ಪತ್ರಿಕಾ ವರದಿಗಳ ಬೆನ್ನಲ್ಲೇ ಆರೋಪಿಗಳ ಬಂಧನ; ಹಗರಣದ ಹಿಂದಿರುವ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳ ಪಾತ್ರವೂ ಬಹಿರಂಗವಾಗಲಿ-ಅಪ್ಸರ್ ಕೊಡ್ಲಿಪೇಟೆ

Get real time updates directly on you device, subscribe now.

ಕೊಪ್ಪಳ, ಸ:  ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಮತ್ತು ವಂಚನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಸಾರ್ವಜನಿಕರ ಗಮನ ಸೆಳೆದಿವೆ. ಪತ್ರಿಕಾ ವರದಿಗಳ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕುಗೊಂಡು ಆರೋಪಿಗಳ ಬಂಧನವಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಈ ಪ್ರಕರಣವನ್ನು ಕೇವಲ ಕೆಲ ವ್ಯಕ್ತಿಗಳ ವಿರುದ್ಧದ ವಂಚನೆ ಪ್ರಕರಣವೆಂದು ಪರಿಗಣಿಸಿ ಮುಕ್ತಾಯಗೊಳಿಸಬಾರದು. ನಗರಾಭಿವೃದ್ಧಿ ಪ್ರಾಧಿಕಾರದಂತಹ ಪ್ರಮುಖ ಸರ್ಕಾರಿ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆಯಲು ಅಧಿಕಾರಿಗಳ ಕರ್ತವ್ಯಲೋಪ, ದಾಖಲೆಗಳ ನಿರ್ವಹಣೆಯಲ್ಲಿನ ಲೋಪ, ಅಧಿಕಾರ ದುರುಪಯೋಗ ಹಾಗೂ ರಾಜಕೀಯ ಅಥವಾ ಇತರ ಪ್ರಭಾವಿಗಳ ಹಸ್ತಕ್ಷೇಪ ಇದೆಯೇ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿ ಪ್ರಕ್ರಿಯೆಯಲ್ಲೂ ಗಂಭೀರ ಅಕ್ರಮ ನಡೆದಿರುವ ಆರೋಪಗಳು ಕೇಳಿಬರುತ್ತಿವೆ. ಕೇವಲ 3 ಹುದ್ದೆಗಳಿಗೆ 7 ಮಂದಿಯನ್ನು ಭರ್ತಿ ಮಾಡಿರುವುದೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಈ ನೇಮಕಾತಿಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆಯೇ, ಹುದ್ದೆಗಳ ಮಂಜೂರಾತಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗವಾಗಿದೆಯೇ ಹಾಗೂ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ನಿರ್ದಿಷ್ಟ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆಯೇ ಎಂಬುದನ್ನು ಆಡಿಟ್ ವರದಿ ಆಧರಿಸಿ ಸಮಗ್ರವಾಗಿ ತನಿಖೆ ನಡೆಸಬೇಕು.

ನೇಮಕಾತಿಯಲ್ಲಿನ ಈ ಗೋಲ್‌ಮಾಲ್‌ಗೆ ಸಂಬಂಧಿಸಿದಂತೆ ಯಾರು ನಿರ್ಧಾರ ಕೈಗೊಂಡರು, ಯಾವ ನಿಯಮದಡಿ ನೇಮಕಾತಿ ಮಾಡಲಾಯಿತು, ಹೆಚ್ಚುವರಿ ನೇಮಕಾತಿಗೆ ಅನುಮತಿ ನೀಡಿದವರು ಯಾರು ಹಾಗೂ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಆರ್ಥಿಕ ಹೊರೆ ಬಿದ್ದಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು.

ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ತಪ್ಪಾಗಿ ನೇಮಕಗೊಂಡಿದ್ದರೆ ಅದರ ಕಾನೂನುಬದ್ಧತೆಯನ್ನೂ ಪರಿಶೀಲಿಸಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಒತ್ತಾಯಿಸಿದ್ದಾರೆ.

ಹಗರಣದ ಸಂಪೂರ್ಣ ಸತ್ಯ ಹೊರಬರಬೇಕು, ತಪ್ಪಿತಸ್ಥರು ಕಾನೂನಿನ ಮುಂದೆ ಶಿಕ್ಷೆಗೆ ಒಳಗಾಗಬೇಕು ಹಾಗೂ ಸಾರ್ವಜನಿಕರ ಹಣ ಮತ್ತು ಆಸ್ತಿಗೆ ನ್ಯಾಯ ದೊರೆಯಬೇಕು.ಸರ್ಕಾರದ ಹಣ ಮತ್ತು ಸಾರ್ವಜನಿಕ ಆಸ್ತಿಯ ದುರುಪಯೋಗ ಯಾವುದೇ ಕಾರಣಕ್ಕೂ ಸಹಿಸುವಂತಿಲ್ಲ. ಅಧಿಕಾರಿಗಳು ಮತ್ತು ರಾಜಕೀಯ ಪ್ರಭಾವಿಗಳು ಯಾರೇ ಆಗಿದ್ದರೂ, ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾದರೆ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ   ಯೂಸುಫ್ ಮೋದಿ, ಜಿಲ್ಲಾಧ್ಯಕ್ಷರು ಸ್ಯಯ್ಯದ್ ಶಾಕಿಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮ್ ಮಾಳೆಕೊಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಖಾದ್ರಿ, ಕೊಪ್ಪಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ  ಸಯ್ಯದ್ ಸಾದಿಕ್, ಕಾರ್ಯದರ್ಶಿ ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!