ಮುನಿರಾಬಾದ್ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಜ್ಯೋತಿ ಸಲಹೆ
ಕೊಪ್ಪಳ: ಕಾಂಗ್ರೆಸ್ ಬೆಂಬಲಿತ ಸದಸ್ಯರು ಮುನಿರಾಬಾದ್ ಗ್ರಾಮ ಪಂಚಾಯತಿಗೆ ಎರಡನೆ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಿಮಿತ್ಯ ನೂತನ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಮಾಜಿ ತಾ. ಪಂ. ಅಧ್ಯಕ್ಷರನ್ನು ಮುನಿರಾಬಾದಿನ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗೆ ಎರಡನೆ ಅವಧಿಗೆ ಅಧ್ಯಕ್ಷರಾದ ಅಯೂಬ್ ಖಾನ್ ಮತ್ತು ಉಪಾಧ್ಯಕ್ಷರಾದ ಸೌಭಾಗ್ಯ ನಾಗರಾಜರನ್ನು ಹಾಗೂ ಅದಕ್ಕೆ ಶ್ರಮಿಸಿದ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರ ಶಾಮುವೇಲ್ ಅವರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹಣಕಾಸು ಒದಗಿಸಲಾಗಿದೆ. ಗ್ಯಾರಂಟಿಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ನಡೆದಿದ್ದು ಹಂತ ಹಂತವಾಗಿ ಉಳಿದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಕೆಲಸ ನಡೆದಿದೆ.
ಮುನಿರಾಬಾದ್ ಯೋಜನಾ ಗ್ರಾಮವಾಗಿದ್ದು, ಪ್ರಸ್ತುತ ಅದರ ಬೆಳವಣಿಗೆಯ ವೇಗ ಹೆಚ್ಚುತ್ತಿದೆ, ಅಲ್ಲಿ ಆಗಬೇಕಿರುವ ಒಟ್ಟು ಕೆಲಸಗಳನ್ನು ಯೋಜನೆ ರೂಪದಲ್ಲಿ ಸಿದ್ದಪಡಿಸಿ ಸಮಗ್ರ ಅಭಿವೃದ್ಧಿ ಮಾಡೆಲ್ ಪಟ್ಟಣದ ರೂಪ ಕೊಡಲು ಗ್ರಾಮ ಪಂಚಾಯತಿ ಕೆಲಸ ಮಾಡಲಿ, ಗ್ರಾಮ ಪಂಚಾಯತಿಗೆ ಪ್ರಸ್ತುತ ದೊಡ್ಡ ಶಕ್ತಿ ಇದೆ. ಸ್ವಚ್ಚತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ಕೊಡುವ ಜೊತೆಗೆ ಇಲ್ಲಿನ ಜನರಿಗೆ ವಾಸಕ್ಕೆ ಅಗತ್ಯವಿರುವ ಭೂಮಿಯನ್ನು ಸರಕಾರ ಮಟ್ಟದಲ್ಲಿ ಕೊಡಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಸಚಿವರಾದ ಶಿವರಾಜ ತಂಗಡಗಿ ಅವರ ಮೂಲಕ ಒತ್ತಾಯ ಮಾಡಬೇಕಿದೆ, ಅಲ್ಲದೇ ವಿಶೇಷ ಅನುದಾನ ತಂದು ಬರುವ ಮೂರು ವರ್ಷದಲ್ಲಿ ಉತ್ತಮ ಕೆಲಸ ಮಾಡಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರ ಶಾಮುವೇಲ್, ಮಹಿಳಾ ಕಾಂಗ್ರೆಸ್ ಮೂಲಕ ಸನ್ಮಾನಿಸಿ ಗೌರವಿಸಿದ್ದು ಸಂತೋಷ ತಂದಿದೆ, ಸಲಹೆಗಳನ್ನು ಸ್ವೀಕರಿಸಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಶಾಸಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕಮಲಾ ಇಸ್ರೇಲ್, ಕಾಂಗ್ರೆಸ್ ಎಸ್. ಟಿ. ಘಟಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಮಹಿಬೂಬ, ಮಹ್ಮದ್ ಇಸಾಖ್, ನಾಗರಾಜ ಮುನಿರಾಬಾದ್, ಮಹ್ಮದ್ ಅಲ್ತಾಫ್ ಇತರರು ಇದ್ದರು.
Comments are closed.