ಗೋವಾದಲ್ಲಿ ಶೀಘ್ರವೇ ಕನ್ನಡ ಭವನ : ಸ್ಥಳ ನೀಡದ ಗೋವಾ ಸರ್ಕಾರದ ನಡೆಗೆ ಸಚಿವ‌ ತಂಗಡಗಿ ಅಸಮಾಧಾನ

Get real time updates directly on you device, subscribe now.

 ದಕ್ಷಿಣ ಗೋವಾದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು   ಬಜೆಟ್ ನಲ್ಲಿ ಕನ್ನಡಭವನ ನಿರ್ಮಾಣದ ಬಗ್ಗೆ ಬಜೆಟ್ ನಲ್ಲಿ ಘೋಷಣೆ

ಗೋವಾ, ಡಿ.16

ಗೋವಾ ರಾಜ್ಯದಲ್ಲಿ ಶೀಘ್ರವೇ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಗೋವಾದಲ್ಲಿನ ಕನ್ನಡಿಗರಿಗೆ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ‌ ಮೊದಲ ಬಾರಿಗೆ ಗೋವಾ ರಾಜ್ಯಕ್ಕೆ ಶನಿವಾರ ಭೇಟಿ ನೀಡಿದ ಸಚಿವರು, ದಕ್ಷಿಣ ಗೋವಾದ ಜುವಾರಿ ನಗರದಲ್ಲಿನ ಕನ್ನಡಿಗರ ಸಮಸ್ಯೆ ಅಲಿಸಿದ ಬಳಿಕ‌ ಮಾತನಾಡಿದರು.

ಕೇರಳ, ಮಹಾರಾಷ್ಟ್ರದಲ್ಲಿ ಅಲ್ಲಿನ‌ ‌ಸರ್ಕಾರ ನೀಡಿದ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗಿದೆ. ಆದರೆ‌ ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ಜಾಗ ನೀಡುವಂತೆ ಹಲವು ಬಾರಿ ಇಲ್ಲಿನ‌ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ ಇಲ್ಲಿನ ಸರ್ಕಾರ ಭೂಮಿ ನೀಡಲು ಮನಸ್ಸು ಮಾಡುತ್ತಿಲ್ಲ. ಆದರೆ ಈ ಬಾರಿ ನಾವೇ ಒಂದು ಎಕರೆಯಷ್ಟು ಭೂಮಿ‌ ಖರೀದಿಸಿ ಕನ್ನಡ ಭವನ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ದಕ್ಷಿಣ ಗೋವಾದಲ್ಲಿ ಒಂದೆರೆಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಲಾಗಿದೆ. ಈ‌ ಭಾಗದ ಜಿಲ್ಲಾಧಿಕಾರಿ‌ ಅವರನ್ನು ಸಂಪರ್ಕಿಸಿ, ಶೀಘ್ರವೇ ಜಾಗದ ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ‌ ಆಯವ್ಯಯದಲ್ಲಿ ಕನ್ನಡಭವನ ನಿರ್ಮಾಣದ ಬಗ್ಗೆ ಘೋಷಣೆ ಮಾಡಿಸಿ, ಅವರಿಂದಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.‌

ಒಗ್ಗಟ್ಟು ಎಲ್ಲಿ‌ ಇರಲಿದೆಯೋ ಅಲ್ಲಿ ಶಕ್ತಿ ಇರಲಿದೆ. ಗೋವಾದಲ್ಲಿ ಒಟ್ಟು 15 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ ನಾಲ್ಕರಿಂದ ಐದು ಲಕ್ಷ‌ ಕನ್ನಡಿಗರೇ ಇದ್ದಾರೆ. ನೀವು ಮನಸ್ಸು ಮಾಡಿದ್ರೆ ಮೂರ್ನಾಲ್ಕು ಮಂದಿ ಶಾಸಕರನ್ನು ನೀವೇ ಆಯ್ಕೆ ಮಾಡಬಹುದು ಎಂದರು.

ಗೋವಾ ರಾಜ್ಯ ಶೇ.70ರಷ್ಟು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಇಲ್ಲಿಗೆ ಭೇಟಿ ನೀಡುವವರಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಇಲ್ಲಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ‌ ಕನ್ನಡಿಗರು ಹೆಚ್ಚಿದ್ದಾರೆ. ಹೀಗಾಗಿ ಗೋವಾ ಕನ್ನಡಿಗರಿಗೆ ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ‌‌ ಅಧ್ಯಕ್ಷ ಪ್ರಕಾಶ್ ಮತ್ತೀಹಳ್ಳಿ, ಗೋವಾ ಕನ್ನಡ ಸಾಹಿತ್ಯ ಪರಿಷತ್, ಗೋವಾ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಗೋವಾ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
—–
ಬಾಕ್ಸ್
ಪುನರ್ವಸತಿ ಕಲ್ಪಿಸಿಕೊಡುವಂತೆ ಆಗ್ರಹ
ಇನ್ನೂ ಗೋವಾ ಬೈನಾದಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚಾಗಿ ವಾಸವಾಗಿದ್ದು, ಸಂತ್ರಸ್ತರಾಗಿರುವ ಅವರಿಗೆ ಇಲ್ಲಿ ತನಕ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ. ಸಂತ್ರಸ್ತರಿಗೆ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!