ಸೌಹಾರ್ದದ ಸೂಫಿ ಭಾವೈಕ್ಯ ಶಕ್ತಿ ಕೇಂದ್ರ ಹಜ್ರತ್ ಮರ್ದಾನೆ ಗೈಬ್ ಉರುಸ್‌

Get real time updates directly on you device, subscribe now.

ಕೊಪ್ಪಳ ನಗರದ ಕೋಟೆಯ ಮಗ್ಗಲು ಬೆಟ್ಟದಲ್ಲಿ ನೆಲೆಸಿರುವ ಕೋಮು, ಸೌಹಾರ್ದದ ಭಾವೈಕ್ಯ ಶಕ್ತಿ ಕೇಂದ್ರಗಳಲ್ಲಿ ಒಂದು ಮರ್ದಾನ್ ಗೈಬ್ ದರ್ಗಾ. ಕೊಪಳ ನಗರದ ಪಶ್ಚಿಮ ದಿಕ್ಕಿಗೆ ಇರುವ ಬೆಟ್ಟದಲ್ಲಿ ಪುರಾತನವಾದ ದರ್ಗಾ ಹಜ್ರತ್ ಮರ್ದಾನೆ ಗೈಬ್ ಎಂಬ ಸೂಫಿಯದು.ಈ ಮಹಾತ್ಮರು ಇಲ್ಲಿ ನೆಲೆಸಿದ್ದ ಕಾಲ ಯಾವುದು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ . ಮರ್ದಾನೆ ಗೈಬ್ ಎಂದರೆ ಇದು ಹೆಸರು ಅಲ್ಲ ಇದು ಆಧ್ಯಾತ್ಮದಲ್ಲಿ ಇರುವ ಒಂದು ಪದವಿ. ಮರ್ದಾನೆ ಗಾಯಬ್ ಎಂದರೆ ಅದೃಶ್ಯನಾಗುವ ಶಕ್ತಿಯುಳ್ಳ ಪುರುಷ ಎಂದು ಮರ್ದಾನೆ ಗೈಬ್ ರ ಮೂಲ ನಾಮ ಯಾವುದು ಎಂಬ ಬಗ್ಗೆಯೂ ತಿಳಿದಿಲ್ಲ . ತಮಿಳುನಾಡಿನ ತಿರಚಿ ಪಟ್ಟದಲ್ಲಿ ಸೈಯ್ಯದ್ ನತಹರುದ್ದೀನ್ ಔಲಿಯಾ ಎಂಬ ಸೂಫಿಯು ನಾಲ್ಕು ನಾಮಗಳಿಂದ ಪ್ರಸಿದ್ದಿ ಪಡೆದಿದ್ದಾರೆ ಎಂಬ ಉಲ್ಲೇಖ ತಿರಚಿ ದರ್ಗಾದಲ್ಲಿ ಸಿಗುತ್ತದೆ. ಆ ನಾಮಗಳು ಸೈಯದ್ ಮುತಹ್ಹರುದ್ದೀನ್ ಔಲಿಯಾ , ತಬ್ಲೆಆಲಮ್ ಬಾದಶಾ , ದಾದಾ ಹಯಾತ್ ಮೀರ್ ಖಲಂದರ್, ಮರ್ದಾನ ಗೈಬ್ ಎಂದು ತಿರುಚಿ ಪಟ್ಟಣದಲ್ಲಿರುವ ಸೂಫಿಯು ಲೋಕ ಸಂಚಾರ ಮಾಡುತ್ತಾ ಕೊಪ್ಪಳಕ್ಕೂ ಆಗಮಿಸಿದ್ದರು. ಇಲ್ಲಿ ಮರ್ದಾನೆ ಗೈಬ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದರು ಎಂದು ಹೇಳಲಾಗುತ್ತದೆ . ಕೊಪ್ಪಳದಲ್ಲಿ ನೆಲೆಸಿದ್ದ ಈ ಮಹಾತ್ಮರು ಇಲ್ಲಿ ತಪಗೈದಿದ್ದರು , ಜನರ ಸೇವೆ ಮಾಡಿದ್ದರು, ಇದ್ದಕ್ಕಿದ್ದಂತೆಯೇ ಒಂದು ಗುಹೆಯಲ್ಲಿ ಒಂದು ಬೃಹತ್ ಬಂಡೆಯು ಸೀಳಿತು , ಅದರಲ್ಲಿ ಅವರು ಅದೃಶ್ಯರಾದರು (ಮಾಯವಾದರು), ಬಹಳ ದಿನಗಳಾದರೂ ಅವರು ಹೊರಗೆ ಬರಲೇ ಇಲ್ಲ . ಅವರು ತಮ್ಮ ತಲೆಗೆ ಸುತ್ತಿದ್ದ ರುಮಾಲಿನ ಒಂದು ಅಂಚು ಮಾತ್ರ ಸೀಳಿದ ಬಂಡೆಯಿಂದ ಹೊರಗೆ ಕಾಣಿಸುತ್ತಿತ್ತು . ಆಗ ಜನರು ಅಲ್ಲಿಯೇ ಅವರು ಸಮಾಧಿ ಹೊಂದಿದರೆಂದು, ಗವಿಯಲ್ಲಿ ಅವರ ಸಮಾಧಿ (ಗೋರಿ) ನಿರ್ಮಿಸಿದರು . ಮುಸ್ಲಿಂ ಸಂಪ್ರದಾಯದಂತೆ ಉತ್ತರ – ದಕ್ಷಿಣವಾಗಿ ಸಮಾಧಿ ನಿರ್ಮಿಸಲಾಯಿತು. ಸಮಾಧಿ ನಿರ್ಮಿಸಿದ ಮರುದಿನ ಬೆಳಿಗ್ಗೆ ನೋಡಲಾಗಿ ಸಮಾಧಿಯು ಪೂರ್ವ-ಪಶ್ಚಿಮವಾಗಿ ತಿರುಗಿತ್ತು. ಇದನ್ನು ನೋಡಿದ ಭಕ್ತರು , ಸಮಾಧಿಯನ್ನು ಉತ್ತರ – ದಕ್ಷಿಣವಾಗಿ ಪುನಃ ನಿರ್ಮಾಣ ಮಾಡಿದರು, ಮತ್ತೆ ಮರುದಿನ ಬೆಳಿಗ್ಗೆ ನೋಡಲಾಗಿ ಸಮಾಧಿಯು ಪೂರ್ವ-ಪಶ್ಚಿಮವಾಗಿ ತಿರುಗಿತ್ತು . ಹೀಗೆ ಮೂರು ಸಲ ಸಮಾಧಿಯ ದಿಕ್ಕನ್ನು ಉತ್ತರ-ದಕ್ಷಿಣವಾಗಿ ಮಾಡುವ ಪ್ರಯತ್ನ ಮಾಡಲಾಯಿತು,ಆದರೂ ಸಮಾಧಿಯು ತಿರುಗಿ ಪೂರ್ವ-ಪಶ್ಚಿಮವಾಗತೊಡಗಿತು. ಆಗ ಭಕ್ತರು ಅದನ್ನು ಅದೇ ಸ್ಥಿತಿಯಲ್ಲಿ ಬಿಟ್ಟರು. ಈಗಲೂ ಸಹ ಸದರಿ ಮಹಾತ್ಮರ ಸಮಾಧಿಯು ಪೂರ್ವ- ಪಶ್ಚಿಮ ವಾಗಿಯೇ ಇದೆ . ಪ್ರತಿ ಸೋಮವಾರ, ಗುರುವಾರ , ಶುಕ್ರವಾರದ ದಿನಗಳಂದು, ಅಮವಾಸ್ಯೆಯ ದಿನಗಳಂದು ಹಾಗೂ ಪ್ರತಿ ವರ್ಷ ಉರುಸ್‌ನ ಸಂದರ್ಭದಲ್ಲಿ ಲಕ್ಷಾಂತರ ಜನರು ಯಾವುದೇ ಜಾತಿ, ಜನಾಂಗದ ಭೇದವಿಲ್ಲದೇ ಸದರಿ ಮಹಾತ್ಮರ ದರ್ಶನಕ್ಕೆ ಆಗಮಿಸುತ್ತಾರೆ , ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ . ಸುಮಾರು ೧೫೦ ಮೆಟ್ಟಿಲುಗಳನ್ನು ಹತ್ತಿದ ನಂತರ ಸದರಿ ಮಹಾತ್ಮರ ದರ್ಗಾ ಇರುತ್ತದೆ . ಹುಲಿಕೆರೆಯ ಗುಡ್ಡ ಪರಿಸರದಲ್ಲಿ ಬಲ ಭಾಗದಲ್ಲಿ ಕೋಟೆ, ಎಡ ಭಾಗದಲ್ಲಿ ದರ್ಗಾ ಕಂಗೊಳಿಸುತ್ತದೆ. ನಗರದ ಸಿರಸಪ್ಪಯ್ಯನ ಮಠ, ಖಾದರಲಿಂಗ ದರ್ಗಾ, ಗವಿಮಠ ಪ್ರಮುಖ ಭಾವೈಕ್ಯದ ತಾಣಗಳಾಗಿವೆ. ಉರುಸ್‌ನ ಪ್ರಮುಖ ಆಕರ್ಷಣೆಯಾಗಿರುವ ಖವ್ವಾಲಿ ಪದಗಳು ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಪಾಲ್ಗೊಂಡು ಭಕ್ತಿಗೀತೆಗಳ ರಸದೌತಣ ಬಡಿಸುತ್ತಾರೆ. ನೂರಾರು ಮೆಟ್ಟಿಲುಗಳನ್ನು ಏರಿ ದರ್ಗಾದ ಒಳಗಡೆ ಗವಿಯಲ್ಲಿ ಇರುವ ಸಮಾಧಿಯನ್ನು ದರ್ಶನ ಮಾಡುವುದೇ ಪುಳಕ ಉಂಟು ಮಾಡುತ್ತದೆ.

ಆಗಮಿಸುವ ಭಕ್ತರಿಗೆ ಮೂರು ದಿನ ಅನ್ನ ಸಂತರ್ಪಣೆ ನಡೆಯಲಿದೆ. ಶುಕ್ರವಾರ ರಾತ್ರಿ ನಡೆಯಲಿರುವ ಖವ್ವಾಲಿ ಕಾರ್ಯಕ್ರಮದಲ್ಲಿ ಬೆಳಗಾವಿಯ ಸೈಯದ್ ಮೋಸಿನ್ ಚಿಸ್ತಿ ಇವರ ತಂಡದಿಂದ ಕವಾಲಿ ಕಾರ್ಯಕ್ರಮ ನಡೆಯಲಿದೆ

ಕಾಟನ್ ಪಾಷಾ 
ದರ್ಗಾ ಕಮಿಟಿಯ ಅಧ್ಯಕ್ಷರು

Get real time updates directly on you device, subscribe now.

Comments are closed.

error: Content is protected !!
%d bloggers like this: