14ನೇ ರಾಷ್ಟ್ರೀಯ ಮತದಾರರ ದಿನಾಚರಣೆ: ಕೊಪ್ಪಳ ಸ್ವೀಪ್ ಸಮಿತಿಯ ವಿಶೇಷ ಜಾಗೃತಿ

Get real time updates directly on you device, subscribe now.


* ಮಾನವ ಸರಪಳಿಯಲ್ಲಿ ಭಾರತದ ನಕ್ಷೆ
* ಉತ್ತಮ ಬಿ.ಎಲ್.ಓ., ಸ್ಪರ್ಧಾ ವಿಜೇತರಿಗೆ ಅಭಿನಂದನಾ ಪತ್ರ ವಿತರಣೆ
ಮತದಾನದ ಹಕ್ಕು ಜವಾಬ್ದಾರಿಯುತವಾಗಿ ಚಲಾಯಿಸಿ: ನ್ಯಾ. ಸಿ.ಚಂದ್ರಶೇಖರ


ಕೊಪ್ಪಳ  ದೇಶದ ಅರ್ಹ ಪ್ರಜೆಗಳು ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ ಅವರು ಹೇಳಿದರು.
ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಕೊಪ್ಪಳ ಇವರ ಸಹಯೋಗದಲ್ಲಿ ಜನವರಿ 25ರಂದು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನವನ್ನು ಮೊದಲು ಗ್ರೀಕ್ ದೇಶವು ಪ್ರಾರಂಭಿಸಿತು. ಅಲ್ಲಿಂದ ಇಡೀ ವಿಶ್ವದಾದ್ಯಂತ ಮತದಾನ ಪ್ರಕ್ರಿಯೆಯು ಜಾರಿಗೆ ಬಂದಿದ್ದರೂ ಸಹ ಪುರುಷರಿಗೆ ಮಾತ್ರ ಈ ಮತದಾನ ಮಾಡುವ ಹಕ್ಕು ನೀಡಲಾಗಿತ್ತು. 1920ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. 1950ರಲ್ಲಿ ನಮ್ಮ ದೇಶದಲ್ಲಿ 21 ವರ್ಷ ಪೂರ್ಣಗೊಂಡ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ಜಾರಿಗೆ ತರಲಾಗಿದ್ದು, ಬಳಿಕ ಅದನ್ನು ತಿದ್ದುಪಡಿ ಮಾಡಿ 18 ವರ್ಷ ಪೂರ್ಣಗೊಂಡ ಎಲ್ಲಾ ಭಾರತೀಯ ಪ್ರಜೆಗಳಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಮಾಡುವುದು ಎಲ್ಲಾ ಅರ್ಹ ಭಾರತೀಯ ಪ್ರಜೆಗಳ ಸಂವಿಧಾನಬದ್ಧವಾದ ಹಕ್ಕಾಗಿದ್ದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ಭಾರತ ಚುನಾವಣಾ ಆಯೋಗವು ರಚನೆಯಾಗಿ 60 ವರ್ಷಗಳನ್ನು ಪೂರ್ಣಗೊಳಿಸಿದ ಬಳಿಕ 2011 ರಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಜಿಲ್ಲೆಯ 11,62,932 ಮತದಾರರು ನೋಂದಾಯಿಸಿಕೊAಡಿದ್ದಾರೆ. 28,272 ಯುವ ಮತದಾರರಿದ್ದಾರೆ. ಇನ್ನೂ 4 ಸಾವಿರಕ್ಕೂ ಅಧಿಕ ಯುವ ಮತದಾರರ ನೋಂದಣಿ ಆಗಬೇಕಿದೆ. ಜಿಲ್ಲೆಯ 56 ಜನ ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದು, ಬಾಕಿ ಇರುವ ಎಲ್ಲಾ ಅರ್ಹ ಮತದಾರರು ನಮೂನೆ-6ರಲ್ಲಿ ಭರ್ತಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಸಿಇಓ ಅವರಿಂದ ಮತದಾರರ ಪ್ರತಿಜ್ಞಾ ವಿಧಿ ಬೋಧನೆ: `ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆ’ ಎನ್ನುವ ಮತದಾರರ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಎಲ್ಲರಿಗೂ ಬೋಧಿಸಿದರು.
ಬಳಿಕ ಮಾತನಾಡಿದ ಅವರು, `ಮತದಾನಕ್ಕಿಂತ ಮತ್ತೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬುವುದು ಈ ವರ್ಷದ ಘೋಷವಾಕ್ಯವಾಗಿದ್ದು, ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಭವಿಷ್ಯದ ಮತದಾರರಾದ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಹಾಗೂ ಮನೆಯ ಅಕ್ಕ-ಪಕ್ಕದ ಜನರಿಗೆ ಮತದಾನ ಮಾಡುವಂತೆ ಅರಿವು ಮೂಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಎಫ್.ಡಿ.ಸಿ-1 ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಮಾರ್ ಡಿ.ಕೆ.,  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಎಸ್ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ, ಜಿ.ಪಂ ಸಹಾಯಕ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಶಿವಪ್ಪ ಸುಬೇದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಶೈಲ್ ಬಿರಾದಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ ಹೆಚ್.ಎಸ್., ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಬಿಇಓ ಶಂಕ್ರಯ್ಯ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಐಕಾನ್‌ಗಳಾದ ಪೂರ್ಣಿಮಾ, ಶಿವನಗೌಡ, ರಮ್ಯಾ, ಸ್ಪೂರ್ತಿ ಸೇರಿದಂತೆ ಹಲವು ಅಧಿಕಾರಿಗಳು, ಶಾಲಾ, ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಚಿತ್ರಕಲಾ ಮತ್ತು ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಸ್.ಎಲ್.ಎಂ.ಟಿ ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಬುಸಾಬ ಲೈನದಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನಾ ಪ್ರಶಸ್ತಿ ಪತ್ರ ವಿತರಣೆ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದ್ಮಾವತಿ ಪೊಲೀಸ್ ಪಾಟೀಲ್, ನೇತ್ರಾವತಿ ಎಸ್ ಹಿರೇಮಠ ಹಾಗೂ ಸುರೇಶ ಎನ್ ಬಡಿಗೇರ, ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೇಘನಾ ಹೊಸಳ್ಳಿ, ನೇಹಾ ಫಾತಿಮಾ ಹಾಗೂ ಸಹನಾ ಎನ್ ಕಮ್ಮಾರ, ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಭರತ್ ಗಿರೀಶ ಕುಲಕರ್ಣಿ, ಶೈಲಜಾ ದೊಡ್ಡನಗೌಡ ಹಾಗೂ ಅಶ್ವಿನಿ ಕುಮಾರಿ ಮತ್ತು ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಆಕಾಶ ತುಳಜಪ್ಪ ಹಾಗೂ ಯಶೋಧಾ ಹರಿಶ್ಚಂದ್ರ, ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಇ.ಎಲ್.ಸಿ ಶಾಲೆಯ ಸಂಯೋಜಕ ಪ್ರಶಸ್ತಿ ಪಡೆದ ರಮೇಶ್ ಹುನಗುಂದ, ರಾಮಣ್ಣ ಚಬ್ಬಿ, ಹನುಮಂತಪ್ಪ ಚಲವಾದಿ, ಮಾರುತಿ ಬನ್ನಿಗೋಳ ಹಾಗೂ ಹುಲಿಗೆಮ್ಮ ಮತ್ತು ಅತ್ಯುತ್ತಮ ಬಿ.ಎಲ್.ಓ.ಗಳಾದ ಬಸವರಾಜ, ಶಿವಪ್ಪ ಆರ್., ಚಂದ್ರಮ್ಮ, ಯಮನಕ್ಕ ದೇವಪ್ಪ ಬಡಿಗೇರ ಹಾಗೂ ಗಂಗಮ್ಮ ಅವರಿಗೆ 14ನೇ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನಾ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಭಾರತದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ: ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು ತಾಲ್ಲೂಕು ಕ್ರೀಡಾಂಗಣದಲ್ಲಿ 300*200 ಅಡಿ ಉದ್ದಗಲದಲ್ಲಿ ಭಾರತದ ಬೃಹತ್ ನಕ್ಷೆ ಹಾಗೂ ಅದರೊಳಗೆ ಮತ ಚಲಾಯಿಸಲು ಸಾರ್ವಜನಿಕರಿಗೆ ಪ್ರೇರೇಪಿಸುವ `ನಾನು ಖಚಿತ ಮತದಾನ ಮಾಡುವೆ’ ಎಂಬ ಚಿನ್ಹೆ ಮತ್ತು `ಸ್ವೀಪ್’ ಎಂದು ರಚಿಸಲಾಯಿತು. ಕೊಪ್ಪಳದ ಸುಮಾರು 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಭಾರತದ ನಕ್ಷೆಯ ರೇಖೆಯ ಮೇಲೆ ಜೊತೆಜೊತೆಯಾಗಿ ನಿಂತು ಮಾನವ ಸರಪಳಿ ನಿರ್ಮಿಸಿದ್ದು, ಆಕರ್ಷಣೀಯವಾಗಿತ್ತು.  ಡ್ರೋಣ್ ಕ್ಯಾಮೆರಾ ಮೂಲಕ ಈ ಎಲ್ಲ ಪ್ರಕ್ರಿಯೆಯನ್ನು ಸೆರೆಹಿಡಿಯಲಾಗಿದ್ದು, ಫೋಟೋ ಹಾಗೂ ವಿಡಿಯೋ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ನಗರದಲ್ಲಿ ಹಮ್ಮಿಕೊಂಡ ಈ ವಿಶೇಷ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ತುಂಬಾ ಆಕರ್ಷಕವಾಗಿತ್ತು.

Get real time updates directly on you device, subscribe now.

Comments are closed.

error: Content is protected !!