ಕುಡಿವ ನೀರಿಗೆ ಯಾವ ಕಡೆಗೂ ತೊಂದರೆಯಾಗದಿರಲಿ: ಶಿವರಾಜ ತಂಗಡಗಿ
ಕೊಪ್ಪಳ
ಬೇಸಿಗೆ ಹಿನ್ನೆಲೆಯಲ್ಲಿ ಯಾವುದೇ ಕಡೆಗಳಲ್ಲಿ ಲೋಪವಾಗದ ಹಾಗೆ ಸರಿಯಾದ ರೀತಿಯಲ್ಲಿ
ಜನರಿಗೆ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಮಾರ್ಚ 05 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನಲ್ಲಿನ ಸಮಸ್ಯೆಯ ಬಗ್ಗೆ ಅವರು ಚರ್ಚಿಸಿದರು.
ನೀರು ಸಿಗುವ ಕಡೆಗೆ ಕೊಳವೆಬಾವಿ ಕೊರೆಯಿಸುವ ಹಾಗೂ ನೀರು ಇಲ್ಲದ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯವನ್ನು ಮೂರು ತಿಂಗಳ ಕಾಲ ನಿರಂತರವಾಗಿ, ಯುದ್ದೋಪಾದಿ ರೀತಿಯಲ್ಲಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎಲ್ಲಾ ತಾಲೂಕುಗಳ ತಹಸೀಲ್ ಕಚೇರಿಗಳಲ್ಲಿ ತಾಪಂ ಇಓ ಕಚೇರಿಗಳ ಮುಂದೆ
ಸಹಾಯವಾಣಿ ನಂಬರಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಿ ಕುಡಿವ ನೀರಿಗೆ ಸಂಬಂಧಿಸಿದಂತೆ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಸಚಿವರು ಎಲ್ಲ ತಹಸೀಲ್ದಾರರು ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಮಿತ ಕ್ಷೇತ್ರ ಭೇಟಿ ನೀಡಿ: ತಹಸೀಲ್ದಾರರು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಕಾಲಕಾಲಕ್ಕೆ ಕ್ಷೇತ್ರ ಭೇಟಿ ನಡೆಸಬೇಕು. ಪ್ರತಿ ದಿನ ಎರಡು ಪಂಚಾಯತಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ ಸಮನ್ವಯ ನಡೆಸಿದ ಬಗ್ಗೆ ಡೈರಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲ ಪುರಸಭೆ ಪಟ್ಟಣ ಪಂಚಾಯತ್
ಮುಖ್ಯಾಧಿಕಾರಿಗಳು ಪ್ರತಿ ದಿನ ಎರಡು ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಸ್ಪಂದನೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಪಿಡಿಓಗಳಿಗೆ ಸೂಚನೆ: ಕೆಲವು ಪಿಡಿಓಗಳ ಕಾರ್ಯವೈಖರಿ ಸರಿ ಇಲ್ಲ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು. ವಾಟರಮನ್ ಗಳು ಮತ್ತು ಪಿಡಿಓಗಳು ಸರಿಯಾಗಿ ಕಾರ್ಯನಿರ್ವಹಿಸಿ ಜನತೆಗೆ ಸ್ಪಂದನೆ ನೀಡಬೇಕು ಎಂದರು.
ಕಾರ್ಯ ಹಂಚಿಕೆ: ಬೇಸಿಗೆ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳ ಮೇಲೆ ಬರ ಹಾಗೂ ಕುಡಿವ ನೀರು ಪೂರೈಕೆಯ ವಿಷಯದ ಮೇಲೆ ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಚಿವರು ನಿರ್ದೇಶನ ನೀಡಿದರು.
ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ಮುಂದಿನ 3 ತಿಂಗಳಲ್ಲಿ 151 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಕಾಲಕಾಲಕ್ಕೆ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಕುಡಿಯುವ ನೀರು ಮೇವು ಪೂರೈಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿ ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೇವನ್ನು ಉಚಿತವಾಗಿ ಗ್ಯಾರಂಟಿ ಯೋಜನೆಯಲ್ಲಿ ವಿತರಿಸಿ ದೊಡ್ಡನಗೌಡ ಪಾಟೀಲ್ ತಮಾಷೆ…
ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಶಾಸಕರಾದ ದೊಡ್ಡನಗೌಡ ಪಾಟೀಲ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜನಾರ್ಧನ ರೆಡ್ಡಿ, ಜಿಪಂ ಸಿಇಓ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,
ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗತ್ತಿ ಹಾಗೂ ತಹಸೀಲ್ದಾರರು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Comments are closed.