ಹವ್ಯಾಸಗಳು ನಮ್ಮ ಭವಿಷ್ಯ ರೂಪಿಸುತ್ತವೆ : ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳ: ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಬಾಲ್ಯದಿಂದಲೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಶನಿವಾರ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್ ವಿರುದ್ದ ಜಾಗೃತಿ ಜಾಥಾ ನಡೆಯಿತು. ಬೆಳಗ್ಗೆ ೭ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು. ಹೆದ್ದಾರಿಯಲ್ಲಿ ಸಾಗಿದ ಜಾಥಾ ಅಶೋಕ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಗವಿಮಠ ಆವರಣ ತಲುಪಿತು, ಅಲ್ಲಿನ ನಡೆದ ಸಮಾರೋಪದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಹವ್ಯಾಸ ಬೆಳೆಸಬೇಕು, ನಮ್ಮ ಹವ್ಯಾಸಗಳು ನಮ್ಮ ಭವಿಷ್ಯ ರೂಪಿಸುತ್ತವೆ. ಕೆಟ್ಟ ಹವ್ಯಾಸಗಳಿಂದ ದೂರ ಆಗುವುದು ಕಷ್ಟದ ಕೆಲಸ. ಆದರೆ ಕೆಟ್ಟ ಹವ್ಯಾಸದಿಂದ ಹೊರಬರಲು ಸರಳ ಮಾರ್ಗ ಅಂದ್ರೆ ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಮನಸ್ಸಿಗೆ ಒಳ್ಳೆಯ ವಿಚಾರ ಕಲಿಸುವುದು, ದೇವರು ಕೊಟ್ಟಿರುವ ಈ ಶರೀರ ಉತ್ತಮ ಜೀವನ ಕಾರ್ಯಕ್ಕೆ ಬಳಕೆ ಆಗಬೇಕು, ಇರುವದು ಒಂದೇ ಜೀವನ ಮತ್ತೊಮ್ಮೆ ಹುಟ್ಟಿಬರುವದನ್ನು ಯಾರೂ ನೋಡಿಲ್ಲ, ಒಳ್ಳೆಯದನ್ನು ಮಾಡದಿದ್ದರೆ ಈ ಬದುಕು ನಿರರ್ಥಕ, ದೇವರು ಕೊಟ್ಟ ಈ ಶರೀರದಲ್ಲಿ ಒಳ್ಳೆಯ ವಿಚಾರ, ಧೈರ್ಯ, ಸಾಹಸ, ದೇಶಪ್ರೇಮ ಮತ್ತು ಅಮೂಲ್ಯ ಚಿಂತನೆಗಳು ಇರಬೇಕು ಎಂದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಕಾರ್ಯಕ್ರಮದ ಮುಖ್ಯ ಉದ್ದೇಶ ಡ್ರಗ್ಸ್ ತಡೆಗಟ್ಟುವದು, ನಮ್ಮ ಸ್ವಯಂ ಬೆಳವಣಿಗೆಗೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವದು ಮುಖ್ಯ. ಜಗತ್ತಿನಲ್ಲಿ ಮೊದಲು ಡ್ರಗ್ಸ್ ಮೂಲಕವೇ ಆರಂಭಗೊAಡು ಹೆಚ್.ಐ.ವಿ. ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಗಳು ನಮ್ಮ ಜೀವನ ಹಾಳು ಮಾಡುತ್ತಿವೆ. ಹವ್ಯಾಸಕ್ಕೆ, ಮೋಜಿಗೆ ಡ್ರಗ್ಸ್ ಸೇವನೆ ಮುಂದೆ ಚಟವಾಗಿ ಪರಿವರ್ತನೆಗೊಂಡು ನಮ್ಮ ಸರ್ವಸ್ವವೇ ಹಾಳಾಗುವಂತೆ ಮಾಡುತ್ತದೆ. ಆದ್ದರಿಂದ ಸ್ವಯಂ ನಿರ್ಧಾರ ತುಂಬಾ ಮುಖ್ಯ ಎಂದರು. ವಿದ್ಯಾರ್ಥಿಗಳು ಉತ್ತಮ ಜೀವನ ನಡೆಸಲು ಅದರಿಂದ ದೂರ ಇರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಹಳನ್ನು ಮಾಡಿದ್ದೇವೆ, ಈಗ ಮತ್ತೊಮ್ಮೆ ಅನೇಕ ಕಾಲೇಜುಗಳ ಮಕ್ಕಳನ್ನು ಸೇರಿಸಿಕೊಂಡು ೫ಕಿ. ಮೀ. ಮ್ಯಾರಾಥಾನ್ ಮತ್ತು ವಾಕಾಥಾನ್ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ, ಇಲ್ಲಿ ಸೇರಿದ ಎಲ್ಲಾ ವಿದ್ಯಾರ್ಥಿಗಳು ಪ್ರತಿಯೊಬ್ಬರು ೨೦ ಜನರಿಗೆ ಇದರ ಅರಿವು ಮೂಡಿಸಬೇಕು. ಡ್ರಗ್ಸ್ ನಶೆ ಮನುಷ್ಯನು ಎಲ್ಲವನ್ನೂ ಕಿತ್ತುಕೊಳ್ಳುತ್ತದೆ ಎಂಬ ಸಾಮಾನ್ಯ ಅರಿವು ಮೂಡಿಸಬೇಕು. ಇದು ಅಪಾಯಕಾರಿ ಮತ್ತು ಕಾನೂನು ಬಾಹೀರವಾಗಿದೆ ಎಂದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ ಕುಮಾರ್ ಉಪಸ್ಥಿತರಿದ್ದರು. ಡ್ರಗ್ಸ್ ಜಾಗೃತಿ ಕುರಿತು ನಡೆಸಿದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಾಥಾದಲ್ಲಿ ಕೊಪ್ಪಳ ಡಿವೈಎಸ್‌ಪಿ ಶರಣಬಸಪ್ಪ ಸುಬೇದಾರ್, ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗನಗೌಡ ಪಾಟೀಲ್, ಡಿಎಆರ್ ಡಿವೈಎಸ್‌ಪಿ ನಿಂಗಪ್ಪ, ಪೊಲೀಸ್ ಅಧಿಕಾರಿಗಳಾದ ಸಂತೋಷ್ ಹಳ್ಳೂರ, ಮೌನೇಶ್ ಪಾಟೀಲ್, ಮಲ್ಲನಗೌಡ ಗೌಡರ್. ಸುರೇಶ ಡಿ., ಅಮರೇಶ ಹುಬ್ಬಳ್ಳಿ, ಸಿದ್ದರಾಮಯ್ಯ ಕಾರಟಗಿ, ಜೈಲ್ ಸುಪರಿಂಟೆAಡೆAಟ್ ವಿಜಯಕುಮಾರ್, ನಗರಾಭಿವೃದ್ಧಿ ಕೋಶದ ಪಿಡಿ ಕಾವ್ಯಾರಾಣಿ, ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ, ಯುವ ಸಬಲೀಕರಣ ಇಲಾಖೆ ತರಬೇತುದಾರರಾದ ದೀಪಾ, ಅಕ್ಷರ ಗೊಂಡಬಾಳ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಜಯಶೀಲ ಬಂಡಿಹಾಳ ಸೇರಿ ವಿವಿದ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ ಸಿಬ್ಬಂದಿ ಇದ್ದರು.
Comments are closed.