ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ 80 ಲಕ್ಷ ರೂ.ಮೌಲ್ಯದ ನಿವೇಶನ : ಶಂಭುಲಿಂಗನಗೌಡ ಪಾಟೀಲರಿಗೆ ಸನ್ಮಾನ

Get real time updates directly on you device, subscribe now.

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕಣ್ಮಣಿಯಾಗಿರುವ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರು ಕೊಪ್ಪಳ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಮೂಲ್ಯ ನಿವೇಶನವನ್ನು ಎಲ್ಲಾ ನಿರ್ದೇಶಕರ ಮಂಡಳಿಯ ತೀರ್ಮಾನದಂತೆ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮಾದರಿಯಾಗಿದ್ದಾರೆ.
ಕೊಪ್ಪಳ ನಗರದ ಪ್ರತಿಷ್ಠಿತ ಕಾಲೋನಿಯ ಕಿನ್ನಾಳ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 40×40 ಅಡಿ ಅಳತೆಯ, ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 80 ಲಕ್ಷ ರೂ. ಇರುವ ನಿವೇಶನವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ಮಂಡಳಿಯ ವತಿಯಿಂದ ಕೊಪ್ಪಳ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ನೀಡಲಾಗಿದೆ.
ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಸ್ವಂತ ನಿವೇಶನ ದೊರೆತಿರುವುದರಿಂದ ಸಂಘದ ಕಚೇರಿ ಹಾಗೂ ವಿವಿಧ ಕಾರ್ಯಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರು ಮತ್ತು ಶಿಕ್ಷಕರ ಹಿತಕ್ಕಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವ ಶಂಭುಲಿಂಗನಗೌಡ ಪಾಟೀಲ,ನಿರ್ದೇಶಕ ಮಂಡಳಿಯ  ಹೃದಯ ವೈಶಾಲ್ಯತೆ ಹಾಗೂ ಸೇವಾ ಮನೋಭಾವವನ್ನು ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಶ್ಲಾಘಿಸಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಂಭುಲಿಂಗನಗೌಡ ಪಾಟೀಲ ಅವರು ನಿವೃತ್ತ ಸರ್ಕಾರಿ ನೌಕರರ ಸಂಘದ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ವಿ. ಜಡಿಯವರು, ಪ್ರಧಾನ ಕಾರ್ಯದರ್ಶಿ ಬೀರನಾಯ್ಕರ್, ಮುಸ್ತಫಾ ಕುದರಿಮೋತಿ, ಶಂಕರಗೌಡ, ವೆಂಕಣ್ಣ ಬಾರಕೇರ, ಕಂಠೆಪ್ಪ, ಮೇರಿ ಮೇಡಂ, ಇಂದುಮತಿ ಸೇರಿದಂತೆ ಹಲವಾರು ನಿವೃತ್ತ ಸರ್ಕಾರಿ ನೌಕರರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!