ಕನಕಗಿರಿ ಉತ್ಸವಕ್ಕೆ ರೂ. 2.5 ಕೋಟಿ ಅನುದಾನ ಮಂಜೂರು: ಸಚಿವ ಶಿವರಾಜ್ ತಂಗಡಗಿ

Get real time updates directly on you device, subscribe now.

ಕೊಪ್ಪಳ,‌ ಜ.26

ಜಿಲ್ಲೆಯ ಕನಕಗಿರಿ ಉತ್ಸವ ಮಾಡಲು ₹2.5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ನೆರವೇರಿಸಿದ ಬಳಿಕ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕನಕಗಿರಿ ಉತ್ಸವವನ್ನು ಆರಂಭ ಮಾಡಿದ್ದೇ ನಾನು. ಈ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮುಂದುವರಿಸಲಿಲ್ಲ. ಈ ಬಾರಿ ನಾನೇ ಸಚಿವನಾಗಿದ್ದೇನೆ. ನನ್ನ ಕ್ಷೇತ್ರದ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಧಾರ್ಮಿಕ ಪ್ರವಾಸಿ ತಾಣ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ₹100 ಕೋಟಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಲಾಗುವುದು ಎಂದು ಹೇಳಿದರು. ಇನ್ನು ಆನೆಗೊಂದಿ ಉತ್ಸವದ ಬಗ್ಗೆ ಪ್ರಸ್ತಾವ ಕಳಿಸುವಂತೆ ತಿಳಿಸಿದ್ದೇನೆ. ದಿನಾಂಕ ನಿಗದಿ ಹಾಗೂ ಕಾರ್ಯಕ್ರಮದ ವಿವರದ ಬಗ್ಗೆ ಗಂಗಾವತಿ ಕ್ಷೇತ್ರದ ಶಾಸಕರಾದ ಜನಾರ್ದನ ರೆಡ್ಡಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದರು.‌

ಶೆಟ್ಟರ್ ಅವರು ನಡೆದುಕೊಂಡ ರೀತಿ ಸರಿಯಲ್ಲ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್ ಗೆ ನಷ್ಟವೇನು ಆಗಿಲ್ಲ ಎಂದು ಸಚಿವರು ಮಾರ್ಮಿಕವಾಗಿ ಹೇಳಿದರು.‌

ಶೆಟ್ಟರ್ ಅವರು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಅವರ ಗೌರವ ಕಡಿಮೆಯಾಗಿದೆ. ಈ ರೀತಿ ನಡೆದುಕೊಂಡಿದ್ದು, ನೋವು ತರಿಸಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಬಡವರ ಬಗ್ಗೆ ಕಾಳಜಿ ಇಲ್ಲ. ಬರ ಪರಿಹಾರಕ್ಕೆ ಇನ್ನು ಹಣ ನೀಡದಿರುವುದು ನೋವಿನ ಸಂಗತಿ. ಅವರಿಗೆ ಬೇಕಿರುವುದು ಮಂತ್ರಾಕ್ಷತೆ, ಅಂತ್ರಾಕ್ಷತೆಯೇ ಹೊರತು ಜನರ ಕಷ್ಟಕ್ಕೆ ಪರಿಹಾರವಲ್ಲ. ಪ್ರಧಾನಿಗೆ ರಾಜ್ಯದ ಬಗ್ಗೆ ನಿಜವಾದ ಕಾಳಜಿ ಹಾಗೂ ಕಳಕಳಿ ಇದ್ದರೆ ಬರ ಸಮಸ್ಯೆಯ ಬಗ್ಗೆ ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡಬೇಕಿತ್ತು. ರಾಮನ ಜಪ ಮಾಡುತ್ತಿರುವ ಬಿಜೆಪಿಗೆ ಖುದ್ದು ರಾಮನೇ ಬಂದು ಶಾಪ‍ ಕೊಟ್ಟರೂ ಅಚ್ಚರಿಯೇನಿಲ್ಲ ಎಂದು ಛೇಡಿಸಿದರು.‌

ನಾವು ಎಲ್ಲ ಕೆಲಸವನ್ನು ಮಾಡಿಯೂ ಪ್ರಚಾರ ಪಡೆದಿಲ್ಲ. ಆದರೆ, ಬಿಜೆಪಿಯವರು ಏನೂ ಕೆಲಸ ಮಾಡದೇ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

Get real time updates directly on you device, subscribe now.

Comments are closed.

error: Content is protected !!