ಘೋಸ್ಟ್ ಸಿನಿಮಾ ವಿಮರ್ಶೆ: ದಾರಿ ತಪ್ಪಿಸುತ್ತಲೇ ಇಷ್ಟವಾಗುವ ದೊಡ್ಡಪ್ಪ!
ರೇಟಿಂಗ್: 5ಕ್ಕೆ 4.(****)
-ಬಸವರಾಜ ಕರುಗಲ್
ಆಮೆಗೂ, ಮೊಲಕ್ಕೂ ರೇಸ್… ಗೆಲ್ತಿನಿ ಅನ್ನೋ ಒವರ್ ಕಾನ್ಫಿಡೆನ್ಸ್‌ನಲ್ಲಿ ನಿದ್ದೆಗೆ ಜಾರುವ ಮೊಲ. ಗೆಲುವಿನ ಸಮೀಪಕ್ಕೆ ಆಮೆ ಬಂದಾಗ ಎಚ್ಚರಗೊಳ್ಳುವ ಮೊಲ…
ಈ ಕಥೆ ಚಿಕ್ಕಮಕ್ಕಳಿಗೂ ಗೊತ್ತು. ಗೆಲ್ಲೋದು ಆಮೆನಾ? ಮೊಲನಾ? ಅನ್ನೋದು ಗೊತ್ತು. ಆದರೆ ಈ ಕಥೇಲಿ ಗೆಲ್ಲೋದು ಮಾತ್ರ ಬೇರೆ. ಭಯ ಇರಬೇಕು, ಆವಾಗ್ಲೇ ಧೈರ್ಯ ಎಷ್ಟಿದೆ ಅಂತ ಗೊತ್ತಾಗುತ್ತೆ. ಸಿಎಂನೇ ತನ್ನ ಮುಂದೆ ಮಂಡಿಯೂರುವ ದೊಡ್ಡೋರು, ಬರೀ ಕಣ್ಣಲ್ಲಷ್ಟೇ ಅಲ್ಲ, ಗನ್‌ಗಳ ಗೊಂಚಲಿನಿಂದಾನೂ ಹೆಣಗಳ ರಾಶಿ ಹಾಕುವ ದೊಡ್ಡಪ್ಪನೂ ಹೌದು.
ಸಿಬಿಐ ದಾಳಿಯಲ್ಲಿ ಸಿಗುವ ಸಾವಿರ ಕೆಜಿ ಚಿನ್ನ, ಸರಕಾರಕ್ಕೆ ತಲುಪುವಾಗ ಬರೀ ನೂರು ಕೆಜಿ ಆಗಿರುತ್ತೆ. ಬಾಕಿ ಚಿನ್ನ ಏನಾಯ್ತು? ಅದು ಯಾರ ಪಾಲಾಯ್ತು? ಹೇಗಾಯ್ತು? ಅನ್ನೋದೇ ಕಥೆಯ ಒನ್‌ಲೈನ್.
ಇಡೀ ಸಿನಿಮಾ ಶೇಕಡಾ 80ರಷ್ಟು ಜೈಲಿನ ಸೆಟ್‌ನಲ್ಲೇ ಚಿತ್ರೀಕರಣಗೊಂಡಂತೆ ಕಾಣುತ್ತದೆ. ಜೈಲನ್ನೇ ಹೈಜಾಕ್ ಮಾಡಿ, ಖೈದಿಗಳನ್ನೇ ಒತ್ತೆಯಾಳಾಗಿಟ್ಟುಕೊಂಡು ಆಡುವ ಕಳ್ಳ-ಪೊಲೀಸ್ ಆಟ ಪ್ರಥಮಾರ್ಧದಲ್ಲಿ ಗೊಂದಲ, ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ದ್ವಿತೀಯಾರ್ಧದಲ್ಲಿ ಕಥೆಗೊಂದು ಚೌಕಟ್ಟು ದಕ್ಕುತ್ತದೆ.
ಎರಡು ದಿನದಲ್ಲಿ ನಡೆಯುವ ಘಟನೆಯನ್ನು ಎರಡು ಗಂಟೆ ಹದಿನಾರು ನಿಮಿಷದಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀನಿ. ಸಿನಿಮಾ ಮುಗಿದಾಗಲೂ ಕುತೂಹಲ ಮಾತ್ರ ತಣಿಯಲ್ಲ. ಹಾಗಾಗಿ ಘೋಸ್ಟ್ ಸಿಕ್ವೆಲ್ ನಿರೀಕ್ಷಿತ. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಸಿನಿಮಾ ನೋಡ್ತಾ ನೋಡ್ತಾ ನಿಷ್ಕರ್ಷ ನೆನಪಿಸುತ್ತೆ, ಕೆಜಿಎಫ್-2 ನೆನಪಾಗುತ್ತೆ. ಕೆಲ ದೃಶ್ಯಗಳು ನವಗ್ರಹವನ್ನೂ ನೆನಪಿಸುತ್ತವೆ. ಹೈಜಾಕ್ ದೃಶ್ಯಗಳು ನಿಷ್ಕರ್ಷ ನೆನಪಿಸಿದರೆ, ಬಸ್‌ನಲ್ಲಿ ಬಂಗಾರ ಸಾಗಿಸುವ ದೃಶ್ಯ ನವಗ್ರಹ ನೆನಪಿಸುತ್ತವೆ. ಗನ್‌ಗಳ ಮೊರೆತ ಕೆಜಿಎಫ್ ಕಣ್ಮುಂದೆ ತರುತ್ತದೆ.
ಇದು ಗ್ಯಾಂಗ್‌ಸ್ಟರ್‌ವೊಬ್ಬನ ಕಾಲ್ಪನಿಕ ಕಥೆಯಾಗಿರುವುದರಿಂದ ಶಿವಣ್ಣನ ಅಭಿಮಾನಿಗಳಿಗೆ ಹಬ್ಬ. ಶಿವಣ್ಣನ ಆ್ಯಕ್ಟಿಂಗ್, ಎನರ್ಜಿ ಬಗ್ಗೆ ಎರಡು ಮಾತಿಲ್ಲ. ಜಯದೇವ ಅವರನ್ನು ನೋಡಿದರೆ ಸಾಯಿಕುಮಾರ್ ಅವರನ್ನ ನೋಡಿದ ಹಾಗಾಗುತ್ತದೆ. ಚಿತ್ರದಲ್ಲಿ ನಾಯಕಿಯೇ ಇಲ್ಲ. ಅರ್ಚನಾ ಜೋಯಿಸ್ ನಾಯಕಿ ಅನಿಸಲ್ಲ. ಕೆಲವಷ್ಟೇ ದೃಶ್ಯಗಳಲ್ಲಿ ಅವರು ಕಾಣಿಸುತ್ತಾರಷ್ಟೇ. ಹಾಗಾಗಿ ಹಾಡುಗಳಿಗೂ ಇಲ್ಲಿ ಜಾಗ ಇಲ್ಲ. ಚೀಟಿ ಸಂದೇಶದ ಸಹಾಯ ಮಾಡುವ ಇಲಿ ದೃಶ್ಯ ಹುಬ್ಬೇರಿಸುತ್ತವೆ. ಅನುಪಮ್ ಖೇರ್ ಕೊನೆಯ ಹತ್ತಾರು ನಿಮಿಷ ಕಾಣಿಸುತ್ತಾರಷ್ಟೇ.
ಇಡೀ ಸಿನಿಮಾದ ಹೀರೋ ಛಾಯಾಗ್ರಾಹಕ ಮಹೇಂದ್ರ ಸಿಂಹ. ಕತ್ತಲು-ಬೆಳಕಿನ ದೃಶ್ಯಗಳನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ಹೀರೋ ಅಂದ್ರೆ ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ. ಜನ ಥೇಟರ್‌ನಿಂದ ಹೊರ ಬಂದರೂ ಆ ಬೀಟ್ ಗುನುಗುನಿಸುವುದು ಕೇಳುತ್ತದೆ. ಆರಂಭದಲ್ಲಿ ಮಾತಿಗಿಂತ ಗನ್ ಸದ್ದು ಹೆಚ್ಚು ಕೇಳುತ್ತೆ. ಆನಂತರ ಬರುವ ಸಂಭಾಷಣೆಯ ಮಾತುಗಳಿಗೆ ಚಪ್ಪಾಳೆ, ಶಿಳ್ಖೆ ಸಿಗುತ್ತವೆ.
ನಿರ್ದೇಶಕ ಶ್ರೀನಿ. ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದು ಮೆಚ್ಚುಗೆಗೆ ಅರ್ಹ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ನಿರ್ಮಾಪಕ ಸಂದೇಶ್ ನಾಗರಾಜ್ ಸೇಫ್ ಎನ್ನಬಹುದು. ವಿವಿಧ ಭಾಷೆಯಲ್ಲೂ ಚಿತ್ರ ತೆರೆ ಕಂಡಿರುವುದರಿಂದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆಗೆ ಜೈಲರ್‌ನಲ್ಲಿ ಶಿವಣ್ಣ ಮಾಡಿದ ಪಾತ್ರ ಎಂಬುದಂತು ಸತ್ಯ.
Comments are closed.