ಒತ್ತಡದಲ್ಲಿರುವ ಪತ್ರಕರ್ತರಿಗೆ ಆರೋಗ್ಯ ಕಾಳಜಿಯೂ ಅತ್ಯಗತ್ಯ: ಸಚಿವ ದಿನೇಶ್ ಗುಂಡುರಾವ್

KUWJಯಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

Get real time updates directly on you device, subscribe now.

ಬೆಂಗಳೂರು:
ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ವೃತ್ತಿಯಲ್ಲಿ ಸದಾ ಕ್ರೀಯಾಶೀಲವಾಗಿರಬೇಕಾದರೆ ಸದಾ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯವೆಸಗುತ್ತಿರುವ ಕಾರಣ ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳೂ ಅವರಿಗೆ ಅತ್ಯಗತ್ಯ ಎಂದು ಅವರು ಹೇಳಿದರು.

ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು. ರೋಗ ಬರುವ ಮುನ್ನವೇ ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯವನ್ನು ಸುದೀರ್ಘ ಅವಧಿಗೆ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ಶಿಬಿರ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು ಇಂತಹ ಕಾರ್ಯಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.

ರಾಜ್ಯ ಖಜಾಂಚಿ ಎಂ.ವಾಸುದೇವ ಹೊಳ್ಳ ಪ್ರಾರಂಭದಲ್ಲಿ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶರಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸಮಿತಿ ಸದಸ್ಯರಾದ ಕೌಸಲ್ಯ ಫಳನಾಕರ್, ಕೆ. ಆರ್ .ದೇವರಾಜ್ ಮತ್ತು ನರೇಂದ್ರ ಪಾರೇಕಟ್, ಶಿವರಾಜ್ ಮತ್ತಿತರರು ಹಾಜರಿದ್ದರು.
ಸೋಮಶೇಖರ್ ಗಾಂಧಿ ವಂದಿಸಿದರು.

ನಂತರ ಆರೋಗ್ಯ ಸಚಿವರು,
ಕೆಯುಡಬ್ಲ್ಯೂ ಜೆ ಕಾರ್ಯಾಲಯಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆಯನ್ನು ವೀಕ್ಷಿಸಿ ಮೆಚ್ಚುಗೆ ಮಾತುಗಳನ್ನಾಡಿದರು. ಸುಮಾರು 235ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು.

Get real time updates directly on you device, subscribe now.

Comments are closed.

error: Content is protected !!