ತುಮಕೂರು ಮತ್ತು ಹಾವೇರಿ ಕ್ಷೇತ್ರದಲ್ಲಿನೊಳಂಬ ಸಮಾಜಕ್ಕೆ ಟಿಕೆಟ್ ನೀಡಲು ಆಗ್ರಹ
ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಹಾವೇರಿ ಕ್ಷೇತ್ರಕ್ಕೆ ನೊಳಂಬ ಲಿಂಗಾಯಿತ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ನೊಳಂಬ ಲಿಂಗಾಯಿತ ಸಂಘ ಒತ್ತಾಯಿಸಿದೆ.
ತುಮಕೂರು ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೊಳಂಬ ಲಿಂಗಾಯಿತ ಸಮಾಜವು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಸಂಘವು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದೆ.
ತುಮಕೂರು ಲೋಕಸಭಾ ಕ್ಷೇತ್ರವನ್ನು ಹಿಂದೆ ನೊಳಂಬ ಸಮಾಜದ ಎಸ್.ಮಲ್ಲಿಕಾರ್ಜುನಯ್ಯ ಪ್ರತಿನಿಧಿಸಿದ್ದರು. ಈಗ ಜಿ.ಎಸ್.ಬಸವರಾಜು ಅವರು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ಇದೇ ಸಮಾಜದವರಿಗೆ ಟಿಕೆಟ್ ಮೀಸಲಿಡಬೇಕು ಎಂದು ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ಮತ್ತು ಗೌರವ ಕಾರ್ಯದರ್ಶಿಕೆ.ಬಿ.ಶಶಿಧರ ಕಾಮನಕೆರೆ ಅವರು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಜಿ.ಎಸ್.ಮಾಧುಸ್ವಾಮಿ ಅವರು ಪ್ರತಿಭಾನ್ವಿತ ಜನಪ್ರತಿನಿಧಿಯಾಗಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿರುವುದರಿಂದ ಅವರಿಗೆ ತುಮಕೂರಿನಲ್ಲಿ ಟಿಕೆಟ್ ನೀಡಲು ಆದ್ಯತೆ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
ಸುಪ್ರೀಂಕೋರ್ಟ್ ವಕೀಲರು ಮತ್ತು ಹೆಸರಾಂತ ಕಾನೂನು ತಜ್ಞರಾಗಿರುವ ಸಂದೀಪ್ ಪಾಟೀಲ್ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಜಿ.ಸಿ.ಮಾಧುಸ್ವಾಮಿ ಮತ್ತು ಸಂದೀಪ್ ಪಾಟೀಲ್ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ವಿನಂತಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ 14 ಜಿಲ್ಲೆಯಲ್ಲಿ ಸುಮಾರು 30 ಲಕ್ಷ ಜನರಿರುವ ಈ ಸಮುದಾಯ ಚುನಾವಣೆಯಲ್ಲಿ ನಿಣಾಯಕ ಪಾತ್ರವನ್ನು ವಹಿಸುತ್ತಲೇ ಬಂದಿದೆ. ಆದ್ದರಿಂದ ನೊಳಂಬ ಸಮುದಾಯಕ್ಕೆ ಟಿಕೆಟ್ ನೀಡಿಕೆಯಲ್ಲಿ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೊಳಂಬ ಲಿಂಗಾಯಿತ ಸಂಘದ ಉಪಾಧ್ಯಕ್ಷ ಎಚ್.ರಾಮಲಿಂಗಪ್ಪ, ಜಂಟಿ ಕಾರ್ಯದರ್ಶಿ ವೈ.ಎಸ್.ಸಿದ್ಧರಾಮೇಗೌಡ, ಖಜಾಂಚಿ ಕೆ.ಬಿ.ರುದ್ರಪ್ಪ ಹಾಜರಿದ್ದರು.
Comments are closed.