರಿ ತಮಿಳುನಾಡಿನತ್ತ ಗುಳೆ ಹೊರಟಿದ್ದು, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸರ್ಕಾರದ ಯಾವ ಇಲಾಖೆಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದ ಅವರು ಪ್ರಸಕ್ತ ವರ್ಷದಲ್ಲಿಯಾದರೂ ಗುಳೆ ಹೋಗುವುದನ್ನು ತಡೆಯುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಆಯಾ ಕ್ಷೇತ್ರದ ಶಾಸಕರುಗಳು ಕಾಳಜಿವಹಿಸಿ ಜಿಲ್ಲಾಡಳಿತಕ್ಕೆ ಕ್ರಮಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿ ಸ್ಥಳಿಯವಾಗಿ ಉದ್ಯೋಗ ನೀಡುವಲ್ಲಿ ಹೆಚ್ಚು ಶ್ರಮವಹಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!