ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕವಿ: ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ
ಕುವೆಂಪುರವರು ಕನ್ನಡದ ಅಗ್ರಮಾನ್ಯ ಕವಿಯಾಗಿದ್ದು, ಇಂದಿನ ಯುವ ಕವಿಗಳಿಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಹೇಳಿದರು.
ಕನ್ನಡದ ಸಾಹಿತ್ಯದ ಇತಿಹಾಸದಲ್ಲಿ ಅನೇಕ ಮೊದಲುಗಳಿಗೆ ಕುವೆಂಪುರವರು ಕಾರಣೀಭೂತರಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ಬರೆಯದ ಸಾಹಿತ್ಯ ಪ್ರಕಾರಗಳಿಲ್ಲ ಎಂಬ ಮಾತೇ ಅವರ ಸಾಹಿತ್ಯ ಭಂಡಾರದ ಬಗ್ಗೆ ಸಾಕ್ಷಿಯಾಗಿದೆ. ಕಥೆ, ಕವನ, ಕಾದಂಬರಿ, ವಿಮರ್ಶೆ ಮುಂತಾದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕುವೆಂಪುರವರು ಸಾಹಿತ್ಯ ರಚಿಸಿ, ಕನ್ನಡ ಅಗ್ರಮಾನ್ಯ, ರಾಷ್ಟçಕವಿ ಎಂದೆನಿಸಿದ್ದಾರೆ. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಇಂದಿನ ಯುವ ಕವಿ, ಸಾಹಿತಿಗಳು ಕುವೆಂಪು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೊಪ್ಪಳ ಸಾಹಿತಿಗಳಾದ ಅಕ್ಬರ್ ಸಿ.ಕಾಲಿಮಿರ್ಚಿ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕುವೆಂಪು ಅವರ ಸಾಹಿತ್ಯವನ್ನು ವಿದೇಶಿ ಸಾಹಿತಿಗಳು ಕೂಡ ಪ್ರಶಂಸಿದ್ದಾರೆ. ತಮ್ಮ ಕಥೆ, ಕವನ, ಕಾದಂಬರಿಗಳಲ್ಲಿ ಅವರು ತಮ್ಮ ನೆಲದ ಸೊಗಡು ಬಿಟ್ಟುಕೊಡದೆ ಮಲೆನಾಡಿನ ಪ್ರಕೃತಿ, ಜನರ ಜೀವನಶೈಲಿ, ಬದುಕುವ ಪದ್ಧತಿ, ಜಾತಿ ವ್ಯವಸ್ಥೆ, ನೈಸರ್ಗಿಕ ಸೌಂದರ್ಯವನ್ನು ಅತ್ಯಂತ ವೈಭವಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ, ಓದುಗರಿಗೆ ಕಲ್ಪನಾ ಲೋಕವನ್ನು ಕಟ್ಟಿಕೊಡುತ್ತಾರೆ. ಅವರ ಸಾಹಿತ್ಯದ ವಿಷಯ ವಸ್ತು, ಬಳಸುವ ಭಾಷೆಯ ಪಾಂಡಿತ್ಯವನ್ನು ಇಂದಿನ ಸಾಹಿತಿಗಳು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕುವೆಂಪು ಅವರ ಕುರಿತು ಕವನಗಳನ್ನು ಹೇಳಿದರು. ಸಾಹಿತಿ ಸಾವಿತ್ರ ಮುಜುಂದಾರ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಎ.ಮದರಿ, ಎಂ.ಬಿ.ಅಳವAಡಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾಹಿತಿಗಳು ಉಪಸ್ಥಿತರಿದ್ದರು.
Comments are closed.