ಬಹದ್ದೂರುಬಂಡಿ ಮತ್ತು ಬಂಜಾರ ಸಮುದಾಯ

Get real time updates directly on you device, subscribe now.

(ಬಹದ್ದೂಬಂಡಿ ಗ್ರಾಮದಲ್ಲಿ ಬಂಜಾರ ಸಮುದಾಯದವರಿಂದ ದಿನಾಂಕ ೨೪-೦೩-೨೦೨೪ರ ರಾತ್ರಿ ನಡೆಯುವ ರಾಷ್ರ್ಟೀಯ ಹೋಳಿ ಉತ್ಸವ ನಿಮಿತ್ಯ ವಿಶೇಷ ಲೇಖನ)
‘ಬಹದ್ದೂರುಬಂಡಿ’ಯು ಪ್ರಾಚೀನ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದ ಗ್ರಾಮವಾಗಿತ್ತು. ಇಲ್ಲಿನ ದೇವಸ್ಥಾನ, ಶಾಸನ, ಕೋಟೆಯ ಕಾರಣಗಳಿಂದಾಗಿ ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದಂತೆ ದಾಖಲಾಗಿ ಇಂದಿಗೂ ಕೂಡ ಉಳಿದಿದೆ. ಕರ್ನಾಟಕವನ್ನಾಳಿದ ಮನೆತನಗಳಲ್ಲಿ ಬಹುತೇಕರು ಈ ಕೊಪ್ಪಳ ಪ್ರದೇಶವನ್ನಾಳಿದ್ದಾರೆ. ಕೊಪ್ಪಳದಿಂದ ಕೂಗಳತೆಯ ದೂರದಲ್ಲೇ ಇರುವ ಬಹದ್ದೂರುಬಂಡಿಯು ಸಹಜವಾಗಿಯೇ ಕೊಪಳವನ್ನಾಳಿದ ಅರಸರು ಈ ಗ್ರಾವನ್ನಾಳಿದ್ದಾರೆಂದು ಹೇಳಬಹುದು. ಆದರೆ ಆ ಗ್ರಾಮದ ಇತಿಹಾಸದ ಅಧ್ಯಯನಕ್ಕೆ ಹೆಚ್ಚಿನ ದಾಖಲೆಗಳು ಲಭ್ಯವಾಗುತ್ತಿಲ್ಲ.
ಈ ಬಹದ್ದೂರುಬಂಡಿ ಗ್ರಾಮದಲ್ಲಿ ಪ್ರಾಚೀನ ಕಾಲದಿಂದಲೂ ಅನೇಕ ಧರ್ಮ, ಜಾತಿ, ಸಮುದಾಯಗಳು ವಾಸಿಸಿದ್ದವು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ. ಈ ಗ್ರಾಮದಲ್ಲಿ ಹಿಂದು, ಮುಸ್ಲಿಂ, ಜೈನ ಧರ್ಮದವರು ನೆಲೆಸಿದ್ದ ಬಗ್ಗೆ ಚರಿತ್ರೆಯ ಕುರುಹುಗಳಲ್ಲಿ ಕಾಣಸಿಗುತ್ತವೆ. ಆದರೆ ಇಂದು ಜೈನ ಧರ್ಮದವರು ಈ ಗ್ರಾಮದಲ್ಲಿ ಸಿಗುವುದಿಲ್ಲ. ಜೊತೆಗೆ ಸಿಖ್ ಧರ್ಮದವರಲ್ಲದವರೂ ಸಹ ಅವರ ಸಂಪ್ರದಾಯಗಳ ಆಚರಣೆ ಮಾಡಿದ ಸಮುದಾಯಗಳು ಇಲ್ಲಿದ್ದವು. ಆದ್ದರಿಂದ ಈ ಗ್ರಾಮದಲ್ಲಿ ಸಿಖ್ ಸಂಪ್ರದಾಯದ ಆಚರಣೆಗಳ ಪ್ರಭಾವ ಬೀರಿತ್ತೆಂದು ಹೇಳಬಹುದು. ಅಲ್ಲದೇ ಈ ಗ್ರಾಮದಲ್ಲಿ ಹಿಂದೆ ದೇಸಾಯಿ, ಮರಾಠ, ಬಂಜಾರ ಸಂಸ್ಕೃತಿಯ ಛಾಯೆಗಳು ಮೂಡಿದ್ದ ಬಗ್ಗೆ ಚರಿತ್ರೆಯಿಂದ ತಿಳಿದುಬರುತ್ತದೆ. ಇಂದು ಮರಾಠ ಮತ್ತು ದೇಸಾಯಿ ಕೆಲವು ಮನೆತನಗಳಿವೆ. ಆದರೆ ಬಂಜಾರ ಸಮುದಾಯದ ಮನೆಗಳಿಲ್ಲ.
ಹಿಂದಿನ ಕಾಲದಲ್ಲಿ ಈ ಬಹದ್ದೂರುಬಂಡಿಯು ಬಂಜಾರ ಸಮುದಾಯದ ಬಹಳ ಪವಿತ್ರ ಮತ್ತು ಶ್ರದ್ಧಾ ಕೇಂದ್ರವಾಗಿತ್ತು. ಬಂಜಾರ ಸಮುದಾಯದ ಪವಿತ್ರ ಕ್ಷೇತ್ರವಾಗಿದ್ದರೂ ಸಹ ಇಂದು ಅವರ ಒಂದೂ ಮನೆತನವಿಲ್ಲದ್ದು ಆಶ್ಚರ್ಯವೇ ಸರಿ. ಅದರ ಕುರಿತು ಒಂದಿಷ್ಟು ಚಾರಿತ್ರಿಕ ಮಾತುಗಳನ್ನು ಇಲ್ಲಿ ನೋಡಲಾಗಿದೆ. ಈ ಬಂಜಾರ ಸಮುದಾಯ ಇಲ್ಲಿಗೆ ಬರಲು ಕಾರಣವೆನು ಮತ್ತು ಇಲ್ಲಿ ಅವರ ಆಚರಣೆಗಳಾವುವು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ಬಂಜಾರ ಸಮುದಾಯವನ್ನು ಲಂಬಾಣಿ, ಲಮಾಣಿ, ಲಮ್ಮಾಣಿ, ಲಂಬಾಡಿ, ಸುಕಾಲಿ, ಕಾಂಶಿಯಾ, ಗೋರ್‌ಮಾಟ್ ಎಂಬ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಈ ಸಮುದಾಯದ ಒಳಗೆ ರಾಠೋಡ್(ಭುಕ್ಯಾ)ದಲ್ಲಿ ೨೭ ಪಂಗಡಗಳು, ಪವಾರ್‌ದಲ್ಲಿ ೧೨ ಪಂಗಡಗಳು, ವಾಡತ್ಯಾ(ಜಾದವ್)ದಲ್ಲಿ ೫೨ ಪಂಗಡಗಳು, ಚವ್ಹಾಣ್‌ದಲ್ಲಿ ೬ ಪಂಗಡಗಳು ಹಾಗೂ ಬಾಣ್ಣೋತ್‌ದಲ್ಲಿ ೧೫ ಪಂಗಡ ಇತ್ಯಾದಿ ಸುಮಾರು ೧೧೨ಕ್ಕೂ ಅಧಿಕ ಒಳಪಂಗಡಗಳಿವೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಜಾತ್ ಮತ್ತು ಭುಕ್ಯಾ ಎಂಬ ಎರಡು ಮುಖ್ಯವಾದ ಪಂಗಡಗಳಿವೆ. ಒಂದು ಪಂಗಡದವರು ಅದೇ ಪಂಗಡದವರೊಳಗೆ ಪರಸ್ಪರ ಮದುವೆಯಾಗುವುದಿಲ್ಲ. ಅವರು ಪರಸ್ಪರ ಸಹೋದರ-ಸಹೋದರಿಯರಂತೆ ಭಾವಿಸುತ್ತಾರೆ. ಇವರ ಮೂಲ ಉತ್ತರ ಭಾರತದ ರಾಜಸ್ಥಾನದಿಂದ ಬಂದವರೆಂದು ಹೇಳಿದರೂ ಅದಕ್ಕಿಂತ ಪೂರ್ವದಲ್ಲಿ ಅಫಘಾನಿಸ್ಥಾನದಿಂದ ಬಂದವರೆಂದು ಹೇಳಲಾಗುತ್ತಿದೆ. ಇವರ ಮೂಲ ವೃತ್ತಿ ವ್ಯಾಪಾರವಾಗಿದ್ದರೂ ಅಲೆಮಾರಿ ಬದುಕಾಗಿತ್ತು. ವ್ಯಾಪಾರಕ್ಕಾಗಿ ಬೇರೆ-ಬೇರೆ ಪ್ರದೇಶಗಳಿಗೆ ತೆರಳುತ್ತಿದ್ದರೆಂದು ಹೇಳಲಾಗುತ್ತಿದೆ.
ಈ ಬಂಜಾರ ಸಮುದಾಯದ ಮೂಲ ಪುರಾಣಗಳಲ್ಲಿಯೂ ತಳುಕುಹಾಕಿಕೊಂಡಿದೆ. ಇವರು ಶ್ರೀ ಕೃಷ್ಣನ ಕಾಲದಲ್ಲಿ ಗೋವು ಕಾಯುವ ಮತ್ತು ಅವುಗಳ ರಕ್ಷಿಸುವ ಕಾಯಕ ಮಾಡುತ್ತಿದ್ದರು. ಹೀಗಾಗಿ ಇವರನ್ನು ರಾಧೆದಾದಿ, ರಾತಿದಾದ ಎಂದು ಕರೆಯಲಾಗುತ್ತಿದೆ. ಅಂದರೆ ರಾಧೆಗೆ ಪ್ರಿಯವಾದವರು, ರಾಧೆಗೆ ಪ್ರಿಯನಾದ ಕೃಷ್ಣನ ಜನ, ಕೃಷ್ಣನಿಗೆ ಪ್ರಿಯವಾದ ಆಕಳು ಕಾಯುವ ಜನ ಇವರಾಗಿದ್ದರೆಂದು ತಿಳಿಸುತ್ತದೆ.
ಇವರು ಉತ್ತರದಲ್ಲಿ ಶಿಖ್ ಧರ್ಮದ ಸಂಪ್ರದಾಯದ ಆಚರಣೆಗಳನ್ನು ಮಾಡಿದರೆ, ದಕ್ಷಿಣದಲ್ಲಿ ತಿರುಪತಿ ತಿಮ್ಮಪ್ಪನ ಆರಾಧನೆಯನ್ನು ಮಾಡುತ್ತಾರೆ. ಈ ಬಂಜಾರ ಸಮುದಾಯದಲ್ಲಿ ‘ಆತಿರಾಮ್ ಬಾವಾಜಿ’ ಎಂಬ ಪವಾಡ ಪುರುಷರಿದ್ದರು. ಇವರು ತಿರುಪತಿ ತಿಮ್ಮಪ್ಪನ ಪರಮ ಭಕ್ತರು. ಈತನ ಭಕ್ತಿಗೆ ಮೆಚ್ಚಿ ಒಮ್ಮೆ ತಿರುಪತಿ ತಿಮ್ಮಪ್ಪನ ದರ್ಶನವಾಯಿತೆಂದು ಹೇಳಲಾಗುತ್ತಿದೆ. ಹೀಗಾಗಿ ‘ಆತಿರಾಮ್ ಬಾವಾಜಿ’ಯಿಂದಲೇ ತಿಮ್ಮಪ್ಪನ ಮೊದಲ ಪೂಜೆ ಪ್ರಾರಂಭವಾಯಿತೆಂದು ಹೇಳಲಾಗುತ್ತಿದೆ.
ಇನ್ನು ಪುರಾಣ ಕಾಲದಿಂದ ಇತಿಹಾಸ ಕಾಲಕ್ಕೆ ಬಂದಾಗ ಇವರ ಮೂಲ ವೃತ್ತಿ ವ್ಯಾಪಾರವಾಗಿತ್ತು. ವೃತ್ತಿ ಮಾಡುತ್ತಾ ಬೇರೆ-ಬೇರೆ ಪ್ರದೇಶಗಳಿಗೆ ತೆರಳುತ್ತಿದ್ದರು. ಉತ್ತರದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಸೈನಿಕರಿಗೆ ಮತ್ತು ನಗರದ ಮಾರುಕಟ್ಟೆಗಳಿಗೆ ದವಸ-ಧಾನ್ಯ, ಸರಕು ಮತ್ತು ಆಯುಧ ಸಲಕರಣೆಗಳನ್ನು ಸಾಗಿಸಲು ಈ ಸಮುದಾಯವನ್ನು ಉಪಯೋಗಿಸುತ್ತಿದ್ದನು. ಹೀಗಾಗಿ ಉತ್ತರದಲ್ಲಿದ್ದ ಬಂಜಾರ ಸಮುದಾಯ ಕೆಲವರು ದಕ್ಷಿಣಕ್ಕೆ ವಲಸೆ ಬಂದರೆ ಇನ್ನು ಕೆಲವರು ಅಲ್ಲಿಯೇ ಉಳಿದರು. ನಂತರ ಔರಂಗಜೇಬನ ಕಾಲದಲ್ಲಿಯೂ ಸಹ ಭಾರತದ ದಕ್ಷಿಣಕ್ಕೆ ವ್ಯಾಪಾರಕ್ಕಾಗಿ ಕಳುಹಿಸಿದನು. ಹೀಗಾಗಿ ಬಂಜಾರ ಸಮುದಾಯವು ದೇಶದ ನಾನಾ ಭಾಗಗಳಿಗೆ ವ್ಯಾಪಾರಕ್ಕಾಗಿ ಬಂದರು. ನಂತರ ಬ್ರಿಟಿಷರ ಕಾಲದಲ್ಲಿಯೂ ಸಹ ಇವರ ವ್ಯಾಪಾರ ಮುಂದುವರೆಯಿತು. ಅವರಿಗೆ ಬೇಕಾದ ಅಡುಗೆ ಸಾಮಾನು, ಆಯುಧ, ಸಲಕರಣೆ ಮುಂತಾದ ಸರಕುಗಳ ಪೂರೈಕೆಯಲ್ಲಿ ತೊಡಗಿದರು. ಮುಖ್ಯವಾಗಿ ಈ ಸಮುದಾಯಕ್ಕೆ ಲಂಬಾಣಿ ಅಥವಾ ಲಮಾಣಿ ಎಂದು ಹೆಸರು ಬರಲು ಅವರು ಮಾಡುತ್ತಿದ್ದ ಲವಣದ(ಉಪ್ಪು) ವ್ಯಾಪಾರದಿಂದಾಗಿ ಇವರನ್ನು ಲಂಬಾಣಿ ಎಂದು ಕರೆಯಲಾಗುತ್ತಿದೆ. ಬ್ರಿಟಿಷರು ಇವರನ್ನು ‘ಜಿಪ್ಸಿ’ಗಳೆಂದು ಕರೆಯುತ್ತಿದ್ದರು.
ಈ ಬಂಜಾರ ಸಮುದಾಯವು ಮೊಘಲ್ ಸಾಮ್ರಾಜ್ಯದ ಅವನತಿಯ ನಂತರ ಬದುಕು ಅತಂತ್ರವಾಯಿತು. ಉತ್ತರದಿಂದ ದಕ್ಷಿಣಕ್ಕೆ ವಲಸೆ ಬರಲು ಪ್ರಾರಂಭಿಸಿದರು. ಮುಖ್ಯವಾಗಿ ಬ್ರಿಟಿಷರು ಸರಕುಗಳ ಸಾಗಾಣಿಕೆಗಾಗಿ ರೇಲ್ವೆ ಸಂಪರ್ಕ ಸಾಧಿಸಿದರು. ಇದರಿಂದಾಗಿ ಅವರ ವ್ಯಾಪಾರ ಕುಂಟಿತವಾಯಿತು. ಸ್ವಾತಂತ್ರ ಚಳುವಳಿ ಕಾರಣದಿಂದಾಗಿ ಬ್ರಿಟಿಷರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವವರ ಮೇಲೆ ಬಿಗಿ ಧೋರಣೆಯ ಕಾನೂನುಗಳನ್ನು ಜಾರಿಗೆ ತಂದರು. ಇವರು ಇಂತಿಷ್ಟು ಸಮಯದಲ್ಲಿ ತಲುಪಬೇಕೇಂದು ಆಜ್ಞೆ ತಂದು, ಅವರಿಗೆ ಪಾಸ್‌ಗಳನ್ನು ವಿತರಿಸಿ ನಿಗಧಿತ ಸಮಯದಲ್ಲಿ ತಲುಪದಿದ್ದರೆ ತೊಂದರೆ ಕೊಡಲು ಪ್ರಾರಂಭಿಸಿದರು. ಈ ಸಮುದಾಯಕ್ಕೆ ಅಲ್ಲಲ್ಲಿ ತಪಾಸಣೆಯ ನೆಪದಲ್ಲಿ ತೊಂದರೆ ಕೊಟ್ಟರು. ಅವರ ವ್ಯಾಪಾರದ ಮೇಲೆ ನಿರ್ಬಂಧ ಹೇರಿದರು. ಮತ್ತು ಇವರ ಸ್ತ್ರೀಯರ ಮೇಲೂ ಸಹ ದಬ್ಬಾಳಿಕೆಗಳು ನಡೆದವು. ಹೀಗಾಗಿ ಇವರು ಬದುಕು ನಡೆಸಲು ಬೇರೆ-ಬೇರೆ ಪ್ರದೇಶಗಳಿಗೆ ತೆರಳಬೇಕಾಯಿತು. ದಕ್ಷಿಣದ ಬೇರೆ-ಬೇರೆ ರಾಜ್ಯಗಳಿಗೆ ಬಂದು ನೆಲೆಸಿದಂತೆ ಕರ್ನಾಟಕಕ್ಕೆಬಂದು ನೆಲೆಸಿದರು. ಕರ್ನಾಟಕದ ರಾಯಚೂರು, ಕೊಪ್ಪಳ ಪ್ರದೇಶದ ಕೊಪ್ಪಳ, ಪುಲಿಕೆರೆ, ಮಳಿಮಲ್ಲಪ್ಪನ ಗುಡ್ಡಗಳಲ್ಲಿ ಈ ಸಮುದಾಯದವರು ವಾಸಿಸಲು ಶುರುಮಾಡಿದರೆಂದು ಹೇಳಲಾಗುತ್ತಿದೆ.
ತಾವು ಒಂದು ಕಡೆ ನೆಲೆ ನಿಲ್ಲಬೇಕು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ತಮ್ಮ ವ್ಯಾಪಾರ ಪುನಶ್ಛೇತನಗೊಳ್ಳುವಂತೆ ಮಾಡಬೇಕು. ಹೀಗಾಗಿ ಒಂದೆಡೆ ಸಭೆಸೇರಿ ತಮ್ಮ ಕಷ್ಟ, ಸುಖ, ದುಃಖ, ತಾಪತ್ರೆಯಗಳನ್ನು ಚರ್ಚಿಸುವ, ಸಮಾಲೋಚಿಸುವ ವಿಚಾರ ಮಾಡಿದರು. ಅದರಂತೆ ದಕ್ಷಿಣದಲ್ಲಿ ಕೊಪ್ಪಳ ಗಡದ ಹತ್ತಿರವಿರುವ ಬಹದ್ದೂರುಬಂಡಿ ಗ್ರಾಮದಲ್ಲಿ ಮೀಟುಭುಕ್ಯಾ ಮುಂದಾಳತ್ವದಲ್ಲಿ ಸಮಾವೇಶಗೊಳ್ಳುವ ನಿರ್ಣಯ ಮಾಡಿದರು. ಮೀಟುಭುಕ್ಯಾ ಇವರೊಬ್ಬ ಸಾಂಸ್ಕೃತಿಕ ನಾಯಕ. ಇವರು ಮೂಲತಃ ಬಳ್ಳಾರಿಯ ಹತ್ತಿರವಿರುವ ಗುತ್ತಿಯವರು. ಮತ್ತು ಸ್ವಾತಂತ್ರ ಹೋರಾಟಗಾರರೂ ಹೌದು. ಇವರ ಕುರಿತು ಅನೇಕ ಜನಪದ ಕಾವ್ಯ-ಕಥೆಗಳು ಬಂದಿದ್ದರೂ ಸಹ ಇನ್ನೂ ಚರ್ಚೆಗಳು ನಡೆಯುತ್ತಿವೆ. ಹೋಲಿ ಹಬ್ಬದ ಮುನ್ನಾದಿನ ದಿನಾಂಕ ೦೪-೦೩-೧೮೫೭ರಂದು ‘ಕೊಪ್ಪಳ ಗಡದ ಬಹದ್ದೂರುಬಂಡ ಅಖಿಲ ಭಾರತ ಬಂಜಾರ ಸಮಾವೇಶ’ ಮಾಡಲು ನಿರ್ಧರಿಸಿದರು. ಅದರ ಪ್ರಯತ್ನವೇ ಈ ‘ಬಹದ್ದೂರುಬಂಡಿಯ ಬಂಜಾರ ಹೋಳಿ ಉತ್ಸವ’ವಾಗಿದೆ. ಇದು ಅಧೀಕೃತವಾಗಿ ದಾಖಲಿತ ಮೊದಲ ಸಮಾವೇಶವಾಗಿದೆ. ಆದರೆ ಇದಕ್ಕಿಂತಲೂ ಮೊದಲು ಇಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನಗೆ ಲಭ್ಯವಿಲ್ಲ.
ಬಂಜಾರ ಸಮುದಾಯ ಈ ಬಹದ್ದೂರುಬಂಡಿ ಗ್ರಾಮದಲ್ಲೇ ಯಾಕ ಸಭೆ ಸೇರಲು ಪ್ರಯತ್ನಿಸಿದರು? ಇದಕ್ಕಿಂತ ಮೊದಲು ಇಲ್ಲಿ ಬಂಜಾರ ಸಮುದಾಯ ಇತ್ತೇ? ಈ ಮೊದಲು ಇಲ್ಲಿ ಸಮುದಾಯದ ಸಮಾವೇಶಗಳು ನಡೆದಿರಲಿಲ್ಲವೇ? ಇಂತಹ ಅನೇಕ ಪ್ರಶ್ನೆಗಳನ್ನು ಕೆದಕಿದಾಗ ಸಿಕ್ಕ ಉತ್ತರಗಳನ್ನು ಈ ರೀತಿಯಲ್ಲಿ ಕಂಡುಕೊಳ್ಳಬಹುದೇನೋ.
ಬಹುಶಃ ಈ ಗ್ರಾಮದಲ್ಲಿ ಮೊದಲೇ ಬಂಜಾರ ಸಮುದಾಯ ಬಹಳ ಇದ್ದಿರಬೇಕು. ಅದಕ್ಕಾಗಿ ಇಲ್ಲಿ ಸಭೆ ಸೇರಲು ನಿರ್ಣಯಿಸಿರಬೇಕು. ಅದಕ್ಕಿಂತ ಮುಖ್ಯವಾಗಿ ಈ ಗ್ರಾಮದಲ್ಲಿರುವ ‘ಆತಿರಾಮ್ ಬಾವಾಜಿ ಕಟ್ಟೆ’. ಇದರ ನಿರ್ಮಾಣ ಮತ್ತು ಕಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ. ಈ ಕಟ್ಟೆಯು ಸುಮಾರು ೩-೪ ಅಡಿ ಎತ್ತರ ಹಾಗೂ ೫೦-೬೦ ಅಡಿ ಉದ್ದ ಮತ್ತು ಅಗಲ ಇರಬಹುದು. ಇದು ಅಧಿಷ್ಠಾನದಂತೆ ಇದ್ದು ಮೇಲೆ ಯಾವುದೇ ರೀತಿಯ ಕಟ್ಟಡವಿಲ್ಲ. ಅದರ ಮೇಲೆ ಒಂದು ಚಿಕ್ಕ ಕಟ್ಟೆಯಿದ್ದು ಅದರ ಮೇಲೆ ಪಾದುಕೆಗಳನ್ನು ಕೆತ್ತಲಾಗಿದೆ. ಈ ಕಟ್ಟೆಯ ಸುತ್ತಲೂ ಶಿಲ್ಪಗಳನ್ನು ಕೆತ್ತಲಾಗಿದೆ. ಅದರಲ್ಲಿ ಆತಿರಾಮ್ ಬಾವಾಜಿ ತಪಸ್ಸಿಗೆ ಕುಳಿತ ಮತ್ತು ನಿಂತ ಭಂಗಿ, ಗೋವುಗಳು ಕರುಗಳಿಗೆ ಹಾಲುಣಿಸುವ, ಸೂರ್ಯ, ಚಂದ್ರ, ಪುಷ್ಪದಳ, ಆಂಜನೆಯ, ನವಿಲು, ಆನೆ, ಕುದುರೆ, ಗೂಳಿ, ಗಂಡಭೇರುಂಡ, ಹುಕ್ಕಾ ಸೇದುವ, ಯದ್ಧದಲ್ಲಿ ನಿರತ ಯೋಧರ ಶಿಲ್ಪಗಳು ಮತ್ತು ಶ್ರೀ ಕೃಷ್ಣನ ದಶವತಾರಗಳಾದ ಕೂರ್ಮವತಾರ ಹಾಗೂ ನರಸಿಂಹವತಾರದ ಶಿಲ್ಪಗಳನ್ನು ಕಾಣಬಹುದು. ಇದು ಪುರಾತನ ಕಾಲದಿಂದಲೂ ಇದ್ದ ಕಟ್ಟೆ, ಇಲ್ಲಿ ಆತಿರಾಮ್ ಬಾವಾಜಿಯವರು ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳಲಾಗುತ್ತಿದೆ. ಈ ಕಟ್ಟೆಯ ನಿರ್ಮಾಣದ ವಾಸ್ತುಶಿಲ್ಪವನ್ನು ಗಮನಿಸಿದರೆ ಇದು ವಿಜಯನಗರ ಕಾಲದ್ದಾಗಿರಬೇಕೆಂದೆನಿಸುತ್ತದೆ. ಆದ್ದರಿಂದ ಇದನ್ನು ಬಂಜಾರ ಸಮುದಾಯ ಪವಿತ್ರವಾದ ಸ್ಥಳ ಮತ್ತು ಬಂಜಾರ ಸಮುದಾಯದ ಕಾಶಿ ಎಂತಲೂ ಕರೆಯುತ್ತಾರೆ. ಅದಕ್ಕಾಗಿ ಇಂತಹ ಪವಿತ್ರ ಸ್ಥಳದಲ್ಲಿ ಈ ಸಮುದಾಯ ಸಭೆ ಸೇರಿರಬಹುದೆಂದು ಅನಿಸುತ್ತದೆ.
ಇಲ್ಲಿ ಮೀಟುಭುಕ್ಯಾ ಮತ್ತು ಇತರ ನಾಯಕರು ನಡೆಸುವ ಸಮಾವೇಶಕ್ಕಿಂತಲೂ ಮೊದಲೇ ಅಂದರೆ ದಿನಾಂಕ ೦೪-೦೩-೧೮೫೭ರಂದು ಸಭೆ ಸೇರುವ ಮೊದಲೇ ಇದು ಬಂಜಾರರ ಶ್ರದ್ಧಾ ಕೇಂದ್ರವಾಗಿತ್ತು. ಸಂತ ಸೇವಾಲಾಲ್‌ರಂತಹ ಮಹಾತ್ಮರ ನೇತೃತ್ವದಲ್ಲಿ ಈ ಬಹದ್ದೂರುಬಂಡಿಯಲ್ಲಿ ಅನೇಕ ಸಮಾವೇಶಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಸರಿಯಾದ ದಾಖಲೆಗಳು ಲಭ್ಯವಿಲ್ಲ. ಬಹುಶಃ ಅದರ ಮುಂದಿನ ಸಮಾವೇಶಗಳು ಎನ್ನುವಂತೆ ೧೮೫೭ರಲ್ಲಿ ಇಲ್ಲಿ ಅಖಿಲ ಭಾರತ ಬಂಜಾರ ಸಮಾವೇಶ ನಡೆದಿರಬಹುದು.
ಅದರಂತೆ ಬಂಜಾರ ಸಮುದಾಯವು ದಿನಾಂಕ ೦೪-೦೩-೧೮೫೭ರಂದು ಬಹದ್ದೂರುಬಂಡಿ ಗ್ರಾಮದಲ್ಲಿ ಸಭೆ ಸೇರಿದರು. ಅಲ್ಲಿ ಸಮುದಾಯಕ್ಕೆ, ಸಂಸ್ಥಾಧಿಕಾರಿಗಳಿಗೆ, ಮುಖಂಡರಿಗೆ, ಸಂಘಟನೆಗಳಿಗೆ, ಗುರುಗಳಿಗೆ ಸೇರಲು ತಿಳಿಸಿದರು. ಅದರಂತೆ ಅಲ್ಲಿ ಎಲ್ಲರೂ ಒಂದೆಡೆ ಸೇರಿದರು. ಆನೆ, ಕುದುರೆ, ಗೂಳಿ, ಬಂಡಿಗಳ ಮೂಲಕ ಸಾವಿರಾರು ಜನ ಸೇರಹತ್ತಿದರು. ಅವರ ಆಗಮನವನ್ನು ಕಂಡ ಜನ ಆಶ್ಚರ್ಯಪಟ್ಟರು. ಅವರನ್ನು ತಡೆಯುವ ಶಕ್ತಿ ನಿಜಾಮ ಸೈನ್ಯ ಅಥವಾ ಬ್ರಿಟಿಷ ಸೈನ್ಯಕ್ಕೆ ಇರಲಿಲ್ಲ. ಈ ಉತ್ಸವದ ಸುದ್ದಿ ನಿಜಾಮನಿಗೆ ತಲುಪಿತು. ಆದರೆ ಅಲ್ಲಿ ಸೇರಿರುವ ಜನರ ಹೆಚ್ಚಿನ ಸಂಖ್ಯೆಯ ಪರಿಣಾಮದಿಂದ ಏನೂ ಮಾಡದಾದರು. ಅಲ್ಲಲ್ಲಿ ಟೆಂಟ್‌ಗಳಲ್ಲಿ ಸೇರಿದರು. ಸುಮಾರು ೩೮ ಎಕರೆ ಜಾಗದಲ್ಲಿ ಸೇರಿದ್ದರೆಂದು ಹೇಳಲಾಗುತ್ತಿದೆ.
ಆ ಸಭೆಯಲ್ಲಿ ಅನೇಕರು ತಮ್ಮ ಕಷ್ಟ-ನೋವುಗಳ ಕುರಿತು ಭಾಷಣ ಮಾಡಿದರು. ನಾವು ಭಾರತವನ್ನಾಳಿದ್ದೇವೆ, ಆದರೆ ಇಂದು ನಮಗೆ ಆಪತ್ತು ಬಂದೊದಗಿದೆ. ನಾವು ಅತಂತ್ರದಲ್ಲಿದ್ದೇವೆ, ನಮ್ಮ ಅಸ್ತಿತ್ವಕ್ಕಾಗಿ ವನವಾಸವನ್ನು ಅನುಭವಿಸುತ್ತಿದ್ದೇವೆ. ಆಸ್ತಿ-ಪಾಸ್ತಿ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಮ್ಮ ಸಮುದಾಯದವರು ಬ್ರಿಟಿಷರ ಬಂದೂಕುಗಳಿಗೆ ಬಲಿಯಾಗುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ನಡೆಯುತ್ತಿದೆ. ಇವೆಲ್ಲವುಗಳಿಗೆ ಇಲ್ಲಿ ಪರಿಹಾರಕಂಡುಕೊಳ್ಳಬೇಕಿದೆ ಎಂದು ಅಲ್ಲಿದ್ದ ಹಿರಿಯರು ಭಾಷಣ ಮಾಡಿದರು.
ಇಂತಹ ಕಷ್ಟಗಳ ಮೆಟ್ಟಿ ನಿಲ್ಲಬೇಕಿದೆ, ಅದರ ವಿರುದ್ಧ ಹೋರಾಡಬೇಕಿದೆ. ಸಮುದಾಯದೊಳಗೆ ಒಡಕು ಮೂಡದಂತೆ ನೋಡಿಕೊಳ್ಳಬೇಕಿದೆ. ನಾವು ಒಂದೆಡೆ ನಿಲ್ಲುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ನೆಲೆ ನಿಂತ ಆ ತಂಡಗಳಿಗೆ ನಂಗರ್, ತಾಂಡ, ತಾಂಡ್ಯ ಎಂದು ಕರೆಯಬೇಕು. ಅಲ್ಲಿ ಸರಕಾರಿ ಜಾಗೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು, ಪಶುಗಳಿಗೆ ಮೇವು, ನೀರು ಒದಗಿಸಬೇಕು. ವೃತ್ತಿಪರ ಕರಕುಶಲತೆಗಳನ್ನು ಕಲ್ಪಿಸಬೇಕು, ನ್ಯಾಯ ಅನ್ಯಾಯಗಳ ಚರ್ಚೆಗಳು ನಡೆಯಬೇಕು. ಯುಗಾದಿ, ಸೀತ್ಲಾ ವಿಜಯ ದಶಮಿ, ದೀಪಾವಳಿ, ಹೋಳಿ, ನಾಗರಪಂಚಮಿ, ದಸರಾವ್, ತಿಜೆ ಹಬ್ಬಗಳ ಆಚರಣೆ, ಅಮವಾಸೆ, ಹುಣ್ಣಿಮೆ, ಬಾಲಾಜಿರ್ ಭೋಗ್, ಹನುವಾಸಿರೋ ಭೋಗ್ ಜೊತೆಗೆ ಗ್ರಾಮ ದೇವತೆಗಳಾದ ಮಾರೆಮ್ಮ, ದುರುಗಮ್ಮ, ಪೆದ್ದಮ್ಮ, ಕಾಳಿಮಾತಾ, ಚೌಡೇಶ್ವರಿ ಶಕ್ತಿ ಪೂಜೆ ಆರಾಧನೆಗಳ ಮಾಡಬೇಕೆಂದು ನಿರ್ಣಯಿಸಿದರು.
ಈ ಸಮಾವೇಶದಲ್ಲಿ ನಿಜಾಮ ಅಧಿಕಾರಗಳಾದ ಜಂಗಿ-ಭಂಗಿಯವರೂ ಸಹ ಭಾಗವಹಿಸಿದ್ದರು. ಇವರು ಆಕಳುಗಳ ವ್ಯಾಪಾರಸ್ಥರಾಗಿದ್ದರೂ ವಿಶೇಷವಾಗಿ ಗೋಪಾಲಕರಾಗಿದ್ದು, ಗೋವುಗಳ ಸಂರಕ್ಷಕರೆಂದು ಗುರಿತಿಸಿಕೊಂಡಿದ್ದರೆಂದು ಹೇಳಲಾಗುತ್ತಿದೆ. ಇವರುಗಳಲ್ಲದೇ ಸೋಮನಾಯಕ್, ಹರ್ಜಿಸದ್ ಭೀಮನಾಯ್ಕ, ಲೋಕ ಮಸಂದ್, ನರಶಿಂಗ ಬಾಣಾವತ್, ಸೇವಾ ಸಮಂದ್, ಮೀಟುಭುಕ್ಯಾ, ರಾಜು ಪೂರಾ ನಾಯಕ್, ಸದಮಲ್, ಸೇರಾವತ್, ವಣ ಸೇನಾಯಕ್, ಧನಸಿಂಗ್ ಭಟ್, ಧನರಾಜ್ ಮಧುರ, ಮಾನ್ಯ ಝರ್‍ಪಲ, ಜಯಸಿಂಗ್ ಮಹಾರಾಜ್, ಮಂಜಾಖೋಲಾ, ರಾಣು ರಾಠೋಡ್, ಕನಿರಾ ಪವಾರ್ ಹೂನಾ ರಾಠೋಡ್ ರಾಂಜಿ, ರಾತ್ಲಾ ಬಾಣ್ಣೋತ್, ಸಂಗ್ಯ ಧೊಂದಾ ವಡಿತ್ಯ, ಮೂನಾ ಮಾಳವತ್, ಮಾಳ್ವರಾಜ್, ಸ್ತ್ರೀಯರು ಕಾಮಾನಾಯಕಣಿ ರೂಪ್ಲಿ ನಾಯಕಿಣಿ, ಲಕ್ಷ್ಮೀಬಾಯಿ ಬಾನ್‌ಮತ್, ಹಂಕಡಿ ಅಡುಗೆಯವರು ಮುಂತಾದ ನಾಯಕರು ಅಲ್ಲಿ ಭಾಗವಹಿದ್ದರೆಂದು ಬಂಜಾರರ ಹಾಡುಗಳ ಮೂಲಕ ತಿಳಿದುಬರುತ್ತದೆ. ಅಂದು ಸಮಾಭಂಗಿ ಭುಕ್ಯಾ, ಕೇಶಾಜಂಗಿ, ಮೀಟುಭುಕ್ಯಾ ಮುಂತಾದವರು ತಮ್ಮ ಅನುಭವದ ಜೊತೆಗೆ ತಮ್ಮ ಸಮಾಜದ ಮೇಲೆ ನಡೆದ ದೌರ್ಜನ್ಯ, ದಬ್ಬಾಳಿಕೆಗಳನ್ನು ವಿವರಿಸಿದರು. ಇದಾದ ನಂತರ ಈ ಸಮುದಾಯ ತಮ್ಮ-ತಮ್ಮ ಗ್ರಾಮಗಳಿಗೆ ತೆರಳಿದರೆಂದು ಹೇಳಲಾಗುತ್ತಿದೆ.
ಇದಾದ ನಂತರ ಈ ಬಹದ್ದೂರುಬಂಡಿ ಗ್ರಾಮದಲ್ಲಿ ಪ್ರತಿ ವರ್ಷ ಹೋಳಿ ಮುನ್ನಾ ದಿನ ಅಲ್ಲಿ ಇಂದಿಗೂ ಸಹ ಬಂಜಾರ ಸಮುದಾಯದವರು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ರಾತ್ರಿ ಭೋಗ(ಹೋಮ) ನಡೆಸಲಾಗುತ್ತದೆ. ಇಡೀ ರಾತ್ರಿ ವೇದಿಕೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ದೇಶದ ಬೇರೆ-ಬೇರೆ ಭಾಗಗಳಿಂದ ಬಂದ ವಿದ್ವಾಂಸರಿಂದ ಉಪನ್ಯಾಸ, ಚರ್ಚೆಗಳನ್ನು ನಡೆಸಲಾಗುತ್ತದೆ. ಜೊತೆಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ನಂತರ ತಮ್ಮ ಸಂಪ್ರಾದಾಯದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನಂತರ ಬೆಳಿಗ್ಗೆ ೪-೩೦ಕ್ಕೆ ಕಾಮದಹನ ಮಾಡಲಾಗುತ್ತದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಎಲ್ಲಾ ಕಡೆಗಳಲ್ಲಿ ಒಂದು ಕಾಮನನ್ನು ದಹನ ಮಾಡಿದರೆ ಇಲ್ಲಿ ಎರಡು ಕಾಮದಹನ ಮಾಡುತ್ತಾರೆ. ಇದು ಬಹಳ ವಿಶೇಷ. ನಂತರ ದಹನದ ಬೂದಿ(ಬಬುತರ) ತೆಗೆದುಕೊಂಡು ತಮ್ಮ-ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಬಬುತರ ತೆಗೆದುಕೊಂಡು ಹೋದರೆ ಒಳ್ಳೆಯದು ಎಂದು ಭಾವಿಸಿದ್ದಾರೆ. ಆ ಬೂದಿಯನ್ನು ಹಿರಿಯರ ಹಣೆಗೆ ಹಚ್ಚಿ ಮುಂದಿನ ಹಬ್ಬದವರೆಗೆ ಇರುವರೋ ಇಲ್ಲವೋ ಎಂದು ಅವರ ಕಾಲಿಗೆ ನಮಸ್ಕರಿಸುತ್ತಾರೆ. ನಂತರ ತಮ್ಮ ಊರುಗಳಲ್ಲಿ ಹೋಳಿಯ ಬಣ್ಣ ಆಡುವುದು, ಬೇಟೆ ಮಾಡಿ ಮಾಂಸದ ಊಟ ಮಾಡುತ್ತಾರೆ. ಇದು ಅನೇಕ ವರ್ಷಗಳಿಂದಲೂ ಮುಂದುವರೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಕುಣಿಕೇರಿ ತಾಂಡದ ಭರತ್ ನಾಯ್ಕರವರು ವಿವರಿಸುತ್ತಾರೆ.
ಇಂತಹ ಅಭೂತಪೂರ್ವವಾದ ಸಂಪ್ರದಾಯವನ್ನು ಈ ಬಂಜಾರ ಸಮುದಾಯವು ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದೆ. ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುದುರೆಮೋತಿ ಗ್ರಾಮದಲ್ಲಿಯೂ ಸಹ ಅಲೆಮಾರಿ ಸಮುದಾಯದವರು ಪ್ರತಿ ಮೂರು ವರ್ಷಗಳಿಗೊಮ್ಮೆ ಮೊಹರಂ ಸಂದರ್ಭದಲ್ಲಿ ಸಭೆ ಸೇರಿ ತಮ್ಮ-ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಇಂದು ಆ ಗ್ರಾಮದಲ್ಲಿಯೂ ಸಹ ಅಲೆಮಾರಿ ಸಮುದಾಯದ ಒಂದೂ ಕುಟುಂಬವಿಲ್ಲ. ಬಹದ್ದೂರುಬಂಡಿ ಗ್ರಾಮದಲ್ಲಿ ಬಂಜಾರ ಸಮುದಾಯ ಹೋಳಿ ಮುನ್ನಾ ದಿನ ಸಭೆ ಸೇರಿ, ಸಂಪ್ರದಾಯಗಳ ಆಚರಣೆ ಮಾಡಿ ತಮ್ಮ-ತಮ್ಮ ಗ್ರಾಮಗಳಿಗೆ ತೆರಳುವಂತೆ ಕುದುರೆಮೋತಿ ಗ್ರಾಮದಲ್ಲಿಯೂ ಸಹ ಅದೇ ಪ್ರಕಾರವಾಗಿ ನಡೆಯುತ್ತದೆ. ಹೀಗಾಗಿ ಈ ಎರಡೂ ಗ್ರಾಮಗಳು ಬಹಳ ವಿಶೇಷವೆಂದೇ ಹೇಳಬೇಕು. ಇವುಗಳ ಮಹತ್ವವನ್ನು ಅರಿಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಅವುಗಳ ಚರಿತ್ರೆ ತಿಳಿಸಬೇಕಿದೆ. ಅಂದಾಗ ಮಾತ್ರ ಅವುಗಳಿಗೆ ನಾವು ಬೆಲೆ ಕೊಟ್ಟಂತೆ ಆಗುತ್ತದೆ. ಇಂತಹ ವಿಶಿಷ್ಟ ಸಂಪ್ರಾದಾಯಗಳು ನಮ್ಮ ಕೊಪ್ಪಳ ಪ್ರದೇಶದಲ್ಲಿ ನಡೆಯುವುದು ಹೆಮ್ಮೆಯ ಸಂಗತಿ ಎನ್ನಬಹುದು.
ಆಕರ ಗ್ರಂಥಗಳು;-
೧. ಡಾ.ರಾಜೀವ ನಾಯ್ಕ ಎಸ್., ಬಂಜಾರ ಸಾಂಸ್ಕೃತಿಕ ನಾಯಕ ಮೀಟುಭುಕ್ಯಾ, ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೨೩
೨. ಡಾ.ದೊಡ್ಡನಾಯ್ಕ ಎಸ್., ಬಂಜಾರ ಅಸ್ಮಿತೆ ಸಂತ ಸೇವಾಲಾಲ್, ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೨೩
೩. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ, ಮೇಘನಾ ಪ್ರಕಾಶನ, ಕೊಪ್ಪಳ-೨೦೨೦
೪. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಸ್ಥಳನಾಮ; ಒಂದು ವಿಶ್ಲೇಶಣೆ, ಮೇಘನಾ ಪ್ರಕಾಶನ, ಕೊಪ್ಪಳ-೨೦೨೩
೫. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಚರಿತ್ರೆ ಮತ್ತು ಸಂಸ್ಕೃತಿಯ ಹುಡುಕಾಟ, ಮೇಘನಾ ಪ್ರಕಾಶನ, ಕೊಪ್ಪಳ-೨೦೨೩
೬. ಡಾ.ಸುಜಾತ ಎಸ್. ನೆಟೇಕಲ್, ಕರ್ನಾಟಕದ ಕೋಟೆ ಮತ್ತು ಕೊತ್ತಲಗಳು, ಸೋಮನಾಥ ಪ್ರಕಾಶನ, ಗೊರೇಬಾಳ-೨೦೨೨
೭. ಸಂ,ಎಚ್.ಎಸ್.ಪಾಟೀಲ, ಕೊಪಣಸಿರಿ, ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿ-೨೦೧೨
೮. ಪ್ರೊ.ಶರಣಪ್ಪ ಚವ್ಹಾಣ ಪ್ರಾಧ್ಯಾಪಕರು, ಸಾ||ಕೊಪ್ಪಳ, ಡಾ.ವೆಂಕಟೇಶ ನಾಯ್ಕ, ಪ್ರಾಧ್ಯಾಕರು ಸಾ||ಕೊಪ್ಪಳ, ಭರತ್ ನಾಯ್ಕ, ಸಾ|| ಕುಣಿಕೇರಿತಾಂಡ ಇವರ ಮೌಖಿಕ ಸಂದರ್ಶನ

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
ಇ-mಚಿiಟ: sಞoಣಟಿeಞಚಿಟ@gmಚಿiಟ.ಛಿom <mಚಿiಟಣo:sಞoಣಟಿeಞಚಿಟ@gmಚಿiಟ.ಛಿom>

Get real time updates directly on you device, subscribe now.

Comments are closed.

error: Content is protected !!
%d bloggers like this: