ಹೆಲಿಕಾಪ್ಟರ್‍ನಲ್ಲಿ ಬರ ಪರಿಶೀಲಿಸಿದ ಪುಣ್ಯಾತ್ಮ ಸಿಎಂ: ವಿಜಯೇಂದ್ರ ವ್ಯಂಗ್ಯ

Get real time updates directly on you device, subscribe now.

ಕಾರಟಗಿ ): ರಾಜ್ಯದಲ್ಲಿ ಭೀಕರ ಬರದಿಂದಾಗಿ ಅನ್ನದಾತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಗಳು ಹೆಲಿಕಾಪ್ಟರ್‍ನಲ್ಲಿ ಕುಳಿತು ಬರವೀಕ್ಷಣೆ ಮಾಡುತ್ತಿದ್ದಾರೆ. ಹೆಲಿಕಾಪ್ಟರ್‍ನಲ್ಲಿ ಬರ ಪರಿಶೀಲಿಸಿದ ದೇಶದ ಏಕೈಕ ಪುಣ್ಮಾತ್ಮ ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬರ ವೀಕ್ಷಣೆಗೆ ಜಮೀನಿಗೆ ಹೋದರೆ ರೈತರು ಎಲ್ಲಿ ತಮ್ಮ ಗ್ರಹಚಾರ ಬಿಡಿಸುತ್ತಾರೋ ಎಂಬ ಭಯದಲ್ಲಿ ಸಿಎಂ ಹೆಲಿಕಾಪ್ಟರ್ ಏರಿದ್ದಾರೆ. ಇಂತಹ ಸಿಎಂ ನೋಡುವ ದೌರ್ಭಾಗ್ಯ ನಮ್ಮದಾಗಿದೆ. ಹೆಲಿಕಾಪ್ಟರ್‍ನಲ್ಲಿ ಕುಳಿತು ನೋಡಿದರೆ ಭತ್ತ ಯಾವುದು, ರಾಗಿ ಯಾವುದು ಎಂದು ಹೇಗೆ ತಿಳಿಯಲಿದೆ ಎಂದು ಪ್ರಶ್ನಿಸಿದರು.

3600 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

ಭ್ರಷ್ಟ, ಜನವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತರು ಎದೆಗುಂದಿದ್ದಾರೆ. ಕಳೆದ ಮೂರು ವರ್ಷದಲ್ಲಿ 3600 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ 950 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಡಿಗೆ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಈ ಕಾಂಗ್ರೆಸ್ ಸರ್ಕಾರ ಸ್ಪಂದನೆ ಮಾಡಲೇ ಇಲ್ಲ. ಇದರಿಂದ ನಾಡಿನ ರೈತ ಹತಾಶರಾಗಿದ್ದಾರೆ ಎಂದು ತಿಳಿಸಿದರು.

ನೀರು ಕೇಳಿದರೆ ದುರಹಂಕಾರ..

ಮೂರು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಯಾವುದೇ ಪರಿಹಾರ ಕೊಡಲಿಲ್ಲ. ರೈತರ ಎರಡನೇ ಬೆಳೆಗೆ ನೀರು ಕೊಡಲಿಲ್ಲ. ನೀರು ನೀಡಿ ಎಂದು ಕೇಳಿದರೆ ಸಚಿವರೊಬ್ಬರು ದುರಹಂಕಾರದಿಂದ ಮಾತನಾಡುತ್ತಾರೆ. ಜಲಾಶಯದಲ್ಲಿ ಎಪ್ಪತ್ತು ಟಿಎಂಸಿ ನೀರಿದ್ದರೂ ಕೊಡಲ್ಲ ಅಂತಾನೆ. ಅವನಿಗೆ ಅಧಿಕಾರದ ಮದ ನೆತ್ತಿಗೇರಿದೆ. ನೀರನ್ನು ಅವನೇನು ಅವರ ಅಪ್ಪನ ಮನೆಯಿಂದ ತರ್ತಾನೆಯೇ ಎಂದು ಕೇಳಿದರು.
ಬಿಜೆಪಿ ಸರ್ಕಾರ ಇದ್ದಾಗ ಮೂವತ್ತು ಟಿಎಂಸಿ ನೀರಿದ್ದರೂ ಎರಡನೇ ಬೆಳೆಗೆ ನೀರು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸೊಕ್ಕು ಬಂದಿದೆ. ಈ ಅಧಿಕಾರದ ಮದ ಮತ್ತು ಸೊಕ್ಕು ಅಡಗಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಹೇಳಿದರು.
ನಮ್ಮ ಪಾದಯಾತ್ರೆ ಬಗ್ಗೆ ಸಿಎಂ ಟೀಕೆ ಮಾಡಿದ್ದಾರೆ. ಆದರೆ ಅವರು ಬೆಂಗಳೂರಿನಲ್ಲಿ ಕುಳಿತು ವಿಡಿಯೊ ಕಾನ್ಫರೆನ್ಸ್‍ನಲ್ಲಿ ಬರದ ಪರಿಶೀಲನೆ ಮಾಡ್ತಾರೆ. ಅವರೊಂದಿಗೆ ಡಿಸಿ ಹಾಗೂ ಜಿಲ್ಲಾಧಿಕಾರಿ ಸಹ ಜಮೀನಿಗೆ ಬರದೆ ಕೊಠಡಿಯಲ್ಲೇ ಕೂತಿದ್ದಾರೆ ಎಂದರು.
ಈ ಮೊದಲು 101 ತಾಲೂಕು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು, ನಾವು ಪಾದಯಾತ್ರೆ ಆರಂಭ ಮಾಡಿದ ನಂತರ ಮತ್ತೆ 25 ತಾಲೂಕು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಟೇಕಾಫ್ ಆಗದ ಸರ್ಕಾರ…

ನವಲೆ ಜಲಾಶಯಕ್ಕೆ ಈ ಹಿಂದೆ ಬಿ ಎಸ್ ಯಡಿಯೂರಪ್ಪ ಹದಿನಾಲ್ಕು ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಈ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಹೂಳು ತುಂಬಿ ಟಿಬಿ ಡ್ಯಾಮ್ ನಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ ಎಂದರು. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳು ಆಗಿದೆ. ಆದರೆ ಈ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಆಡಳಿತರೂಡ ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ. ಎಂದರು.
ಎಂಟು ತಿಂಗಳಿಂದ ಈ ಸರ್ಕಾರ ವಿಕಲಚೇತನರಿಗೆ ಪಿಂಚಣಿ ಸಿಕ್ಕಿಲ್ಲ, ವೃದ್ಧಾಪ್ಯ ವೇತನ ನಿಂತಿದೆ. ಬಡವರಿಗೆ ಮನೆ ನೀಡಿಲ್ಲ. ಯಾವುದೇ ಯೋಜನೆ ಜಾರಿ ಮಾಡಿಲ್ಲ. ಆದರೆ ಇಲ್ಲಿನ ಸಚಿವರು ಇಸ್ಪಿಟ್ ದಂಧೆಯಲ್ಲಿ ತೊಡಗಿದ್ದಾರೆ. ಇಂತಹ ನಾಲಾಯಕ್ ಜನವಿರೋಧಿ ಕಾಂಗ್ರೆಸ್ ಸರ್ಕಾರ ಎಂದೂ ನೋಡಿರಲಿಲ್ಲ ಎಂದರು.
ಮುಖ್ಯಮಂತ್ರಿಗಳಿಗೆ ಬಿಡದಿ ಟೌನ್‍ಶಿಪ್, ಕನಕಪುರ ವಿಮಾನ ನಿಲ್ದಾಣದ ಬಗ್ಗೆ ಹೆಚ್ಚು ಆಸಕ್ತಿ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಕಲ್ಯಾಣ ಕರ್ನಾಟಕದಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ತೊಂದರೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಜನೌಷಧಿ ಮಳಿಗೆ ನೀಡಿದರೆ ಈ ಸರ್ಕಾರ ಅದನ್ನೂ ಮುಚ್ಚಿದೆ ಎಂದು ಆಕ್ಷೇಪಿಸಿದರು.

(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Get real time updates directly on you device, subscribe now.

Comments are closed.

error: Content is protected !!