ಪರೋಪಕಾರಿ ಗುಣದಿಂದ ಮಾತ್ರ ಮನುಷ್ಯನ ದೇಹಕ್ಕೆ ಸಾರ್ಥಕತೆ ಬರುತ್ತದೆ : ಅಂಡಗಿ
ಕೊಪ್ಪಳ : ಮನುಷ್ಯನ ದೇಹಕ್ಕೆ ಸಾರ್ಥಕತೆ ಬರಬೇಕಾದರೆ ಆತನು ಮಾಡುವ ಪರೋಪಕಾರಿ ಗುಣದಿಂದ ಮಾತ್ರ ಸಾಧ್ಯ. ಮೈತುಂಬ ಬಂಗಾರ, ಕೈ ತುಂಬಾ ಹಣ ಇದ್ದರೆ ಮಾತ್ರ ಬದುಕು ಹಸನಾಗುವುದಿಲ್ಲ. ಮನುಷ್ಯನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು. ದಾನ, ಧರ್ಮ ಮಾಡುತ್ತಿರಬೇಕು. ಮನುಷ್ಯ ಯಾವಾಗಲೂ ಸತ್ಸಂಗದಲ್ಲಿ ಇರಬೇಕು, ಸತ್ಚಿಂತನೆ ಮಾಡುತ್ತಿರಬೇಕು. ಪುರಾಣ, ಪುಣ್ಯ ಕಥೆಗಳನ್ನು ಕೇಳುತ್ತಿರಬೇಕು. ಪುರಾಣಗಳಿಂದ ಮನೆ, ಮನ ಬೆಳಗುತ್ತದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಮುರ್ಲಾಪೂರದಲ್ಲಿ ೧೩೩ನೇ ಶ್ರೀದೇವಿ ಪುರಾಣಮಂಗಲೋತ್ಸವ ಹಾಗೂ ಜಂಗಮೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅವರು ಮುಂದುವರೆದ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಇವೆ. ಗುಡಿಸಲುಗಳಲ್ಲಿಯೇ ಉಗಮವಾದ ಈ ಸಾಹಿತ್ಯದ ಕರ್ತೃಗಳಂತೂ ಸ್ಪೂರ್ತಿ ತುಂಬಿದಾಗ, ಸಂತೋಷವಾದಾಗ, ದುಃಖವಾದಾಗ ತಮಗೆ ಬಂದಂತೆ ಹಾಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದರು. ಜನಪದ ಸಾಹಿತ್ಯ ಹುಲುಸಾದ ಸಾಹಿತ್ಯ. ಜನಪದರು ಬದುಕಿನಲ್ಲಿ ಉಂಟಾಗುವ ಹುಟ್ಟು, ಸಾವು ಇವುಗಳ ಮಧ್ಯೆ ನಡೆಯುವ ಬದುಕಿನ ಸಂಘರ್ಷ, ಸಂತೋಷ, ಹಾಸ್ಯ, ವೈರಾಗ್ಯ, ಸಿಟ್ಟು, ನೋವು, ನಲಿವುಗಳಿಗೆ ಭಾವನೆಯ ಬಣ್ಣ ಹಚ್ಚಿ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಒದಗಿಸಿದವರೇ ನಮ್ಮ ಜನಪದರು. ಹೀಗಾಗಿ ಮಾನವೀಯ ಮೌಲ್ಯಗಳ ಸಂಗಮವೇ ಜನಪದ ಸಾಹಿತ್ಯವಾಗಿದೆ ಎಂದು ಹೇಳುತ್ತಾ ಜಾನಪದ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.
ಹಿರೇಮಲ್ಲನಕೇರಿಯ ವಿರಕ್ತಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡುತ್ತಾ, ಇರುವೆ ೮೪ ಲಕ್ಷ ಜೀವರಾಶಿಗಳಲ್ಲಿ ಮಾನವಜನ್ಮ ಶ್ರೇಷ್ಠವಾದದ್ದು. ವಿಷಮಯವಾದ ದುಃಖದಿಂದ ಕೂಡಿದ ಸಂಸಾರ ಸಾಗರದಲ್ಲಿ ಜನನ, ಮರಣದ ಮಧ್ಯದ ಬಾಳನ್ನು ಹಾಳು ಮಾಡಿಕೊಳ್ಳದೆ, ಸತ್ಕಾರಗಳಲ್ಲಿ ತೊಡಗಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಈ ಗ್ರಾಮದಲ್ಲಿ ೧೩೩ ವರ್ಷಗಳಿಂದ ಸತತವಾಗಿ ಪುರಾಣವನ್ನು ಹಮ್ಮಿಕೊಂಡು ಬಂದಿರುವುದು ಪವಿತ್ರವಾದ ಕೆಲಸವಾಗಿದೆ ಎಂದರು.
ಅಳವಂಡಿ ವಲಯ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡ ಸುರೇಶ ಸಂಗರೆಡ್ಡಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಇವರನ್ನು ಸನ್ಮಾನಿಸಲಾಯಿತು. ಶಿವರೆಡ್ಡಿ ಮೇಗಳಮನಿ, ಅಂದನಗೌಡ್ರು ಪೊಲೀಸಪಾಟೀಲ, ಸುರೇಶ ಮೇಗಳಮನಿ, ದೇವಪ್ಪ ವಾಲಿಕಾರ, ದೇವಪ್ಪಗೌಡ್ರು ಪೊಲೀಸಪಾಟೀಲ, ಗುರುಬಸಪ್ಪ ಮೇಗಳಮನಿ, ಮಲ್ಲನಗೌಡ್ರು ಪೊಲೀಸಪಾಟೀಲ, ರಮೇಶ ವಾಲಿಕಾರ, ಉಮೇಶ ಬೆಣಕಲ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೇದಮೂರ್ತಿ ಪ್ರವೀಣ ಸ್ವಾಮಿ ಹುಲಕಂತಿಮಠ ಪುರಾಣ ಪಠಿಸಿದರು. ವೇದಮೂರ್ತಿ ಕುಮಾರಸ್ವಾಮಿ ಶಾಸ್ತ್ರಿಗಳು ಹಿರೇಮಠ ಪುರಾಣ ಪ್ರವಚನ ಮಾಡಿದರು. ವೆಂಕಣ್ಣ ವರಕನಳ್ಳಿ ಸಂಗೀತ ಸೇವೆಗೈದರು. ಮೌನೇಶ ಬಡಿಗೇರ ತಬಲಾಸಾಥ್ ನೀಡಿದರು.
Comments are closed.