ಯುವ ಮೇಳಗಳು, ಉತ್ಸವಗಳು ಯುವ ಮನಸ್ಸುಗಳ ರೂಪಿಸಲು ಪೂರಕ: ಕಡಿ
ಕೊಪ್ಪಳ: ಯುವ ಮೇಳಗಳು, ಯುವಜನೋತ್ಸವಗಳು ಯುವಜನರ, ಕಲಾವಿದರ ಮನಸ್ಸುಗಳನ್ನು ರೂಪಿಸಲು ಅನುವು ಮಾಡಿಕೊಡುವ ಜೊತೆಗೆ ಪೂರಕ ಪರಿಸರ ಸೃಷ್ಟಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದರು. ಯುವ ಸಬಲೀಕರಣ ಇಲಾಖೆಯಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಬೇಕು ಎಂದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಯುವಜನರು ಪಾಲ್ಗೊಳ್ಳುವಂತೆ ವಿವಿಧ ಇಲಾಖೆಗಳ ಸಹಯೋಗಕ್ಕೆ ಪತ್ರ ಬರೆಯಲಾಗುವದು ಎಂದ ಅವರು, ಸಾಧಕ ಕಲಾವಿದರು, ಸಾಹಿತಿಗಳನ್ನು ಗುರುತಿಸುವ ಮೂಲಕ ಅವರ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿ ದೊರಕುತ್ತದೆ, ನಿಮ್ಮಲ್ಲಿನ ಪ್ರತಿಭೆ ಹೊರಹಾಕಲು ಇದು ಅತ್ಯುತ್ತಮ ವೇದಿಕೆ ಎಂದರು.
ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಕೆ.ವಿ. ಮಾತನಾಡಿ ಸದೃಢ ದೇಹ ಹಾಗೂ ಸದೃಢ ಮನಸ್ಸು ನಿರ್ಮಾಣವಾಗಲು ಈ ರೀತಿಯ ಚಟುವಟಿಕೆಗಳು ಅಗತ್ಯ. ಇದರಿಂದ ವ್ಯಕ್ತಿತ್ವ ವಿಕಸನಕ್ಕೂ ಅನುಕೂಲ, ಕೇವಲ ಓದುವದು ಒಂದೇ ಬದುಕಲ್ಲ ಪಠ್ಯೇತರ ಚಟುವಟಿಕೆಗಳು ಸಹ ಬಹಳ ಮುಖ್ಯ ಎಂದು ಹೇಳಿದರು.
ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ಎ.ಎಂ. ಮದರಿ ಮಾತನಾಡಿ ಬದುಕಿನಲ್ಲಿ ಏರಿಳಿತಗಳು, ನೋವು ನಲಿಗುಗಳ ಸಹಜ. ಯಶಸ್ಸು ಪಡೆಯಲು ಬೇಕಾದ ಅರ್ಹತೆಯನ್ನು ಗಳಿಸಿಕೊಳ್ಳುವುದು ಕೂಡ ಸವಾಲು. ಎಲ್ಲೊ ಹುಟ್ಟಿ ಇನ್ನೆಲ್ಲೊ ಬೆಳೆಯುತ್ತೇವೆ. ಜಾತಿಯ ಅಪಮಾನ ಸಹಿಸಿಕೊಂಡು ಬೆಳೆದು ಬಂದಿದ್ದೇನೆ ಎಂದರು. ಬದುಕು ಋಣದ ರತ್ನ ಗಣಿಯೊ ಎನ್ನುವಂತೆ ಅನೇಕ ಜನ ಸ್ನೇಹಿತರ ನೆರವಿನಿಂದ ಬದುಕು ಈ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಿದರು.
ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಯುವ ಸಂಘಗಳ ಸಬಲೀಕರಣಕ್ಕೆ ವಿವಿದ ಆಯಾಮಗಳಲ್ಲಿ ಪ್ರೋತ್ಸಾಹದ ಅಗತ್ಯವಿದೆ, ನರೇಗಾದಲ್ಲಿ ಯುವ ಸಂಘಗಳ ಕಟ್ಟಡ ಕಟ್ಟಲು ನೆರವಾಗಬೇಕು, ಯುವ ಸಾಧಕರನ್ನು ಪರಿಗಣಿಸಬೇಕು, ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧಕರಿಗೆ ಆರ್ಥಿಕ ನೆರವು ನೀಡಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗುಂಡಪ್ಪ ವಿಭೂತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ನಿವೃತ್ತ ಪ್ರಾಂಶುಪಾಲ ಸಿ. ವಿ. ಜಡಿಯವರ, ಪತ್ರಕರ್ತ, ಬರಹಗಾರ ಪ್ರಮೋದ ಕುಲಕರ್ಣಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಜ್ಯೋತಿ ಎಂ. ಗೊಂಡಬಾಳ, ಜಗದಯ್ಯ ಸಾಲಿಮಠ, ಸಾಹಿತಿ ಜೆ.ಎಸ್. ಗೋನಾಳ, ಸುಪರಿಂಟೆಂಡೆಂಟ್ ನಾಗರಾಜ, ತಾಲುಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಲಲಿತಮ್ಮ ಹಿರೇಮಠ, ಆನಂದ ಹಳ್ಳಿಗುಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಮಾರೋಪ – ಬಹುಮಾನ ವಿತರಣೆ : ಇಲ್ಲಿಗೆ ಸಮೀಪದ ದದೇಗಲ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ತೋಟದ ಜಿಲ್ಲಾಮಟ್ಟದ ಯುವಜನೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಥೆ ಬರೆಯುವ ಸ್ಪರ್ಧೆ, ಜಾನಪದ ಗೀತೆಯ ಸ್ಪರ್ಧೆಯ ವೈಯಕ್ತಿಕ ವಿಭಾಗ ಮತ್ತು ಗುಂಪು ವಿಭಾಗದಲ್ಲಿ ಅಕ್ಷತಾ ತೋಟದ ಹಾಗೂ ತಂಡದವರು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಈ ಜನೋತ್ಸವದಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.
ಜಾನಪದ ಗೀತೆ ವೈಯಕ್ತಿಕ ವಿಭಾಗದಲ್ಲಿ ಆಕಾಶ ಬಂಡಿ (ಪ್ರಥಮ), ಗುಂಪು ವಿಭಾಗದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ತಂಡ ಕುಷ್ಟಗಿ (ಪ್ರಥಮ), ಜಾನಪದ ನೃತ್ಯ ವೈಯಕ್ತಿಕ ವಿಭಾಗದಲ್ಲಿ ತೇಜಸ್ವಿನಿ (ಪ್ರಥಮ), ಪಾರ್ವತಿ (ದ್ವಿತೀಯ), ಜಾನಪದ ನೃತ್ಯ ಗುಂಪು ವಿಭಾಗದಲ್ಲಿ ಮಂಜುಳಾ ಹಾಗೂ ಸಂಗಡಿಗರು (ಪ್ರಥಮ) ಸ್ಥಾನ ಗಳಿಸಿದರು.
ಕಥೆ ಬರೆಯುವ ಸ್ಪರ್ಧೆಯಲ್ಲಿ ತಾಯಿಯ ಮಡಿಲು ಕುರಿತು ಬರೆದ ಸ್ಪರ್ಧೆಗೆ ಪ್ರಥಮ ಬಹುಮಾನ ಲಭಿಸಿತು. ಘೋಷಣೆ ವಿಭಾಗದಲ್ಲಿ ಶ್ವೇತಾ ಆರ್. (ಪ್ರಥಮ) ಹಾಗೂ ಸುಮಾ (ದ್ವಿತೀಯ), ಚಿತ್ರಕಲಾ ಪೋಸ್ಟರ್ ಮೇಕಿಂಗ್ ವಿಭಾಗದಲ್ಲಿ ಮಾಧುರಿ (ಪ್ರಥಮ) ಮತ್ತು ಸಿಂಧೂ (ದ್ವಿತೀಯ), ಫೋಟೊಗ್ರಫಿಯಲ್ಲಿ ಮುತ್ತುರಾಜ ಲಳಗಿ (ಪ್ರಥಮ), ಮಲ್ಲಿಕಾರ್ಜುನ ಕಟ್ಟಿ (ದ್ವಿತಿಯ), ದೇವರಾಜ ಹಡಪದ (ತೃತೀಯ) ಸ್ಥಾನ ಸಂಪಾದಿಸಿದರು.
Comments are closed.