ಕನಕಗಿರಿ ಉತ್ಸವದ ಕ್ರೀಡಾಕೂಟಕ್ಕೆ ಚಾಲನೆ
ಕನಕಗಿರಿ ಉತ್ಸವ-2024ರ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನಕಗಿರಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3ರ ವರೆಗೆ ಹಮ್ಮಿಕೊಳ್ಳಲಾದ ಉತ್ಸವದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.
ಕನಕಗಿರಿಯ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹೊಸ ಬಿಲ್ಡಿಂಗ್ ಆವರಣ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಪುರುಷ ಮತ್ತು ಮಹಿಳಾ ವಿಭಾಗದ ಕುಸ್ತಿ, ಹ್ಯಾಂಡಬಾಲ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ಮಲ್ಲಕಂಬ ಪ್ರದರ್ಶನಕ್ಕೆ ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಾದ ಚಿದಾನಂದ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಶೀಲ್ದಾರರಾದ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಕಂದಕೂರ, ಕನಕಗಿರಿ ಪೊಲೀಸ್ ಠಾಣೆಯ ಪಿಐ ಎಂ.ಡಿ.ಫೈಜುಲ್ಲಾ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.
* ನೋಡುಗರ ರೋಮಾಂಚನ ಹೆಚ್ಚಿಸಿದ ಜಟ್ಟಿ ಕಾಳಗ
*
Comments are closed.