ಬಕ್ರೀದ್ ಹಬ್ಬ: ಶಾಂತಿ ಪಾಲನೆಗೆ ಕ್ರಮವಹಿಸಲು ಸೂಚನೆ
ಕೊಪ್ಪಳ ಜುಲೈ 29ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಹೇಳಿದರು.
ಜೂನ್ 26ರಂದು ಜಿಲ್ಲಾಡಳಿತ ಭವನದಲ್ಲಿನ ಕೇಸ್ವಾನ್ ಹಾಲನಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆಯಬೇಕು. ಚೆಕ್‌ಪೋಸ್ಟಗಳಲ್ಲಿ ಪೊಲೀಸ್ ಹಾಗೂ ಪಶು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಾನುವಾರು ಸಾಗಾಣಿಕೆ ಕಾಯ್ದೆ-2006 ರನ್ವಯ ಅಕ್ರಮವಾಗಿ ಪ್ರಾಣಿಗಳ ಸಾಗಾಣಿಕೆ ನಿಯಮ ಬಾಹಿರವಾಗಿದ್ದು, ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣ ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದ್ದು, ಈ ಕುರಿತು ಸಂಬಂಧಿಸಿದ ತಂಡಗಳು ಸೂಕ್ತ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆ ಎಲ್ಲ ತಾಲೂಕುಗಳಲ್ಲಿ ವಿವಿಧ ಸಮುದಾಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಬೇಕು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಪಿ.ಎಂ.ಮಲ್ಲಯ್ಯ ಅವರು ಮಾತನಾಡಿ, ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960 ಪ್ರಕಾರ ಯಾವುದೇ ಪ್ರಾಣಿಯನ್ನು ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತೀಭಾರ ಹೇರುವುದು, ಚಿತ್ರಹಿಂಸೆ ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ಮಾಲೀಕನಾಗಿ ಅವಶ್ಯಕ ನೀರು, ಆಹಾರ, ನೆಲೆ ಸಕಾಲದಲ್ಲಿ ನೀಡದೇ ಇರುವುದು, ಪ್ರಾಣಿಗಳನ್ನು ಗಾಯಗೊಳಿಸುವುದು, ಕೊಲ್ಲುವುದು, ಪ್ರಾಣಿಗಳ ಕಾದಾಟ ಮಾಡಿಸುವುದು ಇನ್ನಿತರೆ ಪ್ರಾಣಿ ಹಿಂಸೆ ಕೃತ್ಯಗಳನ್ನು ಈ ಕಾಯ್ದೆಯನ್ವಯ ನಿಷೇಧಿಸಲಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದಲ್ಲಿ ದಂಡ ಸಹಿತ 3 ತಿಂಗಳವರೆಗೆ ಕಾರಾಗೃಹ ವಾಸದ ಸಜೆ ಇದೆ. ಕೊಂಬು ಸುಡುವುದು, ಕಸಿಮಾಡುವುದು, ಸಾಮಾಜಿಕ ಕಾರಣಗಳಿಗಾಗಿ ಬೀದಿ ನಾಯಿಗಳನ್ನು ಸೆರೆಹಿಡಿಯುವುದು/ಕೊಲ್ಲುವುದು ಇದಕ್ಕೆ ವಿನಾಯಿತಿ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯಾರಾಣಿ, ಡಿವೈಎಸ್ಪಿ ಶರಣಪ್ಪ ಸುಬೇದಾರ ಸೇರಿದಂತೆ ಪಶು ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.