ಜೋಡೆತ್ತು ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಸಂಸದ ಸಂಗಣ್ಣ

Get real time updates directly on you device, subscribe now.

ಕೊಪ್ಪಳ:
ರಾಜ್ಯದಲ್ಲಿ ಬಿಜೆಪಿ ಜೋಡೆತ್ತುಗಳಾದ ವಿಪಕ್ಷ ನಾಯಕ ಆರ್.ಅಶೋಕ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ವಿಪಕ್ಷ ನಾಯಕರಾಗಿ ಆಯ್ಕೆಯಾದ ಆರ್.ಅಶೋಕ ಅವರಿಗೆ ಅಭಿನಂದನೆಗಳು. ಅವರು ಏಳು ಬಾರಿ ಶಾಸಕರಾಗಿದ್ದು, ಚುನಾವಣೆ ತಂತ್ರಗಾರಿಕೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ಇದ್ದಾರೆ. ಅವರು ಹಾಗೂ ಯುವ ನಾಯಕ ಬಿ.ವೈ. ವಿಜಯೇಂದ್ರ ಸಂಘಟನೆಯೊಂದಿಗೆ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನ ಗಳಿಸಿ ದೇಶದಲ್ಲಿ ಮತ್ತೊಮ್ಮೆ ಚುಕ್ಕಾಣಿ ಹಿಡಿಯಲಿದೆ ಎಂದರು.
ವಿಪಕ್ಷದ ಬಗ್ಗೆ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ಆಧಾರರಹಿತವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲ ನಾಯಕರು ಒಟ್ಟಾಗಿ ಪಕ್ಷ ಸಂಘಟಿಸಿ ಎಲ್ಲ ಲೋಕಸಭೆ ಗೆಲ್ಲಲಾಗುವುದು.
ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಮಾಡದಿರುವುದು, ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವುದು, ಬರ ನಿರ್ವಹಣೆಗೆ ತಾಲೂಕು ಹಾಗೂ ಹೋಬಳಿ ಟಾಸ್ಕ್ ಫೋರ್ಸ್ ರಚಿಸದಿರುವುದು, ವರ್ಗಾವಣೆ ದಂಧೆ ಸೇರಿ ಇತರೆ ಸಮಸ್ಯೆ ಹಾಗೂ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಜೋಡೆತ್ತುಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ಹಿಂದಿನ ಬಿಜೆಪಿ ಅವಧಿಯ ಕೆಲಸಗಳನ್ನು ಜನತೆಗೆ ತಿಳಿಸುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಮಾಡಲಾಗುವುದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2014 ಮುಂಚೆ ಕೇವಲ ಒಂದು ತಾಲೂಕಿನಲ್ಲಿ ಮಾತ್ರ ರೈಲ್ವೆ ನಿಲ್ದಾಣ ಇತ್ತು. ಕಳೆದ 9 ವರ್ಷದಲ್ಲಿ 6 ತಾಲೂಕಿಗೆ ರೈಲ್ವೆ ನಿಲ್ದಾಣ ವಿಸ್ತರಣೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮೂಲಕ ಸರಕು ಸಾಗಣೆ ಕ್ಷೇತ್ರದಲ್ಲಿ ಮೊದಲ ಸಾಲಿನಲ್ಲಿ ನಿಂತಿದ್ದೇವೆ ಎಂದರು.
ಸಂಸದರಿಗೆ ಶುಭಾಶಯ ತಿಳಿಸಿದ
ಕೇಂದ್ರ- ರಾಜ್ಯ ನಾಯಕರು:
ಸಂಸದ ಸಂಗಣ್ಣ ಕರಡಿ ಹುಟ್ಟುಹಬ್ಬದ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಕೇಂದ್ರ ಹಾಗೂ ರಾಜ್ಯ ನಾಯಕರು ಶುಭಾಶಯ ತಿಳಿಸಿದ್ದಾರೆ. ಪಕ್ಷ ಸಂಘಟಿಸಿ ಕೊಪ್ಪಳದಲ್ಲಿ ಮತ್ತೊಮ್ಮೆ ಬಿಜೆಪಿ ಜಯಗಳಿಸಬೇಕು ಎಂದು ಸಂಸದರಿಗೆ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!