ಕೊಪ್ಪಳ ತಾಲೂಕು ತೀವ್ರ ಬರಪೀಡಿತ ಎಂದು ಘೋಷಣೆ; ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ್

ಕೊಪ್ಪಳ: ಮುಂಗಾರು ಮಳೆಯ ಕೊರತೆ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ, ರಾಜ್ಯ ಸರ್ಕಾರದ ಮೂರನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೊಪ್ಪಳ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ರೈತರು ಎದುರಿಸುತ್ತಿರುವ ಬರ ಪರಿಸ್ಥಿತಿ, ಮಳೆ ಕೊರತೆ ಹಾಗೂ ಕೃಷಿ ಚಟುವಟಿಕೆಗಳ ಮೇಲಾದ ಪರಿಣಾಮವನ್ನು ಸರ್ಕಾರದ ಗಮನಕ್ಕೆ ತಂದು, ಕೊಪ್ಪಳ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗಿತ್ತು. ಇದೀಗ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೊಪ್ಪಳ ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.
ವಿರೋಧ ಪಕ್ಷದ ಆರೋಪಗಳಿಗೆ ಶಾಸಕರ ತಿರುಗೇಟು :
ಕೊಪ್ಪಳ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗುವ ವಿಚಾರದಲ್ಲಿ ವಿರೋಧ ಪಕ್ಷದ ಕೆಲ ನಾಯಕರು ಹಲವು ಆರೋಪಗಳನ್ನು ಮಾಡುತ್ತಾ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೆ ಬರ ಘೋಷಣೆ ಎನ್ನುವುದು ನಿಗದಿತ ಮಾನದಂಡಗಳು, ಮಳೆ ಕೊರತೆ ಹಾಗೂ ಸಂಬಂಧಿಸಿದ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರ ಕೈಗೊಳ್ಳುವ ಪ್ರಕ್ರಿಯೆಯಾಗಿದೆ.
ಈ ವಿಚಾರದಲ್ಲಿ ನಾನು ಆರಂಭದಿಂದಲೂ “ತಾಳ್ಮೆ ಇರಲಿ, ಕೊಪ್ಪಳ ತಾಲೂಕು ಮೂರನೇ ಪಟ್ಟಿಯಲ್ಲಿ ಬರಲಿದೆ” ಎಂದು ಸ್ಪಷ್ಟವಾಗಿ ಹೇಳಿದ್ದೆ. ಇಂದು ಸರ್ಕಾರದ ಘೋಷಣೆಯೊಂದಿಗೆ ಆ ಮಾತು ನಿಜವಾಗಿದೆ.
ರೈತರ ಸಂಕಷ್ಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕಿಂತ, ರೈತರಿಗೆ ದೊರೆಯಬೇಕಾದ ಪರಿಹಾರ ಮತ್ತು ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ರೈತರ ದಾರಿ ತಪ್ಪಿಸುವಂತಹ ಆರೋಪಗಳು ಹಾಗೂ ಗೊಂದಲ ಸೃಷ್ಟಿಸುವ ಹೇಳಿಕೆಗಳಿಗೆ ರೈತರು ಕಿವಿಗೊಡಬಾರದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನವಿ ಮಾಡಿದ್ದಾರೆ.