ಮೂಲಭೂತ ಸಮಸ್ಯೆ ಇತ್ಯರ್ಥಪಡಿಸಿ ರಾಜ್ಯದ ಪ್ರಗತಿಗೆ ಜ್ಯೋತಿ ಮನವಿ
ಕೊಪ್ಪಳ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಮಹಿಳಾ ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಅವರು ಸಚಿವರಿಗೆ ಮನವಿ ಮಾಡಿದರು.
ರಾಜ್ಯದ ಮೊದಲ ಕಂದಾಯ ಹೋಬಳಿವಿಸ್ತಿರಣ ಕಛೇರಿಯನ್ನು ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿದ ಅವರು, ರಾಜ್ಯದ ಉತ್ತಮ ಸಚಿವರಲ್ಲಿ ತಾವೂ ಸಹ ಒಬ್ಬರಾಗಿದ್ದು ತಾವೂ ಸೇರಿದಂತೆ ರಾಜ್ಯದ ಜನರು ಅವರ ಮೇಲೆ ಗೌರವ ಇಟ್ಟಿದ್ದಾರೆ, ಪ್ರಗತಿಪರ ಆಲೋಚನೆ, ಗಾಂಭೀರ್ಯತೆ, ಶಿಸ್ತು ಹಾಗೂ ಸರಳತೆ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಒಂದು ಗೌರವ ಅದಕ್ಕಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿದ್ದರೂ ಬೇಡಿಕೆಗಳು ಕಾರ್ಯರೂಪಕ್ಕೆ ಬರಬಹುದು ಎಂಬ ನಂಬಿಕೆಯೊಂದಿಗೆ ಮನವಿ ಸಲ್ಲಸಿದ್ದೇನೆ ಎಂದರು.
ಜಿಲ್ಲಾ ಕೇಂದ್ರದಿಂದ ಕನಿಷ್ಠ ೮ ಕಿ.ಮೀ. ಒಳಗಡೆ ಯಾವುದೇ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಬಾರದು, ಕೊಟ್ಟಿದ್ದನ್ನು ಸಹ ಮರಳಿ ಪಡೆಯಬೇಕು ಇದು ಜನರ ಆರೋಗ್ಯ ಮತ್ತು ಬದುಕಿನ ಪ್ರಶ್ನೆಯಾಗಿದ್ದು ಮಾನವ ಉತ್ತಮ ಜೀವನ ನಡೆಸಲು ಸರಕಾರ ಮಾಡಬೇಕಾದ ಬಹಳ ಮುಖ್ಯವಾದ ಕಾರ್ಯ ಎಂದು ಭಾವಿಸಿ ಇದರ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು, ಕೊಪ್ಪಳದಲ್ಲಿ ಆರ್. ಎಸ್. ಸ್ಟೀಲ್ ಕಾರ್ಖಾನೆಗೆ ಮಂಜೂರು ಮಾಡಿರುವ ಭೂಮಿಯನ್ನು ಮರಳಿ ಪಡೆಯಬೇಕು.
ಜಾತಿ ಪ್ರಮಾಣ ಪತ್ರಗಳನ್ನು ಒಂದೇ ಸಲ ಶಾಶ್ವತವಾಗಿ ಕೊಡಬೇಕು ಮತ್ತೆ ಬೇಕಾದರೆ ಆರ್.ಡಿ. ನಂಬರ್ ಮೂಲಕ ಪ್ರತಿ ಕೊಡಬೇಕು ಮತ್ತು ಅದನ್ನು ಎಲ್ಲಾ ಶಾಲೆ, ಕಾಲೇಜು ಮತ್ತು ಇಲಾಖೆಗಳಿಗೆ ಸ್ಪಷ್ಟವಾದ ಅಧಿಸೂಚನೆ ಮೂಲಕ ಮನವರಿಕೆ ಮಾಡಿಕೊಡಬೇಕು. ಯಾವುದೇ ಸನ್ನಿವೇಶದಲ್ಲೂ ಬದಲಾಗದ ಜಾತಿ ಪ್ರಮಾಣ ಪತ್ರವನ್ನು ಪದೇ ಪದೇ ಕೇಳುವ ಅದಕ್ಕಾಗಿ ಜನರು ಪರಿತಪಿಸುವದನ್ನು ತಡೆಯಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ತಡೆಯಲು ಸಹ ಇದು ಅನುಕೂಲ ಎಂದಿದ್ದಾರೆ.
ಸುಳ್ಳು ಜಾತಿ ಪ್ರಮಾಣ ಪತ್ರ ಎಂದು ಸಾಬೀತು ಆದ ಕೂಡಲೇ ಅದನ್ನು ವಿತರಿಸಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿ ಭರ್ತಿ ಮಾಡಬೇಕು.
ಭೂ ದಾಖಲೆಯ ಸಿಬ್ಬಂದಿ ಕೊರತೆ ಇರುವ ಕಾರಣ ಸರ್ವೇಯರ್‌ಗಳು ರಿಯಲ್ ಎಸ್ಟೇಟ್ ಕೈಗೊಂಬೆಯಾಗಿದ್ದು ಇದನ್ನು ತಡೆಯಲು ಸೂಕ್ತ ಸಿಬ್ಬಂದಿ ನೇಮಿಸಿ ಮತ್ತು ಇಲಾಖೆಯಲ್ಲಿ ತುಂಬಿರುವ ಏಜಂಟರನ್ನು ಹೊರಗೆ ಹಾಕಬೇಕು ಎಂದು ವಿನಂತಿಸಿದ್ದಾರೆ.
ಅಲ್ಲದೇ ಪ್ರತಿ ಗ್ರಾಮದಲ್ಲಿ ಸರ್ವ ಜನಾಂಗ ಸೇರಿ ಒಂದೇ ದೊಡ್ಡದಾದ ಹೈಟೆಕ್ ಸೌಲಭ್ಯ, ಮೂಲಭೂತ ಸೌಕರ್ಯ ಇರುವ ರುದ್ರಭೂಮಿ (ಸ್ಮಶಾನ) ಮಾಡಿ ಸತ್ತಮೇಲಾದರೂ ಜಾತಿ ನಿರ್ಮೂಲನೆಗೆ ಒಂದು ದಾರಿ ಮಾಡಲು ಬುದ್ಧ ಬಸವ ಅಂಬೇಡ್ಕರ್ ಲೋಹಿಯಾ ಮತ್ತು ಸೆಕ್ಯುಲರ್ ಸಿದ್ಧಾಂತದ ಕಾಂಗ್ರೆಸ್ ಮುನ್ನಡಿ ಇಡಬೇಕಿದೆ ಎಂಬುದು ತಮ್ಮ ಬಲವಾದ ನಂಬಿಕೆಯಾಗಿದೆ ಆದ್ದರಿಂದ ಇವುಗಳನ್ನು ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರನ್ನು ವಿನಂತಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಕುಕನೂರ ಬ್ಲಾಕ್ ಅಧ್ಯಕ್ಷೆ ಫರೀದಾಬೇಗಂ ತಂಬಾಕದಾರ್, ಯಲಬುರ್ಗಾ ಬ್ಲಾಕ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್, ಮುಖಂಡರುಗಳಾದ ಶರಣಮ್ಮ ಪೂಜಾರ್, ಮಲ್ಲಮ್ಮ ಇತರರು ಇದ್ದರು.
Comments are closed.