ಗೌಡರ ಋಣದೊಳಗೆ (ಕಥೆ)- ಸಿದ್ದಲಿಂಗಪ್ಪ ಕೊಟ್ನೆಕಲ್

Get real time updates directly on you device, subscribe now.

ಎಷ್ಟದಿನ ಆತು ಯಾಕೋ ಏನೋ ನನ್ ಮಗ ಫೋನೇ ಮಾಡಿಲ್ಲಾ. ಯಾಕಿರಬಹುದು? ನಂಗೆ ಮೈಯಲ್ಲಿ ಜ್ವರ, ಅತ್ತ ಮುದುಕನಿಗೂ ಕೂಡ ಮರ‍್ನಾಲ್ಕು ದಿನದಿಂದ ಚಳಿ, ಚಳಿ ಅಂತ ನಡುಗಾಕತ್ಯಾನ. ಕೆಮ್ಮು ದಮ್ಮು ಬ್ಯಾರೆ ಐತೆ, ಸದಾ ಕೆಮ್ಮಿಕಾಂತ ಕುಂತರ‍್ತನಾ. ಆತಗೂ ಔಷಧಿ, ಗುಳಿಗೆ ಕೊಡ್ಸಬೇಕು, ಏನ್ ಮಾಡ್ಲಿ ಎಂದು ತಡಬಡಿಸುತ್ತಿರುವ ಅಮರಮ್ಮಳಿಗೆ ಪಕ್ಕದಲ್ಲೇ ಬಂದು ನಿಂತಿದ್ದ ದುರುಗಪ್ಪ ಕಾಣಲೇ ಇಲ್ಲಾ. ಯಾಕಂಗೆ ಯಮ್ಮ ಮಾತಾಡವಲ್ಲಿ ಎಷ್ಟೋತ್ತು ಆತು ನಾ ಕೂಗಾಕತ್ತಿನಿ ಕಿವಿ ಕೇಳವಲ್ವಾ? ಎಂದಾಗ ವಾಸ್ತವ ಲೋಕಕ್ಕೆ ಬಂದ ಅಮರಮ್ಮ, ಏನಿಲ್ಲಪ್ಪ ನನ್ ಮಗ ಎಂಟತ್ತು ದಿನ ಆತು ಯಾಕೋ ಎನೋ ಫೋನೇ ಮಾಡಿಲ್ಲ. ಅದ್ಕೆ ದ್ಯಾಸ ಮಾಡ್ಕಳ್ಳಾಕತ್ತಿದ್ದೆ ಎಂದ ಅಮರಮ್ಮಗೆ, ಯಮ್ಮ ನೀನು ದಿನಾ ಅವ್ರ ಚಿಂತ್ಯಾಗ ಕಾಲ ನೂಕುತ್ತಿದ್ದಿ. ಅವ್ರು ಮಾತ್ರ ನಿನ್ನ ನೆನ್ಸದೇ ಇಲ್ಲ. ಅವ್ರೇನು ನಿನಗ ದಿನಾ ಫೋನ್ ಮಾಡ್ತಾರಾ? ಬಿಡು ಯಾಕ ಚಿಂತಿ ಮಾಡ್ತಿ? ಅಂಗಲ್ಲಪ್ಪ ಮುದ್ಕಗ ಮೈಯಾಗ ಆರಾಮಿಲ್ಲ ಚಳಿ, ಚಳಿ ಅಂತಾನಾ, ಕೆಮ್ಮು ಬ್ಯಾರೆ ಐತಿ ಅದ್ಕ ಡಾಕ್ಟರ್ ಹತ್ರ ತರ‍್ಸಬೇಕಿತ್ತು, ನನ್ವು ಗುಳಿಗೆ ಬ್ಯರ‍್ಯ ಮುಗುದಾವ, ಮಗ ಫೋನು ಮಾಡಿದ್ರಾ ಹೇಳಬೇಕಂತ ಮಾಡಿದ್ಯ. ಯಮ್ಮ ನಿಮ್ಗ ಮೈಯಾಗ ಅರಾಮಿಲ್ಲ, ಜಡ್ಡು ಬಂದಾದಾ ಅಂದ್ರ ಏನ್ ನಿನ್ಮಗ ಅಂತ್ರದಾಗ ಓಡೋಡಿ ಬಂದು ತೋರಸ್ತಾನಾ? ಗುಳಿಗೆ ಮುಗುದಾವಾ ಅಂದ್ರ ಓಡಿ ಬಂದು ಗುಳಿಗೆ ಕೊಡಸ್ತಾನಾ? ಇಲ್ವಲ್ಲಾ ಯಾಕ ಚಿಂತಿ ಮಾಡ್ತೀ? ಬರೀ ಚಿಂತಿ ಮಾಡಿ ಮಾಡಿ ಕರ‍್ಗಬ್ಯಾಡಾ, ಸುಮ್ನೇ ಮಕ್ಕ ರಾತ್ರಿ ಕತ್ಲ ಆಗ್ಯದಾ. ಎಂದಾಗ ಮುದಿಕಿಯ ಜೀವಕ್ಕಾದರೂ ಹೇಗೆ ಸಮಾಧಾನವಾದೀತು? ಯಪ್ಪ ಒಂಚೂರು ನಿಂದಾರಾ ಫೋನ್ ಹಚ್ಕೊಡು, ನನ್ ಮಗ್ನ ಜೊತೆ ಒಂದನಾಲ್ಕು ಮಾತು ಮಾತಾಡ್ತಿನಿ ಎಂಬಂತೆ ತನ್ನ ತುಡಿತವನ್ನು ಹೊರಹಾಕಿದ ಮುದಿಕಿಗೆ, ಇಲ್ಲಂಗೆ ನನ್ ಫೋನ್ದಾಗ ಕರೇನ್ಸಿ ಇಲ್ಲ. ನಿನ್ನೆ ಕಾಲಿ ಆಗ್ಯಾದಾ, ನಾಳೆ ಪಟ್ನಕ ಹೋಗಿ ಕರೆನ್ಸಿ ಹಾಕ್ಸಕಂಡು ಬಂದ ಮ್ಯಾಲೆ ನಿನ್ಗ ಫೋನ್ ಹಚ್ಚಿಕೊಡ್ತೀನಿ ಅವಾಗ ನಿನ್ ಮಗ್ನ ಜೊತೆ ಸಂಜೆತನ ಮಾತಾಡಾವಂತಿ ಈಗ ಸುಮ್ನಾ ಮಕ್ಕ ಕತ್ಲಾತು ಎಂದು ಹೇಳಿ ದುರುಗಪ್ಪ ಅಲ್ಲಿಂದ ನಡೆದಾಗ ಅಮರಮ್ಮಳಿಗೆ ಜೀವ ಹೋದಂತಾಯಿತು.
ರಾತ್ರಿಯೆಲ್ಲ ಗಂಡ ಈರಪ್ಪ ಮುಲುಗುತ್ತಾ, ಮಗ, ಮಗ ಎಂದು ಕನವರಿಸುತ್ತಿರುವ ಧ್ವನಿಯನ್ನು ಕೇಳಿ ಜೀವ ತಡಿಯದೇ ಅಮರಮ್ಮ ಎದ್ದೇ ಕುಳಿತಳು. ಯಾಕ ನಿದ್ದೆ ಬರವಲ್ತಾ? ಚಳಿ ಜಾಸ್ತಿ ಆತಾದಾ? ಎಂದಾಗ ಹೌದು ಮೈಯೆಲ್ಲ ಚಳಿ-ಚಳಿ ಅನಸ್ತಾದಾ ಎಂದು ಹೇಳಲೂ ಧ್ವನಿ ಬಾರದೇ ತಡಬಡಿಸುತ್ತಿರುವ ಮುದುಕ ಈರಪ್ಪನನ್ನು ಕಂಡು ಅಮರಮ್ಮಳ ಜೀವ ಕಿತ್ತು ಬಂದAತಾಯಿತು. ಇರ್ಲಿ ಇವತ್ ಒಂದು ರಾತ್ರಿ ತಡಕ ನಾಳೆ ಮುಂಜಾನಿ ಯರ‍್ತಾಕಾದ್ರ ದುಡ್ಡು ಇಸ್ಕಂಡು ಡಾಕ್ಟರು ಹತ್ರ ಹೋಗಿ ತೋರಸ್ಕಂಡು ಸೂಜಿ ಮಾಡಸ್ಕಂಡು, ಗುಳಿಗೆ ತಗಂಡು ಬಂದ್ರ ಎಲ್ಲಾ ಚಳಿ ಕಡಿಮೆ ಆಗ್ತಾದಾ, ಕೆಮ್ಮೂ ನಿಲ್ತಾದಾ ಎಂದು ಅಮರಮ್ಮ ನುಡಿಯುವ ಮಾತಿನಲ್ಲಿ ತಮ್ಮಿಬ್ಬರ ಸಮಾಧಾನಕ್ಕಾಗಿ ಮಾತಾನಾಡಿಕೊಂಡಂತೆ ಕಂಡರೂ ಅದು ಆ ಕ್ಷಣಕ್ಕೆ ಮಾತ್ರ ಸರಿ ಹೋಗಬಹುದೇನೋ.
ತಮ್ಮಾ, ಅಮರಪ್ಪ ನಮ್ ಮುದೆತಗ ನಾಲ್ಕೆದು ದಿನ ಆತು ಚಳಿ ಜ್ವರ, ಕೆಮ್ಮು ಕಡಿಮೆ ಆಗವಲ್ತು ದವಾಖಾನಿಗೆ ತರ‍್ಸಬೇಕು ಒಂದುನೂರು ರೂಪಾಯಿ ರೊಕ್ಕ ಇದ್ರೆ ಕೊಡು, ಮಗ ಬಂದ ಮ್ಯಾಲೆ ವಾಪಸ್ ಕೊಡ್ತೀನಿ ಎಂದು ಬೇಡಿದ ಬಡಜೀವಕ್ಕೆ ಇಲ್ಲಮ್ಮಾ ಈ ವಾರ ಗೌಡ್ರು ಪಗಾರ ಕೊಟ್ಟಿಲ್ಲ, ಮುಂದಿನ ವಾರ ಕೊಡ್ತೀನಿ ಅಂದ್ರು, ನನಗೇ ಖರ್ಚಿಗಿ ಇಲ್ದ ತ್ರಾಸು ಆಗ್ಯಾದ, ರೊಕ್ಕ ಇದ್ರೇನು ನಾನೇ ಕೊಡ್ತಿದ್ದೆ ಎಂದು ಕೈ ಜಾಡಿಸಿಬಿಟ್ಟ. ಅನಿವಾರ್ಯವಾಗಿ ಅಮರಮ್ಮ ಸಪ್ಪೆ ಮುಖಮಾಡಿಕೊಂಡು ಮುಂದಿನ ಮನೆಯ ನಾಗಪ್ಪನ ಹತ್ತಿರ ಹೋದಳು. ತಮ್ಮಾ ನಮ್ ಮುದ್ಕುಗಾ ಜ್ವರ ಬಂದಾವಾ ಪಟ್ನಕ ತರ‍್ಸಾಕ ಹೋಗ್ಬೇಕು ಒಂದುನೂರು ರೂಪಾಯಿ ರೊಕ್ಕ ಇದ್ರ ಕೊಡಪ್ಪ. ಮಗ ಬಂದ ಮ್ಯಾಲೆ ಇಸ್ಕೊಡ್ತೀನಿ ಎಂದು ದಯಾನೀಯವಾಗಿ ಬೇಡಿಕೊಂಡ ಅಮರಮ್ಮಳ ಮಾತಿಗೆ ಕನಿಕರಗೊಂಡೋ ಅಥವಾ ಮತ್ತೇನು ಅನಿಸಿತೋ ಒಟ್ಟಿನಲ್ಲಿ ಒಂದುನೂರು ರೂಪಾಯಿ ಕೊಟ್ಟ ನಾಗಪ್ಪ, ನೋಡು ಮುದೆಕಿ ಮಗ ಬಂದಕೂಡ್ಲೇ ವಾಪಸ್ ಕೊಡಬೇಕು ಎಂದು ಕರಾರಿನೊಂದಿಗೆ ಕೊಟ್ಟು ಕಳುಹಿಸಿದನು.
ಯಪ್ಪ ದುರುಗಪ್ಪ ಮುದೆತಾಗ ದವಾಖಾನಿಗೆ ರ‍್ಕಂಡು ಪಟ್ನಕ ಹೋಗಾಮು ನಡ್ಯಾಕ ಆಗವಲ್ತು ಯರ‍್ದಾದ್ರಾ ಬಂಡಿ ಇದ್ರ ಕೇಳು ಅದ್ರಾಗ ಅಕ್ಯಂಡು ಹೋಗಾಮು, ಯಮ್ಮಾ ಎತ್ತು ಬಂಡಿ ಯಾರ ಕೊಡ್ತಾರಾ? ಎಲ್ರುವೂ ಕೆಲ್ಸ ಜೋರು ನಡದಾವಾ. ಬಿತ್ತಾದು, ಗಳೇವು ಹೋಡ್ಯಾದು ನಡದಾದಾ. ನಿನ್ಗ ಯಾರು ಎತ್ತು ಬಂಡಿ ಕೊಡ್ತಾರಾ? ಯಪ್ಪ ರ‍್ನಾದ್ರಾ ಕೇಳು ರಾತ್ರಿಯಲ್ಲಾ ಮುದುಕ ಮುಲುಗದು, ಕಳರ‍್ಸದು ಕೇಳಿ ಜೀವ ಹೋದಂಗ ಅಗ್ಯಾದಾ. ಬೆಳತನ ಚಳಿ ಜ್ವರದಾಗಾ ಮಗ, ಮಗ ಅಂತ ಕನವರಸ್ತಿದ್ದ ಎಂದ ಅಮರಮ್ಮಳ ಮೇಲೆ ಕೋಪಗೊಂಡ ದುರುಗಪ್ಪ ನಿಮ್ಗ ಹೇಳಿ ಹೇಳಿ ನನ್ಗೇ ಸಾಕಾಗ್ಯಾದಾ. ಹಗಲು ರಾತ್ರಿ ನಾಕೊತ್ತು ಮಗ, ಮಗ ಅಂತ ಬಡ್ಕತೀರಿ, ರಾತ್ರಿ ಕನಸನ್ಯಾಗನೂ ಮಗ್ನ ಬಗ್ಗೆ ಚಿಂತೆ ಮಾಡ್ತೀರಿ ಆದ್ರ ಅತ ಬರಲ್ಲಾ. ಸುಮ್ನೆ ಕನವರಿಸಿ ಕುಲ್ಲಿ, ಕುಲ್ಲಿ ಸಾಯಬ್ಯಾಡ್ರಿ ಎಂದು ಗದರಿದ ದುರುಗಪ್ಪನ ಮಾತಿಗೆ ಪ್ರತ್ಯುತ್ತರವನ್ನಾಡದ ಅಮರಮ್ಮಳನ್ನು ಕಂಡು ಮರುಕಗೊಂಡ ದುರುಗಪ್ಪ ಯಮ್ಮ ಇವತ್ತು ರಾಮಪ್ಪ ಕೆಲ್ಸಕ ಹೋಗಲ್ಲ ಅಂದಿದ್ದ. ಅತನ್ವು ಎತ್ತು ಬಂಡಿ ಖಾಲಿ ರ‍್ಬೇಕು, ಕೇಳಿ ಬಂಡಿ ಇದ್ರೆ ಕಟ್ಕಂಡು ರ‍್ತೀನಿ ಎಂದು ದುರುಗಪ್ಪ ಹೋದಾಗ ಅಮರಮ್ಮಗೆ ಎಲ್ಲೋ ಒಂದು ಕಡೆ ಆಶೆ ಚಿಗುರಿದಂತಾಯಿತು. ಇಲ್ಲೋ ಮಾರಾಯ ಎತ್ತು ದಣದಾವಾ ಅದ್ಕ ನಾ ಇವತ್ತು ಗಳೇವು ಕಟ್ಟಿಲ್ಲಾ, ಬೇಕಾದ್ರೆ ಬಂಡಿ ತಗಂಡು ಹೋಗು ನಾ ಬ್ಯಾಡ ಅನಲ್ಲ ಎಂದಾಗಾ ದುರುಗಪ್ಪನಿಗೆ ದಿಕ್ಕು ತೋಚದಂತಾಯಿತು. ಓಡಿ ಬಂದು ಅಮರಮ್ಮಳಿಗೆ ಸುದ್ದಿ ಮುಟ್ಟಿಸಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ನೋಡಪ್ಪ ಮತ್ಯರ‍್ವರಾ ಎತ್ತು ಹುಡುಕು, ಮುದುಕಗ ಮತ್ತಿಷ್ಟು ಜ್ವರ ಜಾಸ್ತಿ ಆಗಾಕ ಅತ್ಯವಾ. ಎಂದು ದಯಾನೀಯವಾಗಿ ಬೇಡಿಕೊಳ್ಳುವುದನ್ನು ನೋಡಲಾಗದೇ ದುರುಗಪ್ಪ ಮಾರೆಪ್ಪನ ಮನಿಗೆ ಓಡಿದ. ಅಲ್ಲಿ ಹೇಗೋ ಕಾಡಿ, ಬೇಡಿ ಎತ್ತುಗಳನ್ನು ಹೊಡೆದುಕೊಂಡು ಹೋಗಿ ರಾಮಪ್ಪನ ಮನೆಯ ಬಂಡಿ ಕಟ್ಟಿಕೊಂಡು ಬರುವುದನ್ನು ಕಂಡ ಅಮರಮ್ಮಳಿಗೆ ಹೋದ ಜೀವ ಮರಳಿ ಬಂದಂತಾಯಿತು. ಮೋಡ ಕಟ್ಟಿದೆ, ಹನಿ, ಹನಿ ಮಳೆ ಸುರಿಯುತ್ತಿದೆ. ಇತ್ತ ಈರಪ್ಪನ ಮೈ ನಡುಗುವ ಸ್ಥಿತಿಯಲ್ಲೇ ಇದ್ದುದ್ದರಿಂದ ಬಂಡಿಯ ಮೇಲೆ ಹತ್ತಲೂ ಆಗದ ಸ್ಥಿತಿಯಲ್ಲಿದ್ದುದ್ದನ್ನು ಕಂಡ ದುರುಗಪ್ಪ ಈರಪ್ಪನನ್ನು ಎತ್ತಿ ಬಂಡಿಯ ಮೇಲೆ ಕುಳ್ಳಿರಿಸಿದ. ಅಮರಮ್ಮಳೂ ಸಹ ಸುರಿಯುವ ಹನಿಯನ್ನು ಲೆಕ್ಕಿಸದೇ ಬಟ್ಟೆಯನ್ನು ಈರಪ್ಪನ ಮೇಲೆ ಹೊದಿಸಿ ಜಾಗ್ರತೆ ಮಾಡಿದಳು. ದುರುಗಪ್ಪ ದಡ, ದಡ ಬಂಡಿ ಹೊಡೆದು ಪಟ್ಟಣ ಸೇರಿದರು. ವೈದ್ಯರ ಬಳಿ ಈರಪ್ಪನ್ನನ್ನು ಎತ್ತಿಕೊಂಡೇ ಹೋದ. ಎಲ್ಲವನ್ನೂ ಪರೀಕ್ಷಿಸಿದ ವೈದ್ಯರು ಇಷ್ಟು ತಡ ಯಾಕ ಮಾಡಿದ್ರಿ? ಜ್ವರ ನೂರು ದಾಟಿದೆ, ಅಲ್ದೇ ಚಳಿ ಜ್ವರ ಬೇರೆ ವಿಪರೀತ ಇವೆ, ಬೇಜವಾಬ್ದಾರಿ ಮಂದಿ ನೀವು ಎಂದು ಬೈಯುವುದನ್ನು ಕೇಳಿದ ದುರುಗಪ್ಪ ಇಲ್ಲ ಸರ್ ಅವರ ಮನೆಯಲ್ಲಿ ಯಾರೂ ಇಲ್ಲ ಅದ್ಕೆ ನಾಕು ದಿನ ತಡ ಆತು ಸರ್, ನಾನು ಅವರ ಪಕ್ಕದ ಮನೆಯವ ಎಂದಾಗ, ವೈದ್ಯರು ಯಾಕೆ ಇವರಿಗೆ ಮಕ್ಕಳಿಲ್ವಾ? ಎಂದಾಗ ಇಲ್ಲ ಸರ್ ಇವ್ರಿಗೆ ಮಕ್ಕಳು ಮೊಮ್ಮೊಕ್ಕಳೂ ಎಲ್ರೂ ಇದಾರೆ ಆದ್ರೇ ಅವ್ರು ಎಲ್ರೂ ಅವರವರ ಕೆಲಸದಾಗ ಪಟ್ಟಣದಲ್ಲಿ ಇದಾರೆ. ಇವ್ರು ಮಾತ್ರ ಹಳ್ಯಾಗ ಇದ್ದಾರ ಎಂದಾಗ ಕೋಪಗೊಂಡ ವೈದ್ಯರು ತಂದೆ ತಾಯಿಗಳಿಗೆ ಜ್ವರ ಬಂದಾಗ ತೋರಿಸಲು ಬರಲಾರದಷ್ಟೂ ಪುರುಸೊತ್ತಿಲ್ಲದ ಮಕ್ಕಳೇ? ಅಷ್ಟು ಸಮಯ ಅವರಿಗೆ ಸಿಗಲಾರದೇ? ಏನು ಕಾಲ ಬಂತಪ್ಪ ಎಂದು ಗೊಣಗುತ್ತಾ ವೈದ್ಯರು ಚಿಕಿತ್ಸೆ ನೀಡಿ ಗುಳಿಗೆ ಬರೆದು ಕೊಟ್ಟು, ಇವು ಒಂದು ವಾರ ತಗೊಳ್ಳಿ ಎಲ್ಲವೂ ಸರಿ ಹೋಗುತ್ತೆ ಎಂದ ವೈದ್ಯರು ಬೇರೆ ರೋಗಿಯನ್ನು ನೋಡಲಣಿಯಾದರು.
ಏನ್ ಮುದೆಕಿ ಅಜ್ಜಗ ಅರಮಾಗ್ಯಾದಾ? ಸ್ವಲ್ಪ ಪರವಾಗಿಲ್ಲಪ ಕೆಮ್ಮು ಕಮ್ಮಿ ಆಗ್ಯಾದಾ, ಚಳಿ ಜ್ವರ ಇಲ್ಲ ಎಂದು ಸಮಾಧಾನದಿಂದ ಉತ್ತರಿಸಿದ ಅಮರಮ್ಮ ನಿಟ್ಟುಸಿರು ಬಿಟ್ಟಂತೆ ಮಾತನಾಡಿದ್ದನ್ನು ಕಂಡ ನಾಗಪ್ಪನಿಗೆ ಕೊಂಚ ಸಮಾಧಾನವಾದಂತೆ ತೋರಿತು.
ಏನ್ ಅಂಬ್ರಮ್ಮ ಒಂದು ವಾರ ಆತು ಮನಿಕಡಿಗೆ ಬಂದಿಲ್ಲಾ, ಎಂಡೆಕಸ ಅಂಗ ಬಿದ್ದಾದ, ಅಕಡೆ ಹೊಲ್ದಾಗ ಮಡಿಕೆ ಹೊಡಿಬೇಕು, ಕಸ ಆರಿಸಿ ನೀರು ಕಟ್ಟಬೇಕು ಇಬ್ರು ಗಂಡ ಹೆಂಡ್ತಿ ನಾಪತ್ತೆ ಎಂದು ಶಂಕರಪ್ಪಗೌಡ ಬಯ್ದಾಗ ಅಮರಮ್ಮಳಿಗೆ ಮಾತೇ ಬಾರದಾದವು. ಇಲ್ಲ ಗೌಡ್ರೆ ಮುದುಕಗ ಅರಾಮರ‍್ಲಿಲ್ಲ, ಅದ್ಕೆ ಒಂದು ವಾರ ಆತು ಮನ್ಯಾಗ ಆದ್ವಿ. ಇನ್ನೆನು ಮುದುಕಗ ಅರಾಮಾತು ನಾಳೆಯಿಂದ ಕೆಲ್ಸಕ ರ‍್ತೀವಿ. ನಿಮ್ಗ ಅರಾಮಿಲ್ಲ ಅಂದ್ರ ಕೆಲ್ಸ ನಿಲ್ಲತಾದೇನೂ, ಅಂಗೆ ಸಾಲ ತಗಳಾಗ ನೋಡು ಏನೂ ಆಗಿರಲ್ಲ, ಜಡ್ಡು, ರೋಗ ರುಜಿನ ಇವ್ಯಾವೂ ಇರಲ್ಲ, ರೊಕ್ಕ ತಗಂಡ ಆದ ಮ್ಯಾಲೆ ಜಡ್ಡು ರ‍್ತಾದಾ ಎಲ್ಲನೂ ರ‍್ತಾವಾ ಹೌದಲ್ವಾ ಎಂದು ರೇಗಾಡುತ್ತಿರುವ ಗೌಡನ ಮಾತಿಗೆ ಅಮರಮ್ಮಳ ಹತ್ತಿರ ಪ್ರತ್ಯುತ್ತರದ ಮಾತುಗಳೇ ಇಲ್ಲದಾದವು. ಇಲ್ಲ ಗೌಡ್ರೆ ನಿಮ್ಮ ಋಣ ನಮ್ ಮ್ಯಾಲೆ ಬಹಳ ಐತಿ. ಬರೀ ಋಣ ಐತಿ, ಋಣ ಐತಿ ಅಂದ್ಕಾಂತ ಇಂಗಾ ಜೀವ್ನ ಸಾಗಿಸಿ ಬಿಟ್ರಿ. ಅದ್ನಾ ತರ‍್ಸಾದಾದ್ರೂ ಯಾವಾಗ? ನಾಕು ದಿನಕ್ಕೊಮ್ಮೆ ಜರ, ಜಡ್ಡು ಜಾಪತ್ರಿ ಅಂತ ಬಿದ್ರೆ ತರ‍್ಸಾಕ ಆಗ್ತಾದಾ? ಎಂದು ಬಯ್ದಾಟದ ಗೌಡರ ಧ್ವನಿ ಕೇಳಿದ ಈರಪ್ಪ ಮೆಲ್ಲನೆ ಮನೆಯ ಒಳಗಿಂದ ಎದ್ದು ಬಂದ. ಏನ್ ಈರ ನಿನ್ಗಾರಾ ತಿಳ್ಯವಲ್ತಾ? ಒಂದೊಂದು ವಾರ ಕೆಲ್ಸ ಬಿಟ್ರೆ ನನ್ ಗತಿ ಏನು? ಅಲೋಚನೆ ಮಾಡಿದ್ದೀ? ಇಲ್ಲ ಗೌಡ್ರೆ ನನಗ ಮೈಯಾಗ ಜ್ವರ ಇತ್ತು, ಅದ್ಕ ಬಂದರ‍್ಲಿಲ್ಲಾ, ಡಾಕ್ಟರ್‌ ಅತ್ರ ತರ‍್ಸಕಂಡು ಬರಾಕ ಪಟ್ನಕ ಹೋಗಿದ್ವಿ, ಸೂಜಿ ಮಾಡಿ ಗುಳಿಗೆ ಕೊಟ್ಟು ಕಳಿಸ್ಯಾರ, ಇವತ್ ಅರಾಮತು. ನಾಳೆ ಇಬ್ರು ಕೆಲ್ಸಕ ರ‍್ತೀವಿ ಗೌಡ್ರೆ, ನಿಮ್ ಋಣ ಎಷ್ಟು ಜನ್ಮ ಎತ್ತಿ ಬಂದ್ರೂ ತರ‍್ಸಾಕ ಆಗಲ್ಲ. ನಮ್ಗ ಸಾಲ ಕೊಟ್ರಿ, ಮಗನ ಓದ್ಸಾಕ, ಮದುವೆ ಮಾಡಾಕ, ನೌಕರಿಗಂತ ಇಂಗಾ ಎಷ್ಟು ಸಲ ಸಾಲ ಕೊಟ್ಟೀರಿ, ನಾವಿಬ್ರು ಗಂಡ ಹೆಂಡ್ತಿ ಜನ್ಮ ಪೂರ್ತಿ ದುಡಿದ್ರೂ ಅದ್ನಾ ತರ‍್ಸಾಕ ಆಗಲ್ಲ ಗೌಡ್ರೆ, ನಾವು ನಿಮ್ಮ ಋಣದಲ್ಲೇ ಸಾಯ್ತೀವಿ. ಮೊದಲು ದುಡಿರಿ, ಋಣ ತರ‍್ಸಾದೋ ಇಲ್ವೋ ಅಂಗ ಋಣದಾಗ ಸಾಯದೋ ಮುಂದ ನೋಡಾಮು ಎಂದು ಬಾಯಿಗೆ ಬಂದಂತೆ ಬಯ್ಯುತ್ತಾ ಶಂಕ್ರಪ್ಪಗೌಡ ಅಲ್ಲಿಂದ ತಮ್ಮ ಮನೆಯ ಕಡೆ ನಡೆದಾಗ ಅಮರಮ್ಮ ಈರಪ್ಪ ಇಬ್ಬರೂ ನಿಟ್ಟುಸಿರು ಬಿಟ್ಟರು.
ಅತ್ತ ಓಡಿ ಬಂದ ದುರುಗಪ್ಪ ಯಮ್ಮ ಇವಾಗ ನಿನ್ ಮಗ ಪರಶುರಾಮ ಫೋನ್ ಮಾಡಿದ್ದ. ನಾಡ್ದ ಮಾರೆಮ್ಮನ ಜಾತ್ರೆ ಐತ್ಯಲ್ಲ ಅದ್ಕೆ ನಾಳೆ ಹೆಂಡ್ತಿ, ಮಕ್ಳು ಎಲ್ರೂ ರ‍್ತಾರಂತ ಎಂದಾಗ ಅಮರಮ್ಮಳ ಖುಷಿಗೆ ಪಾರವೇ ಇಲ್ಲದಂತಾಯಿತು. ಗೌಡ ಬಂದು ಬಯ್ದೋದ ಮಾತುಗಳು ಎತ್ತಲೋ ಕಾಣೆಯಾದವು. ಅಲ್ಲೇ ನಿಂತಿದ್ದ ನಾಗಪ್ಪನ ಮುಖದಲ್ಲಿಯೂ ನಗೆ ತುಂಬಿ ಬಂದಿತು. ನೂರು ರೂಪಾಯಿ ಮರಳಿ ಬರಬಹುದೆಂಬ ಆಶಾಭಾವನೆ ಎದ್ದು ಕಾಣುತ್ತಿದ್ದಂತೆ ಇತ್ತು. ಮಗನ ಹೆಸರು ಕೇಳುತ್ತಿದ್ದಂತೆ ಜ್ವರದಲ್ಲಿ ಮುಲುಗುತ್ತಾ ಮಲಗಿದ್ದ ಈರಪ್ಪ ದಡಬಡಿಸಿ ಎದ್ದು ಬಂದವನೇ ನಾಳೆ ನನ್ ಮಗ ಬರ‍್ತಾನಾ? ಮೊಮ್ಮಕ್ಕಳು ಬರ‍್ತಾರಾ? ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳತೊಡಗಿದ್ದನ್ನು ಕಂಡ ದುರುಗಪ್ಪ ಮಕ್ಕಳು, ಮೊಮ್ಮೊಕ್ಕಳು ಅಂದ್ರೆ ಬಿದ್ದ ಸಾಯ್ತಿರಿ, ಆದ್ರೆ ಅವರು ನಿಮ್ನಾ ಅಷ್ಟು ಕಾಳಿಜಿ ಮಾಡ್ತಾರಾ? ಅದ್ನ ನಾನಲ್ಲ ಆ ದೇವರೇ ಬಂದು ಹೇಳಿದ್ರೂ ನೀವು ಒಪ್ಪಲ್ಲ ಬಿಡು, ನಾ ಮತ್ಯಾಕ ಮಾತಾಡ್ಲೀ ಎಂದು ಗೊಣಗುತ್ತಾ ಅಲ್ಲಿಂದ ನಡೆದ.
ನಾಳೆ ಬೆಳಿಗ್ಗೆ ಮಗ ರ‍್ತಾನಾ, ಮೊಮ್ಮಕ್ಕಳೂ ರ‍್ತಾರಾ, ಸೊಸೆ ರ‍್ತಾಳಾ ಎಂದು ಇಡೀ ಓಣಿ ತುಂಬೆಲ್ಲಾ ತಿರುಗಾಡಿ, ಚಿಕ್ಕ ಹುಡುಗಿಯಂತೆ ಓಡಾಡಿ ಮಗ ರ‍್ತಾನಾ, ಮೊಮ್ಮಕ್ಕಳು ರ‍್ತಾರಾ ಅಂತ ಡಂಗೂರ ಸಾರಿ ಬಂದ ಅಮರಮ್ಮಳ ಖುಷಿಯ ಪರಿಗೆ ಮಿತಿಯೇ ಇಲ್ಲ. ಸೀದಾ ಇಬ್ಬರು ಗಂಡ ಹೆಂಡತಿ ಶಂಕರಪ್ಪಗೌಡರ ಮನೆಯ ಕಡೆ ಓಡಿದರು. ಗೌಡ್ರೆ ಮಗ, ಸೊಸೆ, ಮೊಮ್ಮಕ್ಕಳು ಅಮ್ಮನ ಜಾತ್ರಿಗೆ ನಾಳೆ ರ‍್ತಾರಾ ಎಂದಾಗ ಶಂಕರಪ್ಪಗೌಡ ಸ್ವಲ್ವ ಒರಟಾಗಿಯೇ ಅದ್ಕೇನೀಗ? ಎಂದು ಗದರಿದಂತೆಯೆ ನುಡಿದ. ಏನಿಲ್ಲ ಗೌಡ್ರೆ ಮಕ್ಕಳು, ಮೊಮ್ಮಕ್ಕಳು ರ‍್ತಾರಲ್ಲಾ ಅದ್ಕೇ ಮನೆ ಖರ್ಚಿಗೆ ಒಂದಿಷ್ಟು ದುಡ್ಡು ಕೊಟ್ಟಿದ್ರೆ ಅನುಕೂಲ ಆಗ್ತಿತ್ತು. ಅಲ್ಲೋ ಈರಪ್ಪ ಹಳೆ ಸಾಲನೇ ಇನ್ನೂ ತರ‍್ಸಿಲ್ಲಾ, ಅದು ಅಂಗ ಬಾಕಿ ಉಳದಾದಾ. ಮತ್ತ ದುಡ್ಡು ಕೊಡು ಅಂದ್ರ ನಾ ಯಾವ ಲೆಕ್ಕದ ಮ್ಯಾಲೆ ಕೊಡ್ಲೀ? ಹೋಗ್ಲಿ ನೀವಾರ ಅದ್ನಾ ಎಂಗ್ ತೀರಿಸ್ತೀರಿ? ಇದ್ಕ ಮೊದಲು ಉತ್ತರ ಕೊಡು ಎಂದಾಗ ಗಂಡ ಹೆಂಡತಿ ಇಬ್ಬರ ಬಾಯಿ ಕಟ್ಟಿದಂತಾಯಿತು. ಗೌಡ್ರೆ ಮುಂದ ದುಡುದು ತೀರಸ್ತಿವಿ. ಅದ್ಕ ನಾವಿಬ್ರು ಗಂಡ ಹೆಂಡ್ತಿ ಮಗ್ನತಾಕ ಪಟ್ನಕ ಹೋಗ್ದಾ ಇಲ್ಲೇ ನಿಮ್ಮ ಕಾಲಾಗ ಬಿದ್ದಿವಿ, ಕೊನಿಗಿ ನಿಮ್ಮ ಋಣದಾಗ ಸಾಯ್ತಿವಿ ಎಂದಾಗ ಗೌಡನ ಬಾಯಿ ಕಟ್ಟಿದಂತಾಗಿ ಮಾತೇ ಬಾರದಾಯಿತು. ಗೌಡ್ರೆ ಊರಹಬ್ಬ, ಅಮ್ಮನ ಜಾತ್ರಿ ಅದ್ರಾಗ ದೊಡ್ಡ ಜಾತ್ರಿ. ಬಟ್ಟೆ ಬರೆ ತಗಬೇಕು, ಮೊಮ್ಮಕ್ಕಳು ರ‍್ತಾರಾ ಹುಡುಗರ ಕೈಯಾಗ ಏನಾರಾ ಕೊಟ್ಟು ಕಳ್ಸಬೇಕು. ಬರಿ ಕೈಯಲ್ಲಿ ಕಳ್ಸಾಕ ಆಗ್ತಾದ ಎಂದು ಗೌಡರನ್ನೇ ಪ್ರಶ್ನಿಸಿದಂತಿತ್ತು. ಮರು ಮತನಾಡದೇ ಗೌಡ ಒಳಗೆ ಹೋಗಿ ದುಡ್ಡು ತಂದು ಕೊಟ್ಟು ನೋಡು ಈರ ನಿಮ್ಗ ದುಡ್ಡು ಕೊಡಾಕ ನನ್ಗ ತ್ರಾಸಿಲ್ಲಾ, ನೀವು ತರ‍್ಸಾದಾದ್ರೂ ಯಾವಾಗ? ಆಯ್ತು ಗೌಡ್ರೆ ನಿಮ್ಮ ಋಣ ತರ‍್ಸೇ ತೀರಸ್ತೀವಿ, ನಿಮ್ಮ ಋಣ ತರ‍್ಸಿಯೇ ನಾವು ಸಾಯ್ತೀವಿ ಎಂದು ಹಣ ಪಡೆದು ಖುಷಿಯಿಂದ ಗಂಡ ಹೆಂಡತಿ ಮನೆಯ ಕಡೆ ನಡೆದರು.
ಅಂದು ರಾತ್ರಿ ಅಮರಮ್ಮ ಈರಪ್ಪ ಇಬ್ಬರೂ ಮಲಗಲೇ ಇಲ್ಲವೆಂದರೂ ನಡಿಯುತ್ತೆ. ಮಗ, ಮೊಮ್ಮಕ್ಕಳ ಆಲೋಚನೆಯಲ್ಲೇ ರಾತ್ರಿ ಕಳೆದರು. ನಾಳೆ ಯಾವ ಅಡುಗೆ ಮಾಡಬೇಕು, ಯಾವ ತರಹದ ರುಚಿ ರುಚಿಯಾದ ಅಡುಗೆ ಮಾಡಬೇಕು ಎಂಬ ಅಲೋಚನೆಯಲ್ಲೇ ರಾತ್ರಿ ಕಳೆದ ಅಮರಮ್ಮ ಈರಪ್ಪನ ಖುಷಿಯಲ್ಲಿ ಜ್ವರ ಕಾಣೆಯಾದವು. ಅಮರಮ್ಮಳಿಗೂ ಹೊಸ ಹುಮ್ಮಸ್ಸೇ ಬಂದಂತಾಯಿತು.
ಮುಂಜಾನೆ ಬೇಗ ಎದ್ದವರೇ ಕಸಬಳಿದು ಸೆಗಣಿಯಿಂದ ಮನೆ ಸಾರಿಸಿ ಮದುವೆಯ ಮನೆಯಂತೆ ಸಿಂಗರಿಸಿದರು. ಮಗ, ಸೊಸೆ, ಮೊಮ್ಮಕ್ಕಳ ಸ್ವಾಗತಕ್ಕಾಗಿ ಇಬ್ಬರೂ ಕಾಯುತ್ತಾ ಕುಳಿತರು. ಹೀಗೆ ಕಾಯುತ್ತಾ ಕುಳಿತ ಅವರ ಸಮಯ ಪ್ರತಿ ಕ್ಷಣವೂ ಒಂದೊಂದು ಯುಗ ಕಳೆದಂತೆ ಆಗಿರಬಹುದು.
ಕಾರಿನಲ್ಲಿ ಬಂದ ಮಗ, ಸೊಸೆ, ಮೊಮ್ಮಕ್ಕಳನ್ನು ಕಂಡ ಈರಪ್ಪ ಮತ್ತು ಅಮರಮ್ಮಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಅವರ ಆಗಮನದಿಂದಾಗಿ ಮನೆಯ ತುಂಬೆಲ್ಲಾ ಸಂಭ್ರಮದ ವಾತಾವರಣ. ಅಮರಮ್ಮಳ ಜ್ವರ, ಈರಪ್ಪನ ಚಳಿ ಜ್ವರ ಕಾಣದಾದವು, ಔಷಧಿ ಗುಳಿಗೆಗಳೂ ನಾಪತ್ತೆಯಾದವು.
ಮಗ ಪರಶುರಾಮ, ಸೊಸೆ ಅನಿತಾ ಮೊಮ್ಮೊಕ್ಕಳು ಅಕ್ಷತಾ ಮತ್ತು ಕಾರ್ತಿಕಾ ಮನೆತುಂಬಾ ಓಡಾಡಿದಂತೆಲ್ಲಾ ಅಮರಮ್ಮ ಈರಪ್ಪನ ಖುಷಿಗೆ ಮಿತಿಯಿಲ್ಲ. ಜಾತ್ರೆಯ ಮುಂಜಾನೆ ದಿನ ಅಮರಮ್ಮ, ಈರಪ್ಪ ಇಬ್ಬರೂ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ಮಾರೆಮ್ಮನ ಗುಡಿಗೆ ಸನಾಯಿ ಮೂಲಕ ಎಲ್ಲರೂ ದೇವಿ ದರ್ಶನಕ್ಕೆ ಹೋದರು. ಅಲ್ಲಿ ಕಾಯಿ ಕರ್ಪೂರ ಎಡೆ ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿದರು. ಮನೆಯಲ್ಲಿ ಹೋಳಿಗೆ, ಕರಿಗಡಬು, ಅನ್ನ, ಸಾರು ಹೊಟ್ಟೆತುಂಬಾ ಉಂಡರು. ಮನೆಯಲ್ಲಿ ಗದ್ದಲವೋ ಗದ್ದಲ. ಪರಶುರಾಮ ಓಣಿಯ ತುಂಬಾ ಓಡಾಡಿ ಅಲ್ಲಲ್ಲಿ ತನ್ನ ಗೆಳೆಯರನ್ನು, ಸಹಪಾಠಿಗಳನ್ನು ಮಾತನಾಡಿಸಿ ತನ್ನ ಹಳೆಯ ನೆನಪನ್ನು ಹಂಚಿಕೊಂಡನು. ಮಾಮಾ, ಅಕ್ಕ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಎಂದು ಓಣಿಯ ತುಂಬೆಲ್ಲಾ ಓಡಾಡಿ ಬಂಧು-ಬಾಂಧವರನ್ನು ಮಾತನಾಡಿಸಿ ಕುಶಲಕ್ಷೇಮದ ಬಗ್ಗೆ ವಿಚಾರಿದ. ಸಂಜೆ ದೇವಿಯ ರಥೋತ್ಸವಕ್ಕೆ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ಈರಪ್ಪ ಅಮರಮ್ಮ ಹೋದರು. ಜಾತ್ರೆ ತುಂಬೆಲ್ಲಾ ತಿರುಗಾಡಿ ಮೊಮ್ಮಕ್ಕಳು ಕೇಳಿದ ಮಂಡಾಳು, ಸಿಹಿ ತಿನಿಸು, ಆಟಿಕೆ ಸಾಮಾನುಗಳನ್ನು ಕೊಡಿಸಿದರು. ಜಾತ್ರೆಗೆ ಬಂದ ಬಂಧು ಬಳಗದವರಿಗೆಲ್ಲಾ ಇವರು ನನ್ನ ಮೊಮ್ಮಕ್ಳು, ಪಟ್ನದಾಗ ಇರ್ತಾರಾ, ಇತ ನನ್ನ ಮಗ, ದೊಡ್ಡ ನೌಕರಿ ಮಾಡ್ತಾನಾ, ದೊಡ್ಡ ಮನೆ ಕಟ್ಟಿಸ್ಯಾನ ಬಹಳ ಆರಾಮ ಅದಾರಾ ಎಂದು ಕಂಡ ಕಂಡವರಿಗೆ ಅವರನ್ನು ಪರಿಚಯ ಮಾಡುತ್ತಾ ಹೋಗುವುದನ್ನು ನೋಡಿದರೆ ಅಮರಮ್ಮಳ ಸಂತೋಷಕ್ಕೆ ಮಿತಿಯುಂಟೇ ಎಂದು ಪ್ರಶ್ನಿಸಿಕೊಳ್ಳಬೇಕಿತ್ತು. ರಾತ್ರಿ ಇಡಿ ಕುಟುಂಬವೇ ಒಟ್ಟುಗೂಡಿ ಊಟ ಮಾಡಿದರು. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದರು. ರಾತ್ರಿಯಲ್ಲಾ ಕರೆಂಟ್ ಹೋಗುವುದು ಬರುವುದು ಕಣ್ಣಾಮುಚ್ಚಾಲೆ ಮಾಡಹತ್ತಿತ್ತು. ದ್ವಾಮರಿಗಳು ಗುಂಯ್ ಎಂದು ಶಬ್ದ ಮಾಡುತ್ತಿರುವಾಗ ಪಟ್ಟಣದ ಮಂದಿಗೆ ನಿದ್ದೆ ತಾನೆ ಹೇಗೆ ಬಂದಿತು? ಅತ್ತೆ ಇಲ್ಲಿ ಕರೆಂಟ್ ಇಂಗ ಹೋಗ್ತದಾ? ಎಂದ ಸೊಸೆಯ ಮಾತಿಗೆ ಹೌದಮ್ಮ ಅದು ಸರಕಾರ ಕೊಟ್ಟ ಪ್ರೀ ಕರೆಂಟ್ ಯಾವಾಗೋ ರ‍್ತಾದೋ! ಇನ್ಯವಾಗೋ ಹೋಗ್ತಾದೋ ಅದೇನ್ ನಮ್ಗ ಲೆಕ್ಕಕ್ಕಿಲ್ಲ. ಬಂದಾಗ ಬರ್ಲಿ, ಹೋದಾಗ ಹೋಗ್ಲಿ ಎಂದಳು. ಮತೆ ಈ ದ್ವಾಮೆ ಬೆಳತನ ಇಂಗ ರ‍್ತಾವಾ? ಎಂದ ಮೊಮ್ಮಕ್ಕಳ ಮಾತಿಗೆ ಹೌದಪ್ಪ ಅವು ಅಂಗ ಓಡಾಡ್ತಾವಾ ಸ್ವಲ್ಪೊತ್ತು ಇದ್ದು ಹೋಗತಾವಾ. ಮಕ್ಕಳು ಆಗಾಗ ಕುದಸ್ತಾದ, ಸೊಳ್ಳೆ ಕಡಿತಾವಾ ಎಂದು ಎದ್ದು ಕುಳಿತಾಗ ಪರಶುರಾಮ ಮಕ್ಕಳನ್ನು ಮಲಗಿಸಿ ಬೀಸಣಿಕೆಯಿಂದ ಗಾಳಿ ಬೀಸುತ್ತಾ ಇಡೀ ರಾತ್ರಿಯೆಲ್ಲಾ ಶಿವರಾತ್ರಿ ಆಚರಣೆ ಮಾಡಿದರು. ಬೆಳಿಗ್ಗೆ ಎದ್ದಾಗ ಸ್ನಾನ ಮಾಡಲೂ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇರುವುದಿಲ್ಲ. ಹೇಗೋ ಸ್ನಾನ ನಿತ್ಯ ಕರ್ಮ ಮುಗಿಸಿಕೊಂಡು ಮರಳಿ ಹೊರಡಲು ಅಣಿಯಾದರು. ಅಲ್ಲಪ್ಪ ಮೊನ್ನೆ ಬಂದ್ರಿ ನಿನ್ನೆ ಜಾತ್ರಿ ಇವತ್ ಹೋದ್ರ ಹೆಂಗ? ಒಂದೆರಡು ದಿನ ಇರಬಾರದಾ? ಎಂದ ತಾಯಿ ಮಾತಿಗೆ ಯಮ್ಮ ನಮಗೆ ಇಲ್ಲಿ ಸರಿ ಹೋಗಲ್ಲ. ರಾತ್ರಿ ಕರೆಂಟ್ ಇರಲ್ಲ, ಶೌಚಾಲಯ ಇಲ್ಲ, ಸ್ನಾನ ಮಾಡಾಕಾ ಅನುಕೂಲ ಇಲ್ಲ, ಮಕ್ಕಳಿಗೆ ಬಹಳ ತೊಂದರೆ ಆಗ್ತದಾ. ಅಲ್ಲಿ ಮಕ್ಕಳ ಶಾಲೆ ತಪ್ಪತಾವಾ, ನಾನೂ ಕೆಲಸಕ್ಕೆ ಹೋಗಬೇಕು ಎಂದು ವರದಿ ಒಪ್ಪಿಸಿದಾಗ ತಂದೆ ತಾಯಿಯಾದರೂ ಏನು ಮಾತನಾಡಿಯಾರು? ಆಯ್ತಪ್ಪ ಹೋಗ್ರಿ ಎಂದು ಭಾರವಾದ ಮನಸಿನಿಂದ ನುಡಿದಳು. ಆಯ್ತಮ್ಮ ಮತ್ತೆ ರ‍್ತಿವಿ ಎಂದ ಮಗನ ಮಾತಿಗೆ ಮತ್ಯಾವಾಗ ರ‍್ತಿರಪ್ಪ ಮುಂದಿನ ಅಮ್ಮನ ಜಾತ್ರಿಗಿ, ಇಲ್ಲ ನಾವು ಸತ್ತಾಗ ಎಂದಾಗ ಮಗನ ಮಾತು ಕಟ್ಟಿಹೋಯಿತು. ಮರಳಿ ಹೊರಡಲು ಕಾರು ರೆಡಿಯಾಯಿತು. ಮಗ, ಸೊಸೆ, ಮೊಮ್ಮಕ್ಕಳು ಕಾರಿನಲ್ಲಿ ಕುಳಿತರು. ಧೂಳೆಬ್ಬಿಸುತ್ತಾ ಹೊರಟ ಕಾರನ್ನು ಅಮರಮ್ಮ ಈರಪ್ಪ ಮರೆಯಾಗುವವರೆಗೂ ನೋಡುತ್ತಾ ಮೊಮ್ಮಕ್ಕಳ ಕಡೆ ಕೈ ಬೀಸುತ್ತಾ ನಿಂತರು.
ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಮರಳಿ ಪಟ್ಟಣಕ್ಕೆ ಕಳುಹಿಸಿದ ಈರಪ್ಪ ಮತ್ತು ಅಮರಮ್ಮ ಮಂಕಾಗಿ ಕುಳಿತರು. ಎಲ್ಲಿ ನಿಂತರೂ, ಕುಳಿತರೂ ಸಮಾಧಾನವಿಲ್ಲದೆ ಗರಬಡಿದವರಂತಾದರು. ರಾತ್ರಿ ಮಲಗಿದರೂ ನಿದ್ದೆ ಎತ್ತಲಿಂದ ಬಂದೀತು? ಇರುವ ಎರಡು ಮುದಿ ಜೀವಗಳು ಒಬ್ಬರಿಗೊಬ್ಬರು ಮುಖ ನೋಡುತ್ತಾ ನೆಲಕ್ಕೊರಗಿದರು. ರಾತ್ರಿಯೆಲ್ಲಾ ನಿದ್ದೆಯ ಬದಲಿಗೆ ಕನವರಿಕೆ.
ಬೆಳಿಗ್ಗೆ ಎದ್ದವರೇ ಈರಪ್ಪ, ಅಮರಮ್ಮ ಶಂಕರಪ್ಪಗೌಡರ ಮನೆಯ ಕಡೆ ನಡೆದರು. ನಾಲ್ಕಾರು ದಿನಗಳಿಂದ ಬಿದ್ದಿದ್ದ ದನದ ಸೆಗಣಿ, ಮೂತ್ರ, ದನಗಳು ತಿಂದು ಉಳಿದಿದ್ದ ಹುಲ್ಲಿನ ಕಸ ಎಲ್ಲವೂ ನಾರುತ್ತಿತ್ತು. ಅದೆಲ್ಲವನ್ನೂ ಸ್ವಚ್ಛಗೊಳಿಸಿ ಕಸವನ್ನು ಎಂಡೆಬುಟ್ಟಿಯೊಳಗೆ ತುಂಬಿಕೊಂಡೋಗಿ ತಿಪ್ಪೆಗಾಕಿ ಬರುವುದರೊಳಗೆ ಇಬ್ಬರಿಗೂ ಸುಸ್ತಾಗಿ ಹೋಯಿತು. ನಂತರ ಗೌಡತಿ ಶರಣಮ್ಮ ರಾತ್ರಿ ಉಳಿದ-ಹಳಸಿದ ಅಡುಗೆ ಅವರಿಗೆ ನೀಡಿದರು. ಅದನ್ನು ಉಡಿಯೊಳಗೆ ತುಂಬಿಕೊಂಡು ಮನೆಗೆ ಬಂದರು. ಅದನ್ನೇ ಅಮೃತವೆಂಬಂತೆ ಊಟ ಮಾಡಿದರು. ಅದರಲ್ಲೇ ಉಳಿದ ಅನ್ನವನ್ನು ಕಟ್ಟಿಕೊಂಡು ಹೊಲದ ಕಡೆ ನಡೆದರು. ಅಷ್ಟರೊಳಗೆ ಶಂಕ್ರಪ್ಪಗೌಡ ಬಂದು ಹೊಲದಲ್ಲಿ ಕುಳಿತಿದ್ದ. ಈರಪ್ಪ ಅಮರಮ್ಮ ಬಂದೊಡನೆ ಕಳೆ ತೆಗೆಯುವುದು, ಮಡಿಕೆ ಹೊಡೆಯುವುದು, ಕುಂಟೆ ಹೊಡೆಯುವುದು, ದನಗಳಿಗೆ ಹಸಿಹುಲ್ಲು ಕೊಯ್ಯೂವುದು, ಮನೆಗೆ ಕಟ್ಟಿಗೆ ತರುವುದು ಹೀಗೆ ಶಂಕ್ರಪ್ಪಗೌಡ ಉಸಿರು ನಿಲ್ಲಿಸದೇ ಒಂದು ತಿಂಗಳಿಗಾಗುವಷ್ಟು ಕೆಲಸ ಪಟ ಪಟನೆ ಹೇಳಿದ ಗೌಡನ ಮಾತಿಗೆ ಪ್ರತಿಯಾಡದೇ ಇಬ್ಬರೂ ಬರೀ ಹುಂ ಎನ್ನುವ ರೀತಿಯಲ್ಲಿ ತಲೆ ಅಲ್ಲಾಡಿಸುತ್ತಾ ನಿಂತಿದ್ದರು.
ಬತ್ತದ ಗದ್ದೆಯೊಳಗೆ ಬೆಳೆದಿದ್ದ ಕಳೆ ಕಸವನ್ನು ಅಮರಮ್ಮ ಬಾಗಿ ಎದ್ದು ಕಿತ್ತಿ ಕಿತ್ತಿ ತಂದು ಬದುವಿಗೆ ಹಾಕುತ್ತಿದ್ದಳು. ಕಿತ್ತಿದ ಕಳೆಯನ್ನು ಒಂದೊಂದು ಸಲ ಕೈಯಲ್ಲಿ ಮತ್ತೊಂದು ಸಲ ತಲೆಯ ಮೇಲಿಟ್ಟುಕೊಂಡು ತಂದು ಬದುವಿಗೆ ಹಾಕುವಾಗ ಮೈಯೆಲ್ಲಾ ಕೆಸರು ಸುರಿಯುತ್ತಿತ್ತು. ಗದ್ದೆಯ ಕೆಸರೊಳಗೆ ಕಾಲು ಸಿಕ್ಕಿಹಾಕೊಂಡರೂ ಶಕ್ತಿಯಲ್ಲಾ ತಂದುಕೊಂಡು ಕಾಲು ಕೀಳುತ್ತಾ ಸಾಗಬೇಕಾದರೆ ಅಮರಮ್ಮ ಹರಸಹಾಸ ಪಡಬೇಕಾಗುತ್ತಿತ್ತು. ಅತ್ತ ಈರಪ್ಪ ಎತ್ತಿನ ಗಳೇವು ಮೂಲಕ ಹತ್ತಿ ಹೊಲದೊಳಗೆ ಬೆಳೆದಿದ್ದ ಕಳೆ ಕಸವನ್ನು ಕಿತ್ತಲು ಕುಂಟೆ ಹರಗುವ ಕ್ರಿಯೆಯಲ್ಲಿ ತೊಡಗಿದ್ದ. ನೆತ್ತಿಯ ಮೇಲೆ ಉರಿಬಿಸಿಲು ಸುರಿಯುತ್ತಿದ್ದರೂ ಲೆಕ್ಕಿಸದೇ ಈರಪ್ಪ ಗಳೇವು ಹೊಡೆಯುತ್ತಿದ್ದ. ಅಂದು ಅಮರಮ್ಮ ಈರಪ್ಪ ಗಂಡ ಹೆಂಡತಿ ಇಬ್ಬರೂ ದನಗಳು ದುಡಿದಂತೆ ದುಡಿದರು. ಬಿಡುವಿಲ್ಲದೇ ನಿರಂತರವಾಗಿ ಸಂಜೆ ಕತ್ತಲು ಕವಿಯುವವರೆಗೂ ಕೆಲಸ ಮಾಡಿಯೇ ಮಾಡಿದರು. ಮನೆಗೆ ಬರುವುದರೊಳಗೆ ಕತ್ತಲು ಕವಿದಿತ್ತು. ಉಳಿದಿದ್ದ ಅಲ್ಪ ಸ್ವಲ್ಪ ಅನ್ನ ಸಾರು ಉಂಡು ಮಲಗಿದರು. ಅವರು ಬಹಳ ದಣಿದಿದ್ದರಿಂದ ಕೈಕಾಲುಗಳೆಲ್ಲಾ ತುಂಬಾ ನೋಯಲಾರಂಭಿಸಿದವು. ಈರಪ್ಪ ಅಮರಮ್ಮ ಇಬ್ಬರೂ ತಮ್ಮ ತಮ್ಮ ಕೈ ಕಾಲುಗಳನ್ನು ತಾವೇ ಒತ್ತಿಕೊಳ್ಳುತ್ತಾ ಮಲಗುವಂತ್ತಾಗಿತ್ತು. ಅಷ್ಟು ನೋವು ಕೊಡಲಾರಂಭಿಸಿದವು. ನೋವು ಹೆಚ್ಚಾಗಿರುವುದರಿಂದ ನಿದ್ದೆ ಹತ್ತಲು ಮಧ್ಯರಾತ್ರಿ ಎಷ್ಟೋ ಹೊತ್ತಾಗಿತ್ತು. ಮತ್ತದೇ ಬೆಳಿಗ್ಗೆ ಎದ್ದವರೇ ಗೌಡರ ಮನೆಯ ಅದೇ ಕೆಲಸ.
ನಾಲ್ಕಾರು ದಿನಗಳ ಕಾಲ ಬಿಟ್ಟು ಬಿಡದೇ ಕೆಲಸ ಮಾಡಿಯೇ ಮಾಡಿದರು. ಈರಪ್ಪ ಹತ್ತಿ ಹೊಲದಲ್ಲಿ ಗಳೇವು ಹೊಡೆದು ಇಪ್ಪತ್ತು ಎಕರೆ ಹೊಲದಲ್ಲಿ ಕಳೆ ನಾಶ ಮಾಡಿದ. ಅತ್ತ ಅಮರಮ್ಮ ನಾಲ್ಕೈದು ಎಕರೆ ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಬಾಗಿ, ಎದ್ದು ಕಿತ್ತು ಕಿತ್ತು ಬದುವಿಗೆ ತಂದು ಹಾಕುವುದರೊಳಗೆ ಸಾಕು ಸಾಕಾಗಿ ಹೋಯಿತು. ಇಬ್ಬರ ಶ್ರಮದಿಂದ ನಾಲ್ಕಾರು ದಿನದಲ್ಲಿ ಹೊಲವೆಲ್ಲಾ ಹಸನಾಗಿ ಕಳೆಕಟ್ಟಿತು. ಇಬ್ಬರೂ ಹೊಲದಲ್ಲಿ ನಿಂತು ಕಣ್ಣುತುಂಬಾ ನೋಡಿಯೇ ನೋಡಿದರು. ನಾವು ಮದ್ವೆ ಆದಾಗ ಗೌಡರ ಇದೇ ಹೊಲದಲ್ಲಿ ಇಲ್ಲಿಯೇ ತಾನೆ ನಮ್ಮ ಜೀವನ ಪ್ರಾರಂಭಗೊAಡಿದ್ದು. ಇಡೀ ಜೀವನಪೂರ್ತಿ ದುಡಿದಿದ್ದು, ನಮ್ಮ ಜೀವನದ ಬಹುಪಾಲು ಮಧುರ ಕ್ಷಣಗಳನ್ನು ಇಲ್ಲಿಯೇ ಕಳೆದದ್ದು, ಗೌಡ್ರು ಕೊಟ್ಟ ಹಣದಿಂದ ಮಗನನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ್ದು, ಅವರ ಹಣದಿಂದಲೇ ನಮ್ಮ ಮಗನ ಮದ್ವೆ ಮಾಡಿಸಿದ್ದು. ಗೌಡ್ರು ನಮ್ಗೆ ಎಷ್ಟೇಲ್ಲಾ ಸಹಾಯ ಮಾಡ್ಯಾರಾ. ಅವ್ರು ಕೊಟ್ಟ ಹಣಕ್ಕೆ ನಾವು ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಿಲ್ಲಾ ಅನಸ್ತದಾ. ನಾವು ಇನ್ನೊಂದು ಜನ್ಮ ಎತ್ತಿಬಂದರೂ ಗೌಡ್ರಋಣ ತರ‍್ಸಾಕ ಆಗಲ್ಲಾ ಎಂದು ಏನೇನೋ ತಡಬಡಿಸುತ್ತಿದ್ದ ಅಮರಮ್ಮಳನ್ನು ಈರಪ್ಪ ನಡಿನಡಿ ಕತ್ಲಾತು ಎಂದಾಗ ಅಮರಮ್ಮ ಹಿಂದಿರಿಗಿ ಹಿಂದಿರಿಗಿ ನೋಡುತ್ತಾ ನಡೆದಳು. ಮನೆಗೆ ಬರುವುದರೊಳಗೆ ಕತ್ತಲಾಗಿತ್ತು. ಬಹಳ ದಣಿದಿದ್ದರಿಂದ ಊಟ ಮಾಡಬೇಕೆಂದು ಅವರಿಗೆ ಅನಿಸಲಿಲ್ಲ. ಇಬ್ಬರೂ ಹಾಸಿಗೆಯ ಮೇಲೆ ಹೊರಳಾಡಿದರೂ ನಿದ್ದೆ ಹತ್ತಲಿಲ್ಲ. ನಮಗೆ ಮದುವೆಯಾದಗಿನಿಂದ ಗೌಡರ ದನದ ಕೊಟ್ಟಿಗಿಯೇ ನಮಗೆ ವಾಸಸ್ಥಾನ, ಅವರು ನೀಡಿದ ಹಳಸಿದ ಅನ್ನವೇ ಅಮೃತ, ಗೌಡರ ಹೊಲವೇ ನಮಗೆ ಜೀವನದ ಸುಖ-ದುಃಖಗಳ ಹಂಚಿಕೊಳ್ಳುವ ತಾಣವಾಗಿತ್ತು. ಎನೇನೋ ಮಾತನಾಡಿಕೊಳ್ಳುತ್ತಾ ಇಬ್ಬರು ಒಬ್ಬರನ್ನೊಬ್ಬರು ಕಣ್ಣು ಬಡಿಯದೇ ನೋಡಹತ್ತಿದರು. ಹೀಗೆ ಒಬ್ಬರನ್ನೊಬ್ಬರು ನೋಡುತ್ತಾ ನೋಡುತ್ತಾ ಹಾಗೆಯೇ ಕಣ್ಣು ಮುಚ್ಚಿದರು.
ಹೊತ್ತು ಏರಾಕತ್ಯಾದ ಈ ಮುದುಕುರು ಎದ್ದೇ ಇಲ್ಲಾ, ಬೆಳಿಗ್ಗೆ ಎದ್ದವರೇ ಗೌಡ್ರ ಮನಿಗೆ ಕಸ ಬಳ್ಯಾಕ ಹೋಗೋರು, ಇನ್ನೂ ಮಲಿಗ್ಯಾರಾ. ಇವ್ರುಗಿ ಮತ್ತೆನಾತೋ ಏನೋ, ಜ್ವರ ಗಿರ ಬಂದ್ವೊ ಏನೋ ಎಂದು ಗೊಣಗುತ್ತಾ ದುರುಗಪ್ಪ ಮನೆಯ ಒಳಗೆ ನಡೆದ. ಇಬ್ಬರೂ ಮಲಿಗಿಯೇ ಇದ್ದಾರೆ. ಯಮ್ಮ, ಯಮ್ಮ ಎಂದು ಕರೆದ ಮಾತಿಲ್ಲ. ಈರಪ್ಪ ತಾತ ಎಂದರೂ ಮಾತಾಡಲಿಲ್ಲ. ಪಾಪ ಮುದುಕರು ಬಹಳ ದಣಿದಿರಬೇಕು ಅದ್ಕೆ ಇವ್ರುಗಿ ಬಹಳ ಜೋರು ನಿದ್ದೆ ಬಂದಿರಬೇಕು ಎನ್ನುತ್ತಾ ಈರಪ್ಪ ತಾತಾ ಎಂದು ಮೈ ಮುಟ್ಟಿ ಎಬ್ಬಿಸಿದ ಮಾತಿಲ್ಲಾ. ಯಮ್ಮ ಯಮ್ಮ ಎಂದು ಮಾತಾಡಿಸಿದ ಇಬ್ಬರೂ ಮಾತಾಡಲಿಲ್ಲ. ದುರುಗಪ್ಪನಿಗೆ ಆಶ್ಚರ್ಯ! ಇಬ್ಬರಲ್ಲೂ ಪ್ರತಿಕ್ರಿಯೆ ಇಲ್ಲ. ಇಬ್ಬರದೂ ಉಸಿರು ನಿಂತು ಎಷ್ಟೋ ಹೊತ್ತಾಗಿತ್ತು. ಒಮ್ಮಲೇ ಗಾಬರಿಯಾದ! ದುರುಗಪ್ಪ ಹೊರಗೆ ಓಡಿ ಬಂದವನೇ ಅಕ್ಕ ಪಕ್ಕದ ಮನೆಯವರನ್ನು ಕರೆದ. ಸುತ್ತ ಮುತ್ತಲ ಮನೆಯವರು ಎಲ್ಲರೂ ಗಾಬರಿಯಿಂದ ಓಡೋಡಿ ಬಂದು ಹೆಣಗಳನ್ನು ನೋಡಿದರು. ಇಬ್ಬರು ಒಬ್ಬರಿಗೊಬ್ಬರು ಕೈಹಿಡಿದುಕೊಂಡೇ ಮಲಗಿದಂತೆ ಕಾಣುತ್ತಿತ್ತು. ನಿನ್ನೆ ಗೌಡ್ರು ಹೊಲಕ್ಕೆ ಹೋಗಿದ್ರು ರಾತ್ರಿ ಯಾವಾಗ ಬಂದ್ರೋ ಏನೋ ಗೊತ್ತಿಲ್ಲ. ಎಂದು ತಮ್ಮ ತಮ್ಮಲ್ಲೇ ಗೊಣಗಿದರು. ನಾನು, ನೀನು ಅಂತ ಓಣಿಯ ಜನರೆಲ್ಲಾ ಸೇರಿದರು. ಓಣಿಯ ಹಿರಿಯ ಭೀಮಣ್ಣ ಮಗ ಪರಶುರಾಮನಿಗೆ ಫೋನ್ ಮಾಡ್ರೊ ಎಂದಾಗ ಯಾರಲ್ಲಿಯೂ ಆತನ ನಂಬರ್ ಇಲ್ಲ. ಪರಶುರಾಮನ ಫೋನ್ ನಂಬರ್ ಯಾರ ಹತ್ತಿರನೂ ಇಲ್ಲ. ಕೇವಲ ದುರುಗಪ್ಪ ಒಬ್ಬನ ಹತ್ತಿರ ಮಾತ್ರ ಇದೆ. ಗಾಬರಿಯಿಂದ ಏನೂ ಮಾತನಾಡದೇ ಕುಸಿದು ಕುಳಿತಿದ್ದ ದುರುಗಪ್ಪನ ಹತ್ತಿರ ಬಂದ ಭೀಮಣ್ಣ, ಪರಶುರಾಮನಿಗೆ ಫೋನ್ ಹಚ್ಚಿಕೊಡು ಮಾತಾಡಿ ತಂದೆ ತಾಯಿ ಸತ್ತ ಸುದ್ದಿ ತಿಳಿಸ್ತಿನಿ ಎಂದಾಗ ದುರುಗಪ್ಪ ಪರಶುರಾಮನ ನಂಬರ್‌ಗೆ ಡಾಯಿಲ್ ಮಾಡಿಕೊಟ್ಟ. ಭೀಮಣ್ಣನಿಗೆ ಎನೋ ಅಂದಂತಾಯಿತು. ದುರುಗಪ್ಪ ಇದು ಏನೇನೋ ಅಂತಾದಾ ನೊಡು ಎಂದು ಮರಳಿ ದುರುಗಪ್ಪನಿಗೆ ಫೋನ್ ಕೊಟ್ಟಾಗ, ಇಲ್ಲ ತಾತ ಇದು ಫೋನ್ ಸ್ವಿಚ್‌ಆಫ್ ಆಗ್ಯಾದಾ ಅದ್ಕೆ ಇಂಗನ್ತಾದಾ ಎಂದು ಸುಮ್ಮನಾದ. ಸರಿ ಬಿಡಪ್ಪ ಸ್ವಲ್ಪೊತ್ತು ತಡುದು ಫೋನ್ ಮಾಡು ಎಂದು ಭೀಮಣ್ಣ ಬೇರೆ ಕಡೆ ನಡೆದ. ದುರುಗಪ್ಪನಿಗೆ ಸಮಾಧಾನವಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೆ ಕಾಲ್ ಮಾಡಿದ ಮತ್ತದೆ ಧ್ವನಿ. ಅವರ ಫೋನಿಗೆ ಏನಾಗಿರಬಹುದು ಎಂದು ಅಲೋಚಿಸುತ್ತಾ ಬೇರೆಯವರಿಗೆ ಫೋನ್ ಮಾಡತೊಡಗಿದ. ಮತ್ತೊಂದು ತಾಸು ಬಿಟ್ಟು ಮಾಡಿದರೂ ಅದೇ ಸ್ವಿಚ್‌ಆಫ್ ಧ್ವನಿ. ಎಲ್ಲರೂ ಗಾಬರಿಗೊಳಗಾದರು. ಭೀಮಣ್ಣ ಬಂದು ಅಲ್ಲೊ ಜೀವ ಹೋಗಿ ಎಷ್ಟೊತ್ತಾತೋ ಏನೋ, ಮಗನ ಫೋನ್ ಹತ್ತವಲ್ತು ಅಂತಿಯಾ ಪರಶುರಾಮನ ಹೆಂಡ್ತಿ ಫೋನ್‌ಗಾದ್ರೂ ಮಾಡು ಎಂದ. ಇಲ್ಲ ತಾತ ನನ್ನ ಹತ್ರ ಬೇರ ಯಾರಾ ನಂಬರ್ ಇಲ್ಲ ಎಂದಾಗ ಭೀಮಣ್ಣನಿಗೆ ದಿಕ್ಕು ತೋಚದಂತಾಯಿತು. ಮಗ ಇಲ್ಲಿಂದ ಮುನ್ನೂರು-ನಾಲ್ಕುನೂರು ಕಿಲೋ ಮೀಟರ್ ದೂರ ದಾರಿಯಲ್ಲಿ ಇದಾನ. ಪಟ್ನದಾಗ ಎಲ್ಯಾದಾರಾ ಅಂತ ಯಾರಿಗೂ ಗೊತ್ತಿಲ್ಲ. ಏನು ಮಾಡಬೇಕು ಎಂದು ಆಕಾಶ ತಲೆಯ ಮೇಲೆ ಬಿದ್ದವರಂತೆ ಕುಳಿತ ಭೀಮಣ್ಣನಿಗೆ ತಡಿ ಅಜ್ಜ ಮಧ್ಯಾಹ್ನ ಫೋನ್ ಮಾಡಾಮು ಎಂದು ದುರುಗಪ್ಪ ಸಮಾಧಾನ ಮಾಡಿದರೂ ಹಿರಿಯ ಜೀವಕ್ಕೆ ಹೇಗೆ ಸಮಾಧಾನವಾದೀತು. ಓಣಿಯ ಹಿರಿಯರೆಲ್ಲಾ ಸೇರಿ ಭಜನೆ ಪ್ರಾರಂಭ ಮಾಡಿದರು. ಮಧ್ಯಾಹ್ನವೂ ಸಹ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ದುರುಗಪ್ಪ ಭಜನೆ ಮಾಡುವವರಿಗೆ ಮಂಡಾಳು ವಗ್ಗರಣೆ ವ್ಯವಸ್ಥೆ ಮಾಡಿದ. ರಾತ್ರಿಯಾದರೂ ಪರಶುರಾಮನ ಫೋನ್ ಸ್ವಿಚ್‌ಆಫ್ ಆಗಿಯೇ ಇತ್ತು. ಮತ್ತೊಮ್ಮೆ ದುರುಗಪ್ಪ ಭಜನೆ ಮಾಡುವವರಿಗೆ ವಗ್ಗರಣೆ ವ್ಯವಸ್ಥೆ ಮಾಡಿದ. ಪಾಪ ಅವರಿಗೆ ತಿನ್ನಲಾದರೂ ಹೇಗಾದಿತು. ರಾತ್ರಿಯಲ್ಲ ಭಜನೆ ಮಾಡುತ್ತಾ ಕಾಲ ಕಳೆದರು. ರಾತ್ರಿಯೆಲ್ಲಾ ಏನೇ ಪ್ರಯತ್ನ ಪಟ್ಟರೂ ಮಗ ಪರಶುರಾಮ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.
ಬೆಳಿಗ್ಗೆ ಹಿರಿಯರೆಲ್ಲಾ ಒಂದೆಡೆ ಕುಳಿತು ಮಾತಾಡಿಕೊಂಡರು. ಮಗನಿಗಾಗಿ ಕಾಯುವುದು ಬೇಡಾ. ಹೀಗೆ ಬಿಟ್ಟರೆ ಹೆಣಗಳು ಕೊಳೆತು ಹೋಗುತ್ತವೆ. ದುಡಿದು-ದಣಿದ ಅನಾರೋಗ್ಯದ ಮುದುಕರು, ಗುಳಿಗೆ ಔಷಧಿಗಳ ಮೇಲೆ ಬದುಕಿದವರು. ಹೀಗಾಗಿ ಸುಮ್ನಾ ಹೆಣಗಳನ್ನು ತುಂಬಾಹೊತ್ತು ಇಟ್ಟುಕೊಳ್ಳುವುದು ಸರಿಯಲ್ಲ. ನಾವೇ ಶವಸಂಸ್ಕಾರ ಮಾಡಿಬಿಡೋಣ ಎಂದು ಓಣಿಯ ಹಿರಿಯರೆಲ್ಲಾ ನಿರ್ಧರಿಸಿದರು. ಅದಕ್ಕೆ ದುರುಗಪ್ಪನೂ ಸಹ ಸಮ್ಮತಿಸಿದನು. ಸದಿಗೆ ಕಟ್ಟಲು ಸೂಚಿಸಿದರು. ದುರುಗಪ್ಪನೇ ಮಗನ ರೀತಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದನು. ಹೆಣ ಸದಿಗೆಯ ಮೇಲಿಟ್ಟು ಎತ್ತಿದರು. ದುರಗಪ್ಪ ಬೆಂಕಿಯ ಮಗಿ ಹಿಡಿದು ಸಾಗಿದ. ದಾರಿಯುದ್ದಕೂ ಜನ ಸಾಲುಗಟ್ಟಿ ನಿಂತು ನೋಡುತ್ತಿದ್ದಾರೆ. ಅಯ್ಯೋ ಪಾಪ ಮುದುಕರು ಗೌಡರ ಮನೆಯಲ್ಲಿ ಜೀವನ ಪೂರ್ತಿ ದುಡುದ್ರು. ಮಕ್ಕಳಿಗಾಗಿ ಏನೇಲ್ಲಾ ಕಷ್ಟಪಟ್ಟು ದುಡಿದು ಓದಿಸಿದ್ರು, ನೌಕ್ರಿ ಕೊಡಿಸಿದ್ರು, ಮದ್ವೆನೂ ಮಾಡಿದ್ರು. ಇಡೀ ಜೀವನವೇ ಗೌಡರ ಮನೆ, ಹೊಲದಲ್ಲಿ ಕಳದ್ರು. ಕೊನೆಗೆ ಮಕ್ಕಳೂ ಬರಲಿಲ್ಲಾ ಎಂದು ಏನೇನೋ ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದರು. ಒಂದೇ ಕುಣಿಯಲ್ಲಿ ಅಮರಮ್ಮ ಈರಪ್ಪ ಇಬ್ಬರನ್ನೂ ಇಟ್ಟು ಸಮಾಧಿ ಮಾಡಿದರು. ಸಮಾಧಿಗೆ ದುರುಗಪ್ಪ ಪೂಜಾ ಕಾರ್ಯ ಮಾಡಿದ. ಎಲ್ಲರೂ ತಮ್ಮ ತಮ್ಮ ಮನೆಗೆ ಸೇರಿ ಸ್ನಾನ ಮಾಡಿದರು. ದುರುಗಪ್ಪ ಸ್ನಾನ ಮಾಡಿ ಮೈ ಒರಿಸಿಕೊಳ್ಳುತ್ತಿರುವಾಗ ಫೋನ್ ರಿಂಗಾಯಿತು. ಯಾರದಿರಬಹುದೆಂದು ನೋಡಿದರೆ ಆಶ್ಚರ್ಯ! ಪರಶುರಾಮನ ಫೋನ್. ಏನು ದುರುಗಪ್ಪ ಬಹಳ ಸಲ ಪೋನ್ ಮಾಡಿದ್ದಿ ನಂದು ಫೋನ್ ರಿಪೇರಿಗೆ ಬಂದಿತ್ತು ಎರಡು ದಿನ ಮೆಕ್ಯಾನಿಕ್‌ಗೆ ಕೊಟ್ಟಿದ್ದೆ ಎಂದು ಮಾತಾನಾಡುತ್ತಿದ್ದರೂ ದುರುಗಪ್ಪನಿಗೆ ಏನೇಳಬೇಕೇಂಬುದೇ ತೋಚಲಿಲ್ಲಾ. ಕೊಂಚ ಸಮಾಧಾನ, ಧೈರ್ಯ ತೆಗೆದುಕೊಂಡು ಅಪ್ಪ ಅಮ್ಮ ಇಬ್ಬರೂ ಹೋಗಿಬಿಟ್ಟರು ಅದ್ಕೆ ಫೋನ್ ಮಾಡಿದ್ದೆ ಎಂದು ಒಂದೇ ಉಸಿರಿಗೆ ಹೇಳಿ ನಿಟ್ಟುಸಿರು ಬಿಟ್ಟ. ಪರಶುರಾಮನಿಗೆ ದಿಗ್ಭ್ರಮೆಯಾಯಿತು. ಮೊನ್ನೆ ಜಾತ್ರೆಗೆ ಬಂದಾಗ ಆರೋಗ್ಯವಾಗಿದ್ರು. ಈಗ್ಲೇ ಬರ್ತಿನಿ ಎಂದ. ಈಗ ಬಂದು ಏನ್ ಮಾಡ್ತಿ ಆಗ್ಲೇ ನಾವು ಶವಸಂಸ್ಕಾರ ಮಾಡಿ ಬಂದ್ವಿ ಎಂದಾಗ ಪರಶುರಾಮನಿಗೆ ಬರಸಿಡಿಲು ಬಡಿದಂತಾಯಿತು. ಬಹುಶಃ ಮೊನ್ನೆ ರಾತ್ರಿ ಸತ್ತಿರಬೇಕು ನಿನ್ನೆ ಹಗಲು, ರಾತ್ರಿ ಪೂರ್ತಿ ನಿನ್ನ ದಾರಿ ನೋಡಿ ಕಾಯ್ದು ಕಾಯ್ದು ಸಾಕಾಗಿ ಹೋಯ್ತು. ನಿನ್ನ ಫೋನ್ ಸ್ವಿಚ್‌ಆಫ್ ಆಗಿತ್ತು. ನಿನಗ ನೂರಾರು ಸಲ ಫೋನ್ ಮಾಡಿದ್ರೂ ಉಪಯೋಗ ಆಗಲಿಲ್ಲಾ. ಈಗ ಮಣ್ಣುಮಾಡಿ ಬಂದ್ವಿ ಎಂದಾಗ ಪರಶುರಾಮನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಏನಾರಾ ಆಗ್ಲಿ ನಾ ಈಗ್ಲೇ ಹೊರಡತಿನಿ ಎಂದವನೇ ಕಾರು ಹತ್ತಿ ಊರ ಕಡೆ ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದ. ಮನೆಗೆ ಬಂದವನೇ ಅಮ್ಮ, ಅಪ್ಪ ಎಂದು ಅಳುತ್ತಾ ಗೋಗರೆದ. ಮನೆಯಲ್ಲಾ ಖಾಲಿ ಖಾಲಿ ಇರುವುದನ್ನು ಕಂಡವನೇ ಸೀದಾ ಸಮಾಧಿಯ ಕಡೆ ಓಡಿದ. ಕುಣಿಯ ಮೇಲೆ ಬಿದ್ದು ಅಪ್ಪ, ಅಮ್ಮ ಎಂದು ಬಿಕ್ಕಳಿಸುತ್ತಾ ಹೊರಾಳಾಡಿ ಅಳುತ್ತಿರುವ ಪರಶುರಾಮನನ್ನು ಸಮಾಧಾನ ಮಾಡಲು ತಂದೆ ತಾಯಿ ಕುಣಿಯ ಒಳಗಿಂದ ಎದ್ದು ಬರಲು ಸಾಧ್ಯವೇ? ದುರುಗಪ್ಪ ಎಷ್ಟೇ ಸಮಾಧಾನ ಮಾಡಿದರೂ ಪರಶುರಾಮನ ದುಃಖ ತಡೆಯಲಾಗುತ್ತಿಲ್ಲ. ಪರಶುರಾಮನ ಕಣ್ಣುಗಳಿಂದ ಸುರಿಯುವ ಕಣ್ಣೀರನ್ನು ಒರೆಸುವ ತಂದೆ ತಾಯಿಗಳ ಮಮತೆಯ ಕೈಗಳಿಲ್ಲ. ಸಮಾಧಿಯ ಮೇಲೆ ಬಿದ್ದು ಅಳುತ್ತಿರುವ ಪರಶುರಾಮನ ಕಣ್ಣೀರು ಸಮಾಧಿಯ ಮೇಲೆ ಮಾತ್ರ ಸುರಿಯುತ್ತಿವೆಯೆ ಹೊರತು ಒಳಗೆ ಶಾಂತವಾಗಿ ಮಲಗಿರುವ ತಂದೆ ತಾಯಿಗಳಿಗೆ ತಲುಪುತ್ತಿಲ್ಲ. ಅಳುತ್ತಾ ಗೋಗರೆಯುತ್ತಿರುವ ಪರಶುರಾಮನನ್ನು ದುರುಗಪ್ಪ ಮೇಲೆತ್ತಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಅಮವಾಸೆಯ ಕತ್ತಲು ಮುಸುಕುತ್ತಿತ್ತು. ಸ್ಮಶಾನದ ಬೇಲಿ, ಮುಳ್ಳು ಕಂಠಿಗಳಿಂದ ಹುಳುಗಳು ಗುಂಯ್ ಎಂದು ಜೀರಿಡುವ ಶಬ್ದದ ಜೊತೆಗೆ ಕಾಗೆ, ಗೂಬೆಗಳ ಆರ್ತನಾದ ಕೇಳಿಸುತ್ತಿತ್ತು.
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್,
ಕನ್ನಡ ಉಪನ್ಯಾಸಕರು,
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧.
ಮೊಸಂ: ೯೪೪೮೫೭೦೩೪೦.
Email:[email protected]

Get real time updates directly on you device, subscribe now.

Comments are closed.

error: Content is protected !!