ಶರಣರ ‘ಕಾಯಕ ದೇವೋಭವ’

Get real time updates directly on you device, subscribe now.

(2024ರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 24-01-2024ರಂದು ನಡೆಯುವ ‘ಕಾಯಕ ದೇವೋಭವ’ ಜಾಗೃತಿ ಜಾಥದ ನಿಮಿತ್ಯ ವಿಶೇಷ ಲೇಖನ)
ವಚನ ಚಳವಳಿ 12ನೇ ಶತಮಾನದಲ್ಲಿ ಮಾನವ ಕಂಡ ಬಹುದೊಡ್ಡ ಚಳವಳಿಯಾಗಿದೆ. ಆ ಮೂಲಕ ನಮಗೆ ಬೇಕಾದ ಅರಿವಿನ ಬೆಳಕನ್ನು ಅಂದು ವಚನಗಳ ಮೂಲಕ ನೀಡಿದರು. ಇಂದಿಗೂ ಸಹ ಪ್ರೇತವಾಗಿ ಕಾಡುತ್ತಿರುವ ಸಮಾನತೆ, ಸ್ತ್ರೀ ಸಮಾನತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಇಂತಹ ಹತ್ತಾರು ಸಮಸ್ಯೆಗಳಿಗೆ ಅಂದೇ ಉತ್ತರ ಕಂಡುಕೊಂಡಿದ್ದರು. ಒಬ್ಬ ಪ್ರಬುದ್ಧ ಮನುಷ್ಯ ಹೇಗಾಗಬೇಕೆಂಬ ಸಲಹೆಗಳು ಇಲ್ಲಿವೆ. ಅಲ್ಲದೇ ಸಾಮಾಜಿಕ, ಆರ್ಥಿಕ, ರಾಜಕೀಯ, ವೈಜ್ಞಾನಿಕ ಚಿಂತನೆಗಳೂ ಸಹ ಅವರ ಮಾತುಗಳಲ್ಲಿ ಕಾಣಬಹುದಾಗಿದೆ. ಇಂತಹ ಹತ್ತಾರು ತತ್ವಗಳನ್ನು ತಮ್ಮ ವಚನಗಳಲ್ಲಿ ಹೇಳುವುದರ ಜೊತೆಗೆ ಅವುಗಳನ್ನು ಸಾಧಿಸಿಯೂ ಜಗತ್ತೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಅದಕ್ಕಾಗಿ ಇದನ್ನು ‘ವಚನ ಚಳವಳಿ’ ಎಂತಲೂ ಕರೆದರು. ಬಹಳ ಮುಖ್ಯವಾಗಿ ಅವರ ಚಿಂತನೆಗಳಲ್ಲಿ ‘ಕಾಯಕ’ ಪ್ರಜ್ಞೆಯಂತೂ ಮೆಚ್ಚಲೇಬೇಕು. ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಕಾಯಕದ ಮಹತ್ವ ಹೇಳುವುದರ ಜೊತೆಗೆ ವಚನಕಾರರೆ ಸ್ವತಃ ಕಾಯಕದಲ್ಲಿ ತೊಡಗಿದ್ದನ್ನು ಕಾಣಬಹುದು.
‘ಕಾಯಕ’ ಎಂಬ ಪದಕ್ಕೆ ಸಾಮಾನ್ಯ ಅರ್ಥದಲ್ಲಿ ದುಡಿಮೆ, ಶ್ರಮ, ಕೆಲಸ, ಜೀವನೋಪಾಯ ಮತ್ತು ಇವುಗಳಿಗಿಂತ ಮುಖ್ಯವಾಗಿ ‘ಶರೀರ ಶ್ರಮ’ ಅಥವಾ ‘ದೇಹ ದಂಡಿಸು’ ಎಂಬ ಅರ್ಥಗಳುಂಟು. ಈ ಕಾಯಕವು ಕೇವಲ ಶ್ರಮವಷ್ಟೆ ಅಲ್ಲ; ಇದರಿಂದ ಲಾಭವಿದೆ, ಶಾಂತಿ ಇದೆ, ನೆಮ್ಮದಿ ಇದೆ, ಸ್ಥಾನ-ಮಾನಗಳ ಗಳಿಕೆ ಇದೆ. ಇವುಗಳಿಂದಲೇ ಜೀವನ, ಇವುಗಳಿಲ್ಲದೆ ಜೀವನ ಬರಿ ಶೂನ್ಯ. ಇಂತಹ ಮಾತುಗಳಿಂದ ಕಾಯಕದ ಮಹತ್ವ ಎಷ್ಟೆಂದು ಸುಲಭವಾಗಿ ತಿಳಿಯಬಹುದು.
ಶರಣರು ಸೃಷ್ಟಿಸಿದ ಹಲವು ಕ್ರಾಂತಿಗಳಲ್ಲಿ ‘ಕಾಯಕ’ದ ಕ್ರಾಂತಿಯು ಒಂದು ದಿಕ್ಕನ್ನೇ ಬದಲಿಸಿತು. ‘ಕಾಯಕವೇ ಕೈಲಾಸ’ ಎಂದು ಸಾರಿ ಈ ಕಾಯಕದಲ್ಲಿಯೇ ಕೈಲಾಸವನ್ನು ಕಾಣಬಹುದು; ಶಿವನ ದರ್ಶನ ಪಡೆಯಬಹುದು ಎಂದು ಹೇಳುವ ಮೂಲಕ ಕಾಯಕದ ಮಹತ್ವವನ್ನು ಸಾರಿದರು. ಬಸವಾದಿ ಪ್ರಮಥರು ಇಟ್ಟ ಹೆಜ್ಜೆಯಲ್ಲಿಯೇ ನಡೆದು ಹಲವಾರು ವಚನಕಾರರು ಕಾಯಕದ ಪ್ರಜ್ಞೆಯನ್ನು ತೋರಿಸಿ ಕೊಟ್ಟರು. ಇದರಲ್ಲಿ ಮಹಿಳಾ ವಚನಕಾರ್ತಿಯರೂ ಸಹ ತಾವೇನು ಕಡಿಮೆ ಇಲ್ಲ ಎಂಬಂತೆ ಸಮಭಾಗಿಯಾಗಿರುವುದು ಬಹಳ ವಿಶೇಷ.
ವಚನಕಾರರು ಎಲ್ಲಾ ಕಾಯಕಗಳನ್ನು ಸಮಾನ ರೀತಿಯಲ್ಲಿ ಕಾಣುತ್ತಿದ್ದರು. ಕಾಯಕದಲ್ಲಿ ಮೇಲು-ಕೀಳು ಎಂದು ದೂರಿದವರಲ್ಲ. ಎಲ್ಲವೂ ಒಂದೇ ಎಂದು ನಂಬಿದವರು. ಹಣ ಗಳಿಸುವುದೊಂದೇ ದೊಡ್ಡ ಕಾಯಕ; ಉಳಿದ ಕಾಯಕಗಳೆಲ್ಲಾ ಕೀಳು ಎಂಬ ಭಾವನೆ ಅವರಲ್ಲಿರಲಿಲ್ಲ. ಯಾವುದೇ ಕಾಯಕವಿರಲಿ ಅದು ನ್ಯಾಯ-ನಿಷ್ಠೆ-ಸತ್ಯದಿಂದ ಕೂಡಿರಬೇಕು ಎಂದು ಭಾವಿಸುತ್ತಿದ್ದರು. ಶರಣರ ದೃಷ್ಟಿಯಲ್ಲಿ ಕಾಯಕವೆಂದರೆ ಬರಿ ದುಡಿಮೆಯೊಂದನ್ನೊಳಗೊಂಡ ಉದ್ದೇಶದ ಏಕಮಾತ್ರವಲ್ಲ. ಅದರಲ್ಲಿ ಸ್ವಾಭಿಮಾನವಿದೆ, ಸ್ವಾವಲಂಬನೆಯಿದೆ. ಜೊತೆಗೆ ಶ್ರದ್ಧೆ, ಶುದ್ಧ, ನಿಸ್ವಾರ್ಥ, ತ್ಯಾಗ, ಭಕ್ತಿ, ಪ್ರೀತಿ-ಪ್ರೇಮದಂತಹ ಉದಾತ್ತವಾದ ಮೌಲ್ಯಗಳನ್ನೊಳಗೊಂಡ ಕ್ರಿಯೆಯಾಗಿದೆ. ಆಲಸ್ಯ, ಅಸಹಾಯಕತೆ, ಮೋಸ-ವಂಚನೆಗಳಿಂದ ಕೂಡಿದ ಕಾಯಕವನ್ನು ಶರಣರು ವಿರೋಧಿಸಿದರು. ಕಾಯಕವನ್ನೇ ಒಂದು ಚಳವಳಿಯನ್ನಾಗಿ ಮಾಡಿದ್ದರು. ಇದು ಏಕತೆಯನ್ನು ಸಾಧಿಸುವುದರ ಮೂಲಕ ಸಾಮಾಜಿಕ ಸಮಾನತೆಯನ್ನು ತಂದ ಕರ್ನಾಟಕದ ಪ್ರಮುಖ ‘ಕಾಯಕ ಚಳವಳಿ’ ಎಂದರೆ ತಪ್ಪಾಗಲಾರದು.
ಶರಣರು ತಲತಲಾಂತರವಾಗಿ ಜಾತೀಯತೆ ಆಧಾರದ ಮೇಲೆ ಬಂದ ಕಾಯಕವನ್ನು ಅವರು ಮುಂದುವರೆಸಿದರು. ವಚನಕಾರರು ಕಾಯಕಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದರೆಂದರೆ ಅವರವರ ಕಾಯಕದಿಂದಲೇ ಅವರ ಕಾಯಕ ಪ್ರಜ್ಞೆಯನ್ನು ಅಳೆಯಬಹುದು. ಕ್ಷೌರಮಾಡುವ ಹಡಪದ ಅಪ್ಪಣ್ಣ, ಹೊಳೆ ದಾಟಿಸುವ ಅಂಬಿಗ ಅಂಬಿಗರ ಚೌಡಯ್ಯ, ಹೆಂಡ ಮಾರುವ ಹೆಂಡದ ಮಾರಯ್ಯ, ಬಟ್ಟೆ ತೊಳೆಯುವ ಮಡಿವಾಳ ಮಾಚಯ್ಯ, ಹಗ್ಗ ನೆಯ್ಯುವ ನುಲಿ ಚಂದಯ್ಯ, ಚಪ್ಪಲಿ ಹೊಲೆಯುವ ಮಾದರ ಧೂಳಯ್ಯ, ಬಟ್ಟೆ ನೇಯುವ ಜೇಡರ ದಾಸಿಮಯ್ಯ, ಗಡಿಗೆ ಮಾಡುವ ಕುಂಬಾರ ಗುಂಡಯ್ಯ, ಬುಟ್ಟಿ ಮಾಡುವ ಮೇದಾರ ಕೇತಯ್ಯ, ಕಟ್ಟಿಗೆ ಮಾರುವ ಮೋಳಿಗೆ ಮಾರಯ್ಯ, ದನಗಳು ಕಾಯುವ ತುರುಗಾಹಿ ರಾಮಣ್ಣ, ಬೊಕ್ಕಸದ ಅಧಿಕಾರಿ ಬೊಕ್ಕಸದ ಚಿಕ್ಕಣ್ಣ, ಸುಂಕ ಸಂಗ್ರಹಿಸುವ ಸುಂಕದ ಬಂಕಣ್ಣ, ವೈದ್ಯ ವೃತ್ತಿ ಮಾಡುವ ವೈದ್ಯ ಸಂಗಣ್ಣ, ನಗಿಸುವ ಕಾಯಕದ ನಗೆಯ ಮಾರಿತಂದೆ, ತಳವಾರಿಕೆಯ ತಳವಾರ ಕಾಮಿದೇವಯ್ಯ, ಕಿನ್ನರಿ ಭಾರಿಸುವ ಕಿನ್ನರಿ ಬೊಮ್ಮಯ್ಯ, ಬೇಸಾಯ ಮಾಡುವ ಒಕ್ಕಲಿಗ ಮುದ್ದಣ್ಣ, ಎಲೆ ಮಾರುವ ಎಲೆಗಾರ ಕಾಮಣ್ಣ, ಅಕ್ಕಿ ಆರಿಸಿಕೊಂಡು ಬರುವ ಆಯ್ದಕ್ಕಿ ಮಾರಯ್ಯ, ಹುಂಜಿನ ಕಾಳಗದ ದಾಸಯ್ಯ, ಹುಲ್ಲು ಮಾರುವ ಹೊಡೆಹುಲ್ಲ ಬಂಕಣ್ಣ, ವೃತ್ತಿ ಮಾಡುವ ಸೂಳೆ ಸಂಕವ್ವ ಹೀಗೆ ನೂರಾರು ಶರಣರು ತಮ್ಮ-ತಮ್ಮ ಕಾಯಕವನ್ನು ಭಯ-ಭಕ್ತಿ-ಶ್ರದ್ಧೆಯಿಂದ ಮಾಡುತ್ತಿದ್ದರು. ಇಲ್ಲಿ ವಚನಕಾರರು ಅದನ್ನು ಜಾತಿ ಎಂದು ಭಾವಿಸದೇ ತಮ್ಮ ‘ಕಾಯಕ’ ಎಂದು ಭಾವಿಸಿಕೊಂಡಿದ್ದರು. ಆ ಮೂಲಕ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ನಂಬಿಕೊಂಡು ಬದುಕಿದವರು.
ವಚನಕಾರರು ಕಾಯಕ ಬಹುದೊಡ್ಡದು, ಇದರಲ್ಲಿ ಮೇಲು-ಕೀಳು ಯಾವುದೂ ಇಲ್ಲ ಎಂದು ನಂಬಿದ್ದರು. ಅದು ಗುರು, ಲಿಂಗ, ಜಂಗಮ ಪೂಜೆ-ಪುನಸ್ಕಾರಗಳಿಗಿಂತಲೂ ದೊಡ್ಡದು, ಇದರಲ್ಲಿ ನಿರತರಾದರೆ ಗುರು-ಲಿಂಗ-ಜಂಗಮ ಎಲ್ಲವನ್ನೂ ಮರೆತು ಕಾಯಕ ಮಾಡಬೇಕು ಎಂದು ವಚನಕಾರ ಆಯ್ದಕ್ಕಿ ಮಾರಯ್ಯ ತಮ್ಮ ಒಂದು ವಚನದಲ್ಲಿ “ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು” ಎಂದು ಕಾಯಕ ದೇವರ ಭಕ್ತಿಗಿಂತಲೂ ಹಿರಿದು. ಕಾಯಕ ಮಾಡುವಾಗ ಎಲ್ಲವನ್ನೂ ತ್ಯಜಿಸಿ ನಿಷ್ಠೆಯಿಂದ ಮಾಡಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಕಾಯಕ ಯಾವುದಾದರೇನು ಅದು ಭಾವ ಶುದ್ಧವಾಗಿರಬೇಕು, ಅದು ಯಾವ ಕಾಯಕವೇ ಇರಲಿ ಎಂದು ನಂಬಿದ್ದ ಶರಣ ನುಲಿ ಚಂದಯ್ಯನವರು “ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ ಗುರು ಲಿಂಗ ಜಂಗಮಕ್ಕೆ ಮಾಡುವುದೇ ಶಿವಪೂಜೆ” ಎಂದು ಹೇಳಿದ್ದಾರೆ. ಯಾವುದಾದರೂ ಕಾಯಕ ಮಾಡುತ್ತಾ ಶಿವನನ್ನು ಪೂಜಿಸಬೇಕು. ಅದು ಶಿವನಿಗರ್ಪಿತ ಎಂಬುದು ಅವರ ನಂಬಿಕೆಯಾಗಿತ್ತು. ಅವರ ಮತ್ತೊಂದು ವಚನದಲ್ಲಿ “ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ” ಎಂದು ಸಾರಿದ್ದಾರೆ. “ಆವ ಕಾಯಕವಾದಡೂ ಸ್ವಕಾಯಕವ ಮಾಡಿ, ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು” ಎಂದು ಹುಲ್ಲು ಹೊರುವ ಕಾಯಕದ ಸೋಮಯ್ಯನವರು ತಮ್ಮ ವಚನದಲ್ಲಿ ನುಡಿದಿದ್ದಾರೆ. ಇದರಿಂದ ನಮಗೆ ಶರಣರ ಕಾಯಕ ಪ್ರಜ್ಞೆ ಮತ್ತು ಅದರಲ್ಲಿನ ಭಕ್ತಿ ಪ್ರಿಯತೆ ಎದ್ದು ಕಾಣುತ್ತದೆ. ಈ ಕಾಯಕವನ್ನು ಸುಲಭವಾಗಿ ಮಾಡಲಾಗದು. “ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿಬೇಡಿ ಮಾಡುವುದು ದಾಸೋಹವೆ?” ಎಂದು ಶಿವಲೆಂಕ ಮಂಚಣ್ಣ ಪ್ರಶ್ನಿಸಿದ್ದಾರೆ. ಹೀಗಾಗಿ ಕಾಯಕವನ್ನು ಕಾಯವ ಬಾಗಿಸಿ ಒಂದರ್ಥದಲ್ಲಿ ಮೈ ಮುರಿದು ದುಡಿಯಬೇಕು ಎಂದು ತಿಳಿಯಬೇಕಿದೆ.
ಕುಟುಂಬದ ಅಭ್ಯುದ್ಯಯವಾಗಲಿ ಅಥವಾ ರಾಷ್ಟ್ರದ ಅಭಿವೃದ್ಧಿಯೇ ಇರಲಿ, ಅದನ್ನು ಸಾಧಿಸಲು ಕಾಯಕವೇ ಮೂಲಾಧಾರ. ಈ ಕಾಯಕದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆಯುಂಟು. ವ್ಯಕ್ತಿಯ ಕ್ಷೇಮಕ್ಕೆ, ನಾಡಿನ ಉದ್ಧಾರಕ್ಕೆ ಕಾಯಕ ಅಥವಾ ದುಡಿಮೆಯೊಂದೇ ಮೂಲವಾಗಿದೆ, ಅದೊಂದೇ ಸತ್ಯ. ಈ ಸತ್ಯಕ್ಕೆ ಬದ್ಧರಾಗಿ ಮತ್ತು ಪ್ರಾಮಾಣಿಕವಾಗಿ ದುಡಿಯುವವನ ಬಳಿ ಯಾವುದೇ ದಾರಿದ್ರ್ಯ ಕಾಡಲಾರದು. ಇಂತಹ ದುಡಿಮೆಗಾರರಿಗೆ ಎತ್ತಲಿಂದಲೊ ಹಣ ಬಂದು ಸೇರುತ್ತದೆ ಎಂದು ಶರಣ ಆಯ್ದಕ್ಕಿ ಮಾರಯ್ಯ ಹೀಗೆ ಹೇಳಿದ್ದಾರೆ. “ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವ ಸದ್ಭಕ್ತರಿಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು.” ಚಿತ್ತಶುದ್ಧವಾಗಿ ಮತ್ತು ನಿಷ್ಠೆಯಿಂದ ಕಾಯಕವ ಮಾಡುವವರಿಗೆ ಎಲ್ಲಾ ಕಡೆಯಿಂದಲೂ ಹಣ ಬಂದು ಸೇರುತ್ತದೆ ಎಂದು ಶರಣರು ಸಾರಿದ್ದಾರೆ. ಅವರ ಮತ್ತೊಂದು ವಚನದಲ್ಲಿ “ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ? ವಿರಕ್ತಂಗೆ ಆರೈಕೆಗೊಬ್ಬರುಂಟೆ? ಕಾಯಕವ ಮಾಡುವ ಭಕ್ತಂಗೆ ಇನ್ನಾರು ಕಾಡಲೇತಕ್ಕೆ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ” ಎಂದು ನುಡಿದ್ದಾರೆ. ಕಾಯಕ ಮಾಡುವವನಿಗೆ ಯಾರ ಹಂಗೂ ಬೇಕಾಗಿಲ್ಲ ಮತ್ತು ಯಾರೂ ಅವನನ್ನು ಕಾಡಲಾರರು ಎಂಬುದು ವಚನಗಳ ಮೂಲಕ ಸಾರಿದ್ದಾರೆ.
ವಚನಕಾರರು ಯಾವುದೇ ಕಾಯಕವನ್ನು ಮೇಲು-ಕೀಳು ಎಂದವರಲ್ಲ. ಅದು ಉನ್ನತ ಕೆಲಸವಿರಲಿ ಅಥವಾ ಕೆಳ ಮಟ್ಟದ ಕೆಲಸವಿರಲಿ ಅದಕ್ಕೆ ಸಮಾನತೆಯನ್ನು ಕೊಡುತ್ತಿದ್ದರು. ಮೇಲಿನ ಕೆಲಸ ಮಾಡುವವರಿಗೆ ಎಷ್ಟು ಸಮಾನತೆಯನ್ನು ಕೊಡುತ್ತಿದ್ದರೋ, ಕೆಳ ಮಟ್ಟದ ಕೆಲಸ ಮಾಡುವವರಿಗೂ ಸಹ ಅಷ್ಟೇ ಸಮಾನತೆಯನ್ನು ಕೊಡುತ್ತಿದ್ದರೆಂದು ವಚನಕಾರರ ಒಗ್ಗಟ್ಟಿನಿಂದ ತಿಳಿಯಬಹುದು. ಹಡಪದ ಅಪ್ಪಣ್ಣ, ಸೂಳೆ ಸಂಕವ್ವ, ನುಲಿ ಚೆಂದಯ್ಯ, ಮಾದರ ಧೂಳಯ್ಯ ಇವರೆಲ್ಲಾ ಕೆಳ ಮಟ್ಟದ ಕೆಲಸ ಮಾಡುತ್ತಿದ್ದರೂ ಮೇಲು ದರ್ಜೆಯ ವಚನಕಾರರ ಜೊತೆಯಲ್ಲಿಯೇ ಅನುಭವ ಮಂಟಪದಲ್ಲಿ ಇವರಿಗೆ ಸಮಾನತೆ ಸಿಗುತ್ತಿತ್ತು. ಇದರಿಂದ ಶರಣರ ಕಾಯಕದ ಜೊತೆಗೆ ಸಮಾನತೆಯ ಅಂಶವು ತಿಳಿಯುತ್ತದೆ.
ಶರಣರು ಎಲ್ಲರನ್ನೂ ಸಮಾನ ದೃಷ್ಠಿಯಿಂದ ನೋಡಿದಂತೆ ಎಲ್ಲಾ ಕಾಯಕಗಳನ್ನು ಸಮಾನ ಮನಸ್ಸಿನಿಂದ ಕಾಣುತ್ತಿದ್ದರು. ಕಾಯಕವು ನ್ಯಾಯ, ನಿಷ್ಠೆ, ಸತ್ಯದಿಂದ ಕೂಡಿರಬೇಕು ಎಂದು ಸಾರಿದರು. ಹಣಗಳಿಸುವ ಒಂದೇ ಉದ್ದೇಶವನ್ನಿಟ್ಟುಕೊಂಡು ಮೋಸ-ವಂಚನೆಯಿಂದ ಮಾಡಿದರೆ ಅದು ಸತ್ಯದ ಕಾಯಕವಾಗುವುದೇ ಎಂದು ವಚನಕಾರ ಆಯ್ದಕ್ಕಿ ಮಾರಯ್ಯ ಹೀಗೆ ಪ್ರಶ್ನಿಸಿದ್ದಾರೆ. “ಹಾಗದ ಕಾಯಕವ ಮಾಡಿ, ಹಣ ವಡ್ಡವತಾ ಎಂಬಲ್ಲಿ ಸತ್ಯದ ಕಾಯಕ ಉಂಟೆ?” ಇದು ಕಾಯಕವಾಗಬಲ್ಲದೇ? ಇದರಿಂದ ಭಕ್ತಿ-ನಿಷ್ಠೆ ಕಾಣಬಹುದೆ? ಎಂದು ವಚನಕಾರರು ಪ್ರಶ್ನೆ ಮಾಡಿದ್ದಾರೆ. ಇಂತಹ ಕಾಯಕವು ಸುಳ್ಳಿನಿಂದ ಕೂಡಿದ ಕಾಯಕವಾಗಿದೆ ಎಂಬುದು ವಚನಕಾರರ ನಿಲುವಾಗಿತ್ತು. ಪ್ರತಿಯೊಬ್ಬರೂ ಕಾಯಕದಲ್ಲಿ ನಿರತರಾಗಬೇಕು; ಅದು ನ್ಯಾಯ-ನಿಷ್ಠೆಯಿಂದ ಕೂಡಿದ ಯಾವ ಕಾಯಕವೇ ಆಗಲಿ ಎಂದು ಶರಣರು ಸಾರಿದ್ದಾರೆ. ಕಾಯಕವಿಲ್ಲದ ವ್ಯಕ್ತಿ ತಿಳಿವಿಲ್ಲದವನು ಎಂದು ಶರಣ ಮಾನಸಂದ ಮಾರಿತಂದೆ “ಕಾಯವಿಡಿಹನ್ನಬರ ಶಿವಭಕ್ತಂಗೆ ಕಾಯಕವೇ ಕೈಲಾಸ, ಕಾಯಕವಿಲ್ಲದವನ ಅರಿವು ಮಾಯಾವಾಯಿತ್ತು” ಎಂದು ನುಡಿದಿದ್ದಾರೆ. ಕಾಯಕವು ಅರಿವು-ಜ್ಞಾನಗಳನ್ನೊಳಗೊಂಡ ಕ್ರಿಯೆಯಾಗಿದೆ ಎಂಬುದು ಶರಣರ ಚಿಂತನೆಯಾಗಿತ್ತು. ವಚನಕಾರರು ವ್ಯಾಮೋಹದಿಂದ ಕೂಡಿದ ಕಾಯಕವನ್ನು ಖಂಡಿಸಿದರು. ಕಾಯಕವು ಸ್ವಾರ್ಥ ಸಾಧನೆಗಾಗಿ, ಹಣಗಳಿಕೆಗಾಗಿ, ಬಾಂಧ್ಯವ್ಯದ ಒಳಿತಿಗಾಗಿ ಮಾಡಬಾರದು. ಇಂತಹ ಕಾಯಕವನ್ನು ದೇವರು ಮೆಚ್ಚಲಾರನು. ಅದು ಕಾಯಕವಾಗದು ಎಂದ ವಚನಕಾರ ಮೋಳಿಗೆ ಮಾರಯ್ಯನು “ಭಕ್ತ ತಾ ಮಾಡುವ ಕಾಯಕ ತನಗೆಂದಡೆ ಗುರುವಿಗೆ ದೂರ, ತನ್ನ ಸತಿಗೆಂದಡೆ ಲಿಂಗಕ್ಕೆ ದೂರ, ತನ್ನ ಸುತರಿಗೆಂದಡೆ ಜಂಗಮಕ್ಕೆ ದೂರ ಎನ್ನೊಳಗಾದ ನಿಷ್ಕಳಂಕ ಮಲ್ಲಿಕಾರ್ಜುನನಿಗೂ ದೂರ” ಎಂದು ವ್ಯಾಮೋಹಕ್ಕಾಗಿ ಮಾಡುವ ಕಾಯಕವನ್ನು ಖಂಡಿಸಿದ್ದಾರೆ. ನಗಿಸುವುದೇ ಒಂದು ಕಾಯಕ ಮಾಡಿಕೊಂಡಿದ್ದ ನಗೆಯ ಮಾರಿತಂದೆ “ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ ಇದನಪ್ಪಗೊ, ಆತುರವೈರಿ ಮಾರೇಶ್ವರಾ” ಎಂದು ತನ್ನ ಕಾಯಕವನ್ನು ಸಮರ್ಥಿಸಿಕೊಂಡಿದ್ದಾರೆ. “ಸತ್ಯ ಶುದ್ಧ ಕಾಯಕವ ಮಾಡಿ ತಂದು ಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ ಹೃದಯದೊಳಿಪ್ಪೆನು” ಎಂದು ಮಾದರ ಧೂಳಯ್ಯ ನುಡಿದಿದ್ದಾರೆ.
ವಚನಕಾರರಂತೆ ವಚನಕಾರ್ತಿಯರೂ ಕೂಡ ಮಾನವ ಬದುಕಿಗೆ ಸಂಬಂಧಿಸಿದ ಮೌಲ್ಯಗಳನ್ನು ತಮ್ಮ ವಚನಗಳಲ್ಲಿ ಬಿತ್ತರಿಸಿದ್ದಾರೆ. ದಾಸಿಮಯ್ಯನ ಪುಣ್ಯಸ್ತ್ರೀ ದುಗ್ಗಳೆ, ಬಸವಣ್ಣನ ಪುಣ್ಯಸ್ತ್ರೀ ಗಂಗಾಬಿಕೆ, ಉರಿಲಿಂಗ ಪೆದ್ದಿಯ ಪುಣ್ಯಸ್ತ್ರೀ ಕಾಳೆವ್ವ, ಅಮುಗೆ ದೇವಯ್ಯನ ಪುಣ್ಯಸ್ತ್ರೀ ಅಮುಗೆ ರಾಯಮ್ಮ, ಮೋಳಿಗೆ ಮಾರಯ್ಯನ ಪುಣ್ಯಸ್ತ್ರೀ ಮಹಾದೇವಿ, ಆಯ್ದಕ್ಕಿ ಮಾರಯ್ಯನ ಪುಣ್ಯಸ್ತ್ರೀ ಲಕ್ಕಮ್ಮ, ಹಡಪದ ಹಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ, ಮಾದರ ಹರಳಯ್ಯನ ಪುಣ್ಯಸ್ತ್ರೀ ಕಲ್ಯಾಣಮ್ಮ ಮುಂತಾದ ವಚನಕಾರ್ತಿಯರು ತಮ್ಮ-ತಮ್ಮ ಪತಿಯರ ಕಾಯಕದಲ್ಲಿ ಸಹಾಯ ಮಾಡಿದುದಲ್ಲದೆ ವಚನಗಳನ್ನೂ ಕೂಡ ರಚಿಸಿದ್ದಾರೆ. ಪತಿಯರ ಉಲ್ಲೇಖವಿರದ ಎಷ್ಟೋ ವಚನಕಾರ್ತಿಯರೂ ಸಹ ತಮ್ಮ ಕಾಯಕ ಮಾಡುತ್ತಾ ಅವರು ಬರೆದ ವಚನಗಳು ಮತ್ತು ಅವರ ಕಾಯಕದ ಉಲ್ಲೇಖಗಳು ದೊರೆಕಿವೆ. ಪುರುಷ ವಚನಕಾರರು ಮಹಿಳೆಯರಿಗೂ ಕೂಡಾ ತಮ್ಮಷ್ಟೆ ಸಮಾನತೆ ಕೊಡುತ್ತಿದ್ದರಿಂದ ಅವರು ಬರೆಯಲು ಮತ್ತು ಬೆಳೆಯಲು ಅವಕಾಶ ದೊರೆಯಿತು. ವಚನಕಾರರು ಲಿಂಗಬೇಧ ಎಣಿಸುತ್ತಿರಲಿಲ್ಲವಾದ್ದರಿಂದ ಅಕ್ಕಮಹಾದೇವಿಯಂತಹ ಮಹಿಳಾ ಮೊದಲ ವಚನಕಾರ್ತಿ ಮತ್ತು ಇತರರು ಬೆಳೆಯಲು ಅನುಕೂಲವಾಯಿತು. ಶರಣೆಯರೂ ಕೂಡ ಕಾಯಕದ ಪರಿಕಲ್ಪನೆಯನ್ನು ಸಾರಿದ್ದಾರೆ. ಅಂತಹವರಲ್ಲಿ ಗಂಗಮ್ಮ ಎಂಬ ಶರಣೆ “ಆವಾ ಕಾಯಕವ ಮಾಡಿದಡೂ ಒಂದೇ ಕಾಯಕವಯ್ಯ ಆವಾ ವ್ರತವಾದಡೂ ಒಂದೇ ವ್ರತವಯ್ಯ” ಎಂದು ಎಲ್ಲಾ ಕಾಯಕಗಳ ಸಮಾನತೆಯನ್ನು ತೋರಿಸಿದ್ದಾಳೆ. ಶರಣೆ ಅಕ್ಕಮ್ಮ “ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ” ಎಂದು ಸಾರಿ ಯಾವುದಾದರೂ ಒಂದು ಕಾಯಕವ ಮಾಡಿ ಎಂಬ ಸಂದೇಶ ನೀಡಿದ್ದಾಳೆ. ಕಾಯಕವಿಲ್ಲದವನು ಭಕ್ತನೆ? ಎಂದು ಪ್ರಶ್ನಿಸಿದ್ದಾರೆ ಮತ್ತು ಭಕ್ತನು ಮಾಡುವ ಕಾಯಕ ಹೇಗಿರಬೇಕು ಎಂಬ ಪ್ರಶ್ನೆಗೆ ಕಾಳೆವ್ವ “ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ. ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ” ಎಂದಿದ್ದಾರೆ.
ಹೀಗೆ ಶಿವಶರಣ-ಶರಣೆಯರ ಕಾಯಕದ ತತ್ವವನ್ನು ನೋಡಿದಾಗ ನಮಗೆ ಬದುಕಿಗೆ ಅತ್ಯವಶ್ಯವಾದ ಹತ್ತಾರು ಪ್ರಮುಖ ಅಂಶಗಳು ಕಂಡುಬರುತ್ತವೆ. ಇಂತಹ ಉದಾತ್ತ ಮೌಲ್ಯಗಳನ್ನೊಳಗೊಂಡ ಕಾಯಕ ಮಾಡಿದರೆ ವ್ಯಕ್ತಿಗೆ ಮತ್ತು ಸಮಾಜಕ್ಕೆ ಬೆಲೆ ಎಂಬುದು ಶರಣರ ಅಭಿಪ್ರಾಯದಿಂದ ತಿಳಿದುಬರುತ್ತದೆ.
ಕಾಯಕ ದೇವರಿಗೆ ಸಮರ್ಪಿತ, ‘ಕಾಯಕ ದೇವೂಭವ’ ಎಂದು ನಂಬಿದ್ದ ಶರಣರು ಅದರಂತೆ ನಡೆದಿದ್ದರು. ಶರಣರು ಕಂಡ ಇಂತಹ ಕಾಯಕವನ್ನು ಇಂದು ಕಾಣಲು ಸಾಧ್ಯವೇ? ಇಂದಿನ ಆಧುನಿಕ ಜಗತ್ತಿನಲ್ಲಿ ಇಂತಹ ಕಾಯಕ ಪ್ರಜ್ಞೆಯನ್ನು ಕಾಣಲಾಗದು. ಇಂದು ಮೋಸ, ವಂಚನೆ, ದರೋಡೆಗಳ ಪ್ರವೃತ್ತಿಗಳಿಂದ ಕೂಡಿದ ಸಮಾಜದಲ್ಲಿ ಶರಣರ ಕಾಯಕದ ತತ್ವಗಳನ್ನು ಯಾರೂ ಪಾಲಿಸುತ್ತಿಲ್ಲ. ಹಣಗಳಿಸುವ ಮತ್ತು ತಮ್ಮ ಜೀವನ ನಡೆಸುವ ಒಂದೇ ಉದ್ದೇಶದಿಂದ ಎಲ್ಲಾ ಕಾಯಕಗಳಲ್ಲಿಯೂ ಅನ್ಯಾಯ ಮಾಡುವಲ್ಲಿ ನಿರತರಾಗಿದ್ದಾರೆ. ಇಂತಹ ಸಮಾಜದಲ್ಲಿ ಶರಣರು ಮತ್ತೆ ಹುಟ್ಟಿ ಬಂದರೂ ಈ ಕಾಯಕವನ್ನು ಸರಿಪಡಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ ಸಂ : 9448570340
Email:[email protected]

Get real time updates directly on you device, subscribe now.

Comments are closed.

error: Content is protected !!