ಕಂಪನಿಯ ಹುನ್ನಾರದಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ಶಾಮೀಲು: ಸಿವಿಸಿ

0

Get real time updates directly on you device, subscribe now.

Kannadanet 24×7 News
ಖಾಸಗಿ ಕಂಪನಿ ವಿಸ್ತರಣೆಗೆ ಉದ್ದೇಶಿತ ಸಭೆ ರದ್ದುಪಡಿಸಿ’

‘ನರಕ ಸೃಷ್ಟಿಗೆ ಪ್ರಯತ್ನ ನಡೆಯುತ್ತಿದ್ದರೂ ಶಾಸಕ, ಸಂಸದ ಹಾಗೂ ಸಚಿವದ್ವಯರ
ಮೌನವೇಕೆ?’

ಕೊಪ್ಪಳ: ತಾಲೂಕಿನ ಕನಕಾಪುರದಲ್ಲಿ ಮೆ. ಮುಕುಂದ್ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಕಂಪನಿಯ ವಿಸ್ತರಣೆಗಾಗಿ ಇದೇ ಸೆಪ್ಟೆಂಬರ್ 29ರಂದು ಕರೆಯಲಾಗಿರುವ ‘ಪರಿಸರ ಸಾರ್ವಜನಿಕ ಆಲಿಕೆ ಸಭೆ’ಯನ್ನು ರದ್ದುಪಡಿಸಬೇಕು ಹಾಗೂ ವಿಸ್ತರಣೆಗಾಗಿ ಕಂಪನಿ ಸಲ್ಲಿಸಿರುವ ಕರಡು ಪ್ರತಿಯನ್ನು ತಿರಸ್ಕರಿಸಬೇಕೆಂದು ಶುಕ್ರವಾರ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದರು.

“ಮುಂದಿನ ದಿನಗಳಲ್ಲಿ ಜೀವಿಗಳು ಮತ್ತು ಕೃಷಿಯನ್ನು ನಿರ್ನಾಮ ಮಾಡಿ ನರಕವನ್ನೇ ಸೃಷ್ಟಿಸುವ ಈ ಘಟಕದ ವಿಸ್ತರಣೆ ಬೇಡ. ಕೊಪ್ಪಳದ ಪರಿಸರ, ಸಾರ್ವಜನಿಕರ ಬೇಡಿಕೆ, ನೂರಾರು ದಿನಗಳ ನಿರಂತರ ಪ್ರತಿಭಟನೆ ಹಾಗೂ ಧಾರ್ಮಿಕ ಮುಖಂಡರ ಮನವಿಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಅನೇಕ ನಿಯಮಾವಳಿಗಳನ್ನು ಉಲ್ಲಂಘಿಸಿ ಹರಿಯುತ್ತಿದ್ದ ಹಳ್ಳವನ್ನೇ ಮಾಯ ಮಾಡಿ ಕಳೆದ ಹಲವು ವರ್ಷಗಳಿಂದಲೂ ಆ ಕಂಪನಿ ಕಾರ್ಯಾಚರಣೆ ನಡೆಸುತ್ತಿದೆ.

ಇದೀಗ ಹೆಚ್ಚುವರಿ 66.2 ಹೆಕ್ಟೆರ್ ಭೂಮಿಯಲ್ಲಿ ಘಟಕವನ್ನು ವಿಸ್ತರಿಸಿ ಮಿಶ್ರ ಲೋಹದ ಉಕ್ಕು ಉರುಳುಗಳ (alloy steel rolling) ಉತ್ಪಾದನಾ ಸಾಮರ್ಥ್ಯವನ್ನು 0.7 ಮಿಲಿಯನ್ ಟನ್ ನಿಂದ 0.9 ಮಿಲಿಯನ್ ಟನ್ ಗೆ ಏರಿಸಲು ‘ಪರಿಸರ ಪ್ರಭಾವ ಮೌಲ್ಯಮಾಪನ ಹಾಗೂ ಪರಿಸರ ನಿರ್ವಹಣಾ ಯೋಜನೆಯ ಕರಡ’ನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಈ ಕರಡು ಪ್ರತಿಯಲ್ಲಿ ಭಾರಿ ಪ್ರಮಾದಗಳಿವೆ. ವಿವಿಧ ಇಲಾಖೆಗಳ ಸ್ಥಾಪಿತ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ.

ವಾಸ್ತವಾಂಶಗಳನ್ನು ಮರೆಮಾಚಲಾಗಿದೆ ಇಲ್ಲವೇ ತಿರುಚಲಾಗಿದೆ. ಪರವಾನಿಗೆ ಪಡೆಯಲು ರಾಜ್ಯ ಮಟ್ಟದ ‘ಪರಿಸರ ಅಧ್ಯಯನ ಪ್ರಾಧಿಕಾರ’ದಿಂದ ‘ಪರಿಸರ ವಿಮೋಚನಾ’ ಪತ್ರ ಪಡೆಯುವುದು ಅಗತ್ಯ. ಇಲ್ಲಿನ ಜನರನ್ನು ವಂಚಿಸಿ ಅನೈತಿಕ ಮಾರ್ಗದ ಮೂಲಕ ವಿಮೋಚನಾ ಪತ್ರವನ್ನು ಪಡೆಯಲು ದೊಡ್ಡಮಟ್ಟದ ಹುನ್ನಾರ ನಡೆಯುತ್ತಿದೆ. ಈ ಹುನ್ನಾರದಲ್ಲಿ ಕೊಪ್ಪಳದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಪಾಲುದಾರರು ಎಂದು ಗಂಭೀರ ಆರೋಪ ಮಾಡಿದರು.

“ಸಾರ್ವಜನಿಕ ಆಲಿಕೆ ಸಭೆ ಬಾಧಿತ ಗ್ರಾಮದಲ್ಲಿ ನಡೆಯಬೇಕು ಎಂಬುದು ನಿಯಮ. ಕನಕಾಪುರದಲ್ಲಿ ಸೆಪ್ಟೆಂಬರ್ 29ರಂದು ಸಭೆ ನಡೆಯಲಿದೆ ಎಂದು ಕಂಪನಿ ಸಾರ್ವಜನಿಕರಿಗೆ ತಿಳಿಸಿದೆ. ಆದರೆ ಪರಿಸರ ಇಲಾಖೆಯ ಅಧಿಕಾರಿಗಳು ಈ ಸಭೆ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕನಕಾಪುರಕ್ಕೂ ನಂದಿಹಳ್ಳಿಗೂ ಏನು ಸಂಬಂಧ? ಕನಕಾಪುರದ ಗ್ರಾಮಸ್ಥರು ಹಾಗೂ ಕೈಗಾರಿಕಾ ಘಟಕಗಳ ವಿರುದ್ಧ ಹೋರಾಟ ನಡೆಸುತ್ತಿರುವವರು ಈ ಸಭೆಗೆ ಬಾರದಿರಲಿ. ಸಭೆ ಸುತೂತ್ರವಾಗಿ ನಡೆದು ಕಂಪನಿಗೆ ಅಗತ್ಯವಿರುವ ಪತ್ರ ಲಭಿಸಲಿ ಎಂಬುದೇ ಈ ಹುನ್ನಾರದ ಹಿಂದೆ ಇರುವ ಉದ್ದೇಶ,” ಎಂದರು.

ಅಗತ್ಯ ಇರುವ ಪತ್ರ ನೀಡುವುದು ಅಥವಾ ನೀಡದೇ ಇರುವುದು ರಾಜ್ಯ ಸರಕಾರದ ಪರಮಾಧಿಕಾರ. ಒಂದು ವೇಳೆ ಪತ್ರ ನೀಡಿದರೆ ಭವಿಷ್ಯದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ನಿಲ್ಲಿಸುವುದು ಕಷ್ಟ. ಎರಡು ದಶಕಗಳ ಹಿಂದೆ ಜನರ ದಾರಿ ತಪ್ಪಿಸಿ ಕಂಪನಿಗಳ ಜೊತೆ ಕೈಜೋಡಿಸಿ ಅಧಿಕಾರಿಗಳು ಕಂಪನಿಗಳ ಕಾರ್ಯಾಚರಣೆಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮವಾಗಿ ಕೊಪ್ಪಳದ ಪರಿಸರ ಸಂಪೂರ್ಣ ಹಾಳಾಗಿದೆ. ಈ ಕರಾಳ ಇತಿಹಾಸ ಮತ್ತೆ ಮರುಕಳಿಸಬಾರದು ಎಂದಾದರೇ ಉದ್ದೇಶಿತ ಸಭೆ ರದ್ದುಗೊಳ್ಳಲೇಬೇಕು ಎಂದು ಪ್ರತಿಪಾದಿಸಿದರು.

“ಗಂಭೀರ ಲೋಪ ಎಸಗಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ಸಲಹೆಗಾರ ಸಂಸ್ಥೆ ಕರಡು ಪ್ರತಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕಂಪನಿಯು ಅನೇಕ ಗಂಭೀರ ಪ್ರಮಾದಗಳನ್ನು ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಅನೇಕ ವಾಸ್ತವಾಂಶಗಳನ್ನು ಮುಚ್ಚಿಡಲಾಗಿದೆ. ಕೆಲವೊಂದು ಪ್ರಮಾದಗಳು ಕ್ರಿಮಿನಲ್ ಅಪರಾಧದ ಸ್ವರೂಪದಲ್ಲಿವೆ. ಈ ಹಿಂದೆ ಈ ಕಂಪನಿಯ ಉದ್ದೇಶಿತ ವಿಸ್ತರಣೆಯಿಂದ ಉಪಯೋಗವಾಗುತ್ತದೆ ಎಂದಿದ್ದ ಕೈಗಾರಿಕಾ ಸಚಿವ
ಎಂ ಬಿ ಪಾಟೀಲ್ ಹಾಗೂ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಲ್ಲಿಸಲಾಗಿರುವ ಕರಡು ಪ್ರತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ನಿಯಮ ಉಲ್ಲಂಘಿಸಿ ಈಗಾಗಲೇ ಕಾರ್ಯಾಚರಣೆಯಲ್ಲಿರುವ ಘಟಕದ ವಿರುದ್ಧ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸಬೇಕು. ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

“ಇಷ್ಟು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದ್ದರೂ ಇಲ್ಲಿನ ಶಾಸಕರು, ಸಂಸದರು ಮತ್ತು ಸಚಿವದ್ವಯರು ಮೌನ ವಹಿಸಿರುವುದು ಅಚ್ಚರಿಯ ವಿಷಯ. ಉದ್ದೇಶಿತ ಸಭೆ ರದ್ದುಪಡಿಸಿ, ಕಂಪನಿಯ ವಿಸ್ತರಣೆ ತಡೆದು ಇಲ್ಲಿಯ ಪರಿಸರ ರಕ್ಷಿಸಬೇಕಿರುವುದು ಇಲ್ಲಿಯ ಶಾಸಕರ ಮತ್ತು ಸಂಸದರ ಕರ್ತವ್ಯ ಹಾಗೂ ಜವಾಬ್ದಾರಿ. ಒಂದು ವೇಳೆ ಸಭೆ ನಡೆಸುವುದು ಅನಿವಾರ್ಯವಾದರೆ, ಅವರು ಹಾಜರಾಗಿ ಉದ್ದೇಶಿತ ವಿಸ್ತರಣೆಯ ವಿರುದ್ಧ ಲಿಖಿತ ಪ್ರಮಾಣ ಪತ್ರ ಸಲ್ಲಿಸಬೇಕು. ಈ ಹಿಂದೆ ನುಣುಚಿಕೊಂಡಂತೆ ಈ ವಿಷಯದಲ್ಲಿಯೂ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಿಂದ ಅವರು
ನುಣುಚಿಕೊಳ್ಳಬಾರದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ವಿನಮ್ರವಾಗಿ ವಿನಂತಿಸುತ್ತೇನೆ,” ಎಂದರು.

ಕಂಪನಿ ಮತ್ತು ಅಧಿಕಾರಿಗಳ ಪ್ರಮಾದಗಳು ಮತ್ತು ಹುನ್ನಾರವನ್ನು ದೀರ್ಘವಾಗಿ ವಿವರಿಸಿ ಸಭೆಯನ್ನು ರದ್ದುಪಡಿಸಬೇಕು ಹಾಗೂ ಕರಡು ಪ್ರತಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಒಬ್ಬ ಜವಾಬ್ದಾರಿ ಮತ್ತು ಜಾಗೃತ ನಾಗರಿಕ ಹಾಗೂ ರಾಜಕೀಯ ಮುಖಂಡನಾಗಿ ಗಿಣಿಗೇರಾ, ಕನಕಪುರ ಮತ್ತು ಸುತ್ತಲಿನ ಗ್ರಾಮಗಳ ಜೀವಿಗಳ ಮತ್ತು ಪರಿಸರ ಉಳಿಸಲು ವೈಯಕ್ತಿಕ ನೆಲೆಗಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಅದನ್ನು ಮಾಡಿದ್ದೇನೆ ಎಂದರು.

ನಮ್ಮ ಮನವಿಯ ಮೇರೆಗೆ ಈ ಹಿಂದೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವಿಶೇಷ ತಂಡ ರಚಿಸಿ ಕೊಪ್ಪಳದಲ್ಲಿ ಕೈಗಾರಿಕಾ ಘಟಕಗಳು ಸೃಷ್ಟಿಸಿರುವ ಆವಾಂತರಗಳ ವಿರುದ್ಧ ಅಧ್ಯಯನ ನಡೆಸಿತು. ಆ ಸಂದರ್ಭದಲ್ಲಿ ಮುಕುಂದ ಕಂಪನಿಯ ಆವಾಂತರಗಳ ಅಧ್ಯಯನ ನಡೆದಿರಲಿಲ್ಲ. ಆದರೆ ಈಗ ಆ ಕಂಪನಿಯ ಆವಾಂತರಗಳ ವಿರುದ್ಧ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕೆಂದು ಕೇಂದ್ರದ ಇಲಾಖೆಯನ್ನು ಕೋರಲಾಗುವುದು ಎಂದರು.

ತಮ್ಮ ಆರೋಪಗಳಿಗೆ ಪೂರಕವಾದ ದಾಖಲೆಗಳನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.

ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜೆಡಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ ಉಪಸ್ಥಿತರಿದ್ದರು.

ಬೇಡಿಕೆಗಳು

* ಸಪ್ಟಂಬರ್ 29ರ ಸಾರ್ವಜನಿಕ ಆಲಿಕೆ ಸಭೆ ರದ್ದಾಗಲಿ

* ಪರಿಸರ ಪ್ರಭಾವ ಮೌಲ್ಯಮಾಪನ ಹಾಗೂ ಪರಿಸರ ನಿರ್ವಹಣಾ ಯೋಜನೆಯ ಕರಡು ತಿರಸ್ಕರಿಸಿ
* ಅಕ್ರಮ ಎಸಗಿದೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ
* ಕಂಪನಿಯ ಪ್ರಮಾದಗಳ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸಿ
* ಈ ವಿಷಯಕ್ಕಾಗಿ ಕೊಪ್ಪಳದ ಶಾಸಕ ಮತ್ತು ಸಂಸದ ನೇತೃತ್ವ ವಹಿಸಲಿ
* ಸಭೆ ನಡೆದರೆ ಶಾಸಕ ಸಂಸದ ಹಾಜರಾಗಿ ತಮ್ಮ ವಿರೋಧ ದಾಖಲಿಸಲಿ

Get real time updates directly on you device, subscribe now.

Leave A Reply

Your email address will not be published.

error: Content is protected !!