ಕನಕಗಿರಿ ಉತ್ಸವ: ರೋಚಕತೆಯಿಂದ ಕೂಡಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

Get real time updates directly on you device, subscribe now.

ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹೊಸ ಬಿಲ್ಡಿಂಗ್ ಆವರಣದಲ್ಲಿ ಫೆಬ್ರವರಿ 28ರಂದು ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ರೋಚಕತೆಯಿಂದ ಕೂಡಿತ್ತು.
ಮದವೇರಿದ ಮದಗಜಗಳಂತಹ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜತಟ್ಟಿಕೊಂಡು ಕೈ ಕೈ ಮಿಲಾಯಿಸಿದ ಕುಸ್ತಿಪಟುಗಳು, ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ಗೆದ್ದವರಿಗೆ ಚಪ್ಪಾಳೆಯ ಮೆಚ್ಚುಗೆಯು ಕುಸ್ತಿ ಅಖಾಡದಲ್ಲಿ ಕಂಡು ಬಂದಿತು.
ರಣರಣ ಬಿಸಿಲಿನಲ್ಲೂ ಕಡಿಮೆಯಾಗದ ಸಾರ್ವಜನಿಕರ ಉತ್ಸಾಹ: ನೆತ್ತಿಯ ಮೇಲೆ ಸೂರ್ಯ ಆಗಮಿಸಿದ್ದರಿಂದ ಮೇಲೆ ರಣರಣ ಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯದ ಬಿಸಿ, ನೆರೆದಿದ್ದ ಸಮೂಹದವರ ಬೆವರಿಳಿಸುತ್ತಿದ್ದರೆ, ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು. ಇಂತಹ ರಣರಣ ಬಿಸಿಲಿನಲ್ಲೂ ಸಾರ್ವಜನಿಕರ ಉತ್ಸಾಹಕ್ಕೆ ಯಾವುದೇ ನಿರಾಸಕ್ತಿ ಕಂಡುಬಂದಿಲ್ಲ.
ತುಂಬಾ ರೋಚಕತೆಯಿಂದ ಕೂಡಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಕೂಡ ವಿಶೇಷವಾಗಿತ್ತು. ಒಟ್ಟಾರೆ ಜಟ್ಟಿಗಳ ಕಾಳಗವು ನೋಡುಗರ ರೋಮಾಂಚನವನ್ನು ಹೆಚ್ಚಿಸಿತು.
ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಈ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಾದ ಚಿದಾನಂದ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಶೀಲ್ದಾರರಾದ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಕಂದಕೂರ, ಕನಕಗಿರಿ ಪೊಲೀಸ್ ಠಾಣೆಯ ಪಿಐ ಎಂ.ಡಿ.ಫೈಜುಲ್ಲಾ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!