ಪತ್ರಿಕಾ ವಿತರಕರು ಸೌಲಭ್ಯ ಬಳಸಿಕೊಳ್ಳಲು ಕರೆ
ಯಶವಂತಪುರದಲ್ಲಿ ನೋಂದಣಿಗೆ ಚಾಲನೆ

Get real time updates directly on you device, subscribe now.

ಬೆಂಗಳೂರು:
ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಜೀವವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಕಾರ್ಮಿಕ ಇಲಾಖೆ (ವಿಭಾಗ 1) ಸಹಾಯಕ ಕಾರ್ಮಿಕಾಧಿಕಾರಿ ಎಂ.ಎನ್.ದೇವರಾಜು ತಿಳಿಸಿದ್ದಾರೆ.
ಯಶವಂತಪುರ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಸಂಯುಕ್ತವಾಗಿ ಏರ್ಪಡಿಸಿದ್ದ ಗಿಗ್ ಕಾರ್ಮಿಕರ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಪತ್ರಿಕಾ ವಿತರಕರು ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ, ಆಸ್ಪತ್ರೆ ಸೇರಿದರೆ 1 ಲಕ್ಷ ರೂ ನೆರವು ನೀಡಲಾಗುವುದು. ನೋಂದಣಿ ಪ್ರಕ್ರಿಯೆ ನಿರಂತರವಾಗಿ ಇರಲಿದೆ. ಇಶ್ರಮ್ ಪೋರ್ಟ್‌ಲ್‌ನಲ್ಲಿ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಿರ್ಲಕ್ಷಿತ ಸಮುದಾಯವಾಗಿದ್ದ ಪತ್ರಿಕಾ ವಿತರಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸತತವಾಗಿ ಸಂಘಟಿತ ಹೋರಾಟ ನಡೆಸಿದ ಪರಿಣಾಮ ಯೋಜನೆ ರೂಪುಗೊಂಡಿದೆ ಎಂದರು. ನಮ್ಮ ಸಂಘಟಿತ ಒತ್ತಾಯಕ್ಕೆ ಕೂಡಲೆ ಸ್ಪಂಧಿಸಿದ ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾ ವಿತರಕರು ತಮ್ಮ ವೃತ್ತಿ ಬಗ್ಗೆ ಗೌರವ ಇಟ್ಟುಕೊಂಡು ಬದ್ದತೆಯಿಂದ ಕೆಲಸ ಮಾಡಬೇಕು. ಪತ್ರಿಕೆ ಹಾಕುತ್ತಲೇ ಬದುಕು ರೂಪಿಸಿಕೊಂಡು ರಾಷ್ಟ್ರಪತಿ ಹುದ್ದೆಗೇರಿದ ಡಾ.ಎಪಿಜೆ ಅಬ್ದುಲ್ ಕಲಾಂ ನಮಗೆ ಆದರ್ಶವಾಗಬೇಕು ಎಂದರು. ಯೋಜನೆಯು ಎಲ್ಲರಿಗೂ ತಲುಪುವಂತಾಗಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

70 ವರ್ಷಕ್ಕೆ ವಿಸ್ತರಿಸಲು ಒಕ್ಕೂಟ ಆಗ್ರಹ
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಮಾತನಾಡಿ, ಯೋಜನೆ ರೂಪುಗೊಳ್ಳಲು ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಹೋರಾಟ ಮರೆಯುವಂತಿಲ್ಲ. ನಮ್ಮ ಬೆಂಬಲವಾಗಿ ನಿಂತ ಅವರಿಗೆ ಅಭಿನಂದಿಸುತ್ತೇವೆ ಎಂದರು.
ಯೋಜನೆಯ ಷರತ್ತುಗಳಲ್ಲಿ ಗರಿಷ್ಠ 60 ವರ್ಷದ ತನಕ ಇರುವುದನ್ನು 70 ವರ್ಷಗಳಿಗೆ ವಿಸ್ತರಿಸಬೇಕು. ಆಗ ಎಲ್ಲರಿಗೂ ಈ ಸೌಲಭ್ಯ ಲಭ್ಯವಾಗುತ್ತದೆ. ಇಲ್ಲದೆ ಇದ್ದರೆ ಬಹಳ ಪತ್ರಿಕಾ ವಿತರಕರು ಯೋಜನೆ ವಂಚಿತರಾಗಲಿದ್ದಾರೆ ಎಂದು ಒತ್ತಾಯಿಸಿದರು. ಈ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಕಾರ್ಮಿಕಾಧಿಕಾರಿಗಳು ಭರವಸೆ ನೀಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶಿವಾನಂದ, ಶಿವಕುಮಾರ್, ಸಹಾಯಕರಾದ ಬಾಲಾಜಿ, ಸುಧೀಂದ್ರ, ಹೊನ್ನಪ್ಪ ಮತ್ತಿತರರು ಹಾಜರಿದ್ದರು.
ಒಂದೇ ದಿನ ಸುಮಾರು 300ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡರು.

Get real time updates directly on you device, subscribe now.

Comments are closed.

error: Content is protected !!