ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜೂನ್ 7- ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗವನ್ನು ಭೇಟಿ ಮಾಡಿ ಮಾತನಾಡಿದರು.
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, (preferential treatment) ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅತಿ ಅಗತ್ಯ. ಈ ಉದ್ದೇಶದಿಂದ ಜಾತಿವಾರು ಸಮೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾವಳ್ಳಿ ಶಂಕರ್, ಪ್ರೊ.ರವಿ ವರ್ಮಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ್ ಸೇರಿ 150 ಕ್ಕೂ ಹೆಚ್ಚು ಮಂದಿ ನಾನಾ ಜಾತಿಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
Comments are closed.