ವಿಂಡ್ ಮಿಲ್ ಕಂಬದಿಂದ ಬಿದ್ದು ಕಾರ್ಮಿಕ ಸಾವು : ಕುಟುಂಬಕ್ಕೆ ೫೦ ಲಕ್ಷ ಆರ್ಥಿಕ ನೆರವು ನೀಡಲು ಗಣೇಶ್ ಹೊರತಟ್ನಾಳ ಆಗ್ರಹ

ಕೊಪ್ಪಳ,ಸೆ.೦೯: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾವಣಕಿ ಗ್ರಾಮದ ಹೊರವಲಯ ಜಮೀನಿನಲ್ಲಿ ವೆಸ್ಟ್ ಬೆಂಗಾಲ್ ರಾಜ್ಯದ ಮಾಲ್ಡಾ ಜಿಲ್ಲೆಯ ಭಗವಾನಪುರ ಎಂಬ ಗ್ರಾಮದ ಎಸ್.ಕೆ. ಸಬೀರ್ ತಂದೆ ಎಸ್ ಕೆ ಸಲೀಂ ಉದ್ದಿನ್ ಎಂಬ ೨೭ ವರ್ಷದ ಯುವ ಕಾರ್ಮಿಕ ೫೦೦ ಅಡಿಯ ಎತ್ತರದ ವಿದ್ಯುತ್ ಕಂಬದ ಮೇಲಿಂದ ಬಿದ್ದು ಸಾವನ್ನಪ್ಪಿದ್ದು, ಇದಕ್ಕೆ ಸಂಬಂಧಪಟ್ಟ ಕಂಪನಿಯವರು ಹೊಣೆಗಾರಿಕೆ ಹೊತ್ತು, ಮೃತನ ಕುಟುಂಬಸ್ಥರಿಗೆ ೫೦ ಲಕ್ಷ ರೂಗಳ ಪರಿಹಾರವನ್ನು ನೀಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ಟಾಟಾ ಐಸಾನ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯಾವುದೇ ಸುರಕ್ಷಿತ ವಸ್ತುಗಳನ್ನು ಬಳಸದೇ ವಿಂಡ್ ಮಿಲ್ ಟವರ್ ಏರಿ ಕೆಲಸ ಮಾಡುವಾಗ ಕೆಳಗಿನಿಂದ ರಾಡ್ ಒಂದು ರಭಸವಾಗಿ ಮೇಲಕ್ಕೆ ಹೋಗಿ ಆತನ ಮುಖಕ್ಕೆ ತಾಗಿದ್ದರಿಂದ ಆ ಯುವಕ ಮೇಲಿಂದ ಕೆಳಗೆ ಬಿದ್ದು, ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾನೆ. ಇದಕ್ಕೆ ನೇರ ಕಾರಣ ಕಂಪನಿಯ ಮಾಲೀಕರು ಮತ್ತು ಗುತ್ತಿಗೆದಾರರೇ ಆಗಿರುತ್ತಾರೆ ಎಂದು ಆರೋಪಿಸಿದರು.
ವಿಂಡ್ ಕಂಪನಿಯ ಮಾಲೀಕರು ಮತ್ತು ಗುತ್ತಿಗೆದಾರರು ಕಂಪನಿಯ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಪರಿಕರಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಈ ಸಂಬಂಧ ಯಲಬುರ್ಗಾದ ಬೇವೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಂಪನಿ ಮತ್ತು ಗುತ್ತಿಗೆದಾರರ ನಿರ್ಲಕ್ಷದ ವಿರುದ್ಧ ಐಪಿಸಿ / ಬಿಎನ್‌ಎಸ್ ಕಾಯ್ದೆ ಅಡಿ ಪ್ರಕರಣವನ್ನು ಸಂಪೂರ್ಣ ತನಿಖೆಗೊಳ ಪಡಿಸಬೇಕು. ಅಷ್ಟೇ ಅಲ್ಲದೆ ಮೃತ ಯುವಕನ ಪತ್ನಿ ಮತ್ತು ಸಣ್ಣ ಮಗು ಇರುವುದರಿಂದ ಮಗುವಿನ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ೫೦ ಲಕ್ಷ ರೂಗಳ ಪರಿಹಾರ ಹಾಗೂ ಮೃತನ ಕುಟುಂಬಕ್ಕೆ ಮಾಸಿಕ ಪಿಂಚಣಿ ಜಮಾ ಆಗಬೇಕು. ತಪ್ಪಿತಸ್ಥ ಕಂಪನಿಯ ಮಾಲೀಕ ಮತ್ತು ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಗುತ್ತಿಗೆದಾರರಾದ ರಾಮಾರಾವ್ ಮೂಲತಃ ಆಂಧ್ರಪ್ರದೇಶದ ವರಾಗಿದ್ದು, ಇವರಿಗೆ ಕಾರ್ಮಿಕರು ಎಂದರೆ ಅಸಡ್ಡೆ ಮನೋಭಾವ, ಅಲ್ಲದೆ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡುವುದು, ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದವರೆಗೆ ದುಡಿಸಿಕೊಳ್ಳುವುದು. ಯಾರಾದರು ಪ್ರಶ್ನಿಸಿದಲ್ಲಿ ಅವರನ್ನು ಹೊಡೆ ಬಡೆ ಮಾಡುವುದು ಹೀಗೆ ಪ್ರತಿನಿತ್ಯ ಕಾರ್ಮಿಕರ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡುವ ಬಗ್ಗೆಯೂ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
– ಗಣೇಶ್ ಹೊರತಟ್ನಾಳ್
Comments are closed.