ಕಾಂಗ್ರೆಸ್ ವಿರುದ್ಧ ಜನಾಂದೋಲನ ರೂಪಿಸಿ: ಹೆಚ್‌ಡಿಕೆ

0

Get real time updates directly on you device, subscribe now.

ಕೊಪ್ಪಳ: ಕಾಂಗ್ರೆಸ್ ಪಕ್ಷದ ಪ್ರಜಾ ವಿರೋಧಿ ನೀತಿಗಳನ್ನು ಜನರ ಮನೆಯ ಬಾಗಿಲಿಗೆ ಒಯ್ದು ಸರ್ಕಾರದ ಅದಕ್ಷತೆಯ ವಿರುದ್ಧ ಜನಾಂದೋಲನ ರೂಪಿಸಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಪಕ್ಷದ ಕೊಪ್ಪಳ ಜಿಲ್ಲಾ ಘಟಕಕ್ಕೆ ನಿರ್ದೇಶಿಸಿದ್ದಾರೆ.

“ಗುರುವಾರ ಬೆಂಗಳೂರಿನಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯ ನಂತರ ಪ್ರತ್ಯೇಕವಾಗಿ ಜಿಲ್ಲೆಯ ಪಕ್ಷದ ಸ್ಥಿತಿಗತಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು. ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಅವಮಾನಕರ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವ ಪ್ರಕರಣ, ಸ್ಟಿಂಗ್ ಆಪರೇಷನ್ ಮೂಲಕ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ, ಬಸ್ ಪ್ರಯಾಣ ದರ ಹಾಗೂ ಹಾಲು, ಮೊಸರು ಮತ್ತು ತುಪ್ಪದ ಬೆಲೆ ಏರಿಕೆ ವಿಷಯಗಳ ಕುರಿತು ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇದರಿಂದ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯ ಎಂಬುದು ಅವರು ಅಭಿಪ್ರಾಯವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಅವರೊಂದಿಗೆ ಚರ್ಚೆ ನಡೆಸಬೇಕು. ಬಿಜೆಪಿಯೊಂದಿಗೆ ಕ್ಷೇತ್ರ ಹಂಚಿಕೆಯ ವಿಷಯ ಕುರಿತು ಸ್ಥಳೀಯ ನಾಯಕತ್ವಕ್ಕೆ ಸಂಪೂರ್ಣ ಸ್ವಾತಂತ್ರ ನೀಡಲಾಗುವುದು. ಕಾಂಗ್ರೆಸ್ ಸರಕಾರದ ಪತನ ಕೊಪ್ಪಳದಿಂದಲೇ ಆರಂಭವಾಗಬೇಕು ಎಂದು ಸಚಿವರು ಬಯಸಿದ್ದಾರೆ,” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಾವು ಕೊಪ್ಪಳಕ್ಕೆ ಭೇಟಿ ನೀಡಬೇಕೆಂಬ ಸಾರ್ವಜನಿಕ ಅಭಿಪ್ರಾಯ ತಮ್ಮ ಗಮನದಲ್ಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ ಸಮಯ ಹೊಂದಿಸಿಕೊಂಡು ಬೃಹತ್ ಕಾರ್ಯಕ್ರಮ ಆಯೋಜಿಸಿ ಕೊಪ್ಪಳಕ್ಕೆ ಭೇಟಿ ನೀಡಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಒಕ್ಕೂಟ
ಕಲ್ಯಾಣ ಕರ್ನಾಟಕ ಭಾಗದಲ್ಲಿ ದಿಗ್ವಿಜಯ ಸಾಧಿಸಲು ಮಾಡಬೇಕಾದ ತಂತ್ರಗಳನ್ನು ಕೊಪ್ಪಳದಲ್ಲಿಯೇ ರೂಪಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!