ಗೋರಿಯನ್ನು ಅಗೆದರೆ ಎಲುಬುಗಳು ಮಾತ್ರ ಸಿಗುತ್ತವೆಯೋ ಹೊರತು ದೇಹಗಳಲ್ಲ – ಪ್ರೊ. ವೆಂಕಟಗಿರಿ ದಳವಾಯಿ
ಮುಂಗಾರು ಕವಿ ಗೋಷ್ಠಿ 
“ಕವಿಗಳು ಎಂದರೆ ಒಂದು ದೇಶದ ನದಿಗಳಿದ್ದಂತೆ, ನದಿಗಳು ಜೀವ ಜಲ ಹೇಗೋ ಹಾಗೆ ಕವಿಗಳು ಜನ ಬದುಕಿಗೆ ಪ್ರಯೋಜನವಾಗಬೇಕಿದೆ, ಎಲ್ಲಿಯವರೆಗೆ ನಮ್ಮ ಸಾಹಿತ್ಯ ಜನಪರವಾಗಿರುವುದಿಲ್ಲವೋ ಅಲ್ಲಿಯವರೆಗೆ ಈ ನಮ್ಮ ಕಾವ್ಯ,ಕಥೆ, ಸಾಹಿತ್ಯದ ವಿವಿಧ ಪ್ರಕಾರಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗಲಾರವು. ಇವು ಕೇವಲ ಪಠ್ಯಗಳಾಗಬಹುದೇ ಹೊರತು ಜನ ಬದುಕಿಗೆ ಪ್ರಯೋಜನವಾಗಲಾರವು” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟಗಿರಿ ದಳವಾಯಿ ಅವರು ಹೇಳಿದರು.
ಇವರು ಭಾಗ್ಯನಗರದ ‘ಅವ್ವ’ ನಿಲಯದಲ್ಲಿ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಶಕ್ತಿ ಶಾರದೆಯ ಮೇಳ ಭಾಗ್ಯನಗರ ಇವರ ಸಹಯೋಗದಲ್ಲಿ ದಿ 30 ರಂದು ಸಂಜೆ 4:30 ಕ್ಕೆ ನಡೆದ “ಮುಂಗಾರು ಕವಿ ಗೋಷ್ಠಿ” ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ಪಿ.ಲಂಕೇಶರ ಟೀಕೆ ಟಿಪ್ಪಣಿ ಕೃತಿಯ ಲೇಖನದ ಆಯ್ದ ಭಾಗವನ್ನು ಓದುವುದರ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಉದ್ಘಾಟಿಸಿದರು.
“ನಾವು ಇಂದು ಬರೀ ಗೋರಿಯನ್ನು ಅಗೆಯುವ ಕೆಲಸ ಮಾಡುತಿದ್ದೇವೆ, ಗೋರಿಯನ್ನು ಅಗೆದರೆ ಎಲುಬುಗಳು ಮಾತ್ರ ಸಿಗುತ್ತವೆಯೋ ಹೊರತು ದೇಹಗಳಲ್ಲ”, ಕವಿ ಹಾಗೂ ಕವಿತೆ ಮಾಡುತ್ತಿರುವ ಕೆಲಸವೇನು ಎನ್ನುವ ಪ್ರಶ್ನೆಯನ್ನು ನಾವಿಂದು ಹಾಕಿಕೊಳ್ಳಬೇಕಿದೆ. ಕವಿಗಳು ಸಾಹಿತಿಗಳು ಇವತ್ತು ಸರಕಾರದ ಪ್ರಶಸ್ತಿಗಾಗಿ ಹಾ ತೊರೆಯುತ್ತಿದ್ದೇವೆಯೇ ಹೊರತು, ಜನರ ಪ್ರಶಸ್ತಿಗಾಗಿ ನಾವು ಬರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕವಿಗಳೆಂದರೆ ಒಂದು ದೇಶದ ನದಿಗಳಿದ್ದಂತೆ, ನದಿಗಳು ಜೀವ ಜಲ ಹೇಗೋ ಹಾಗೆ ಕವಿಗಳು, ಅವರ ಕವಿತೆಗಳು, ಜನ ಬದುಕಿಗೆ ಪ್ರಯೋಜನವಾಗಬೇಕಿದೆ. ಇಂದು ನಾವು ಪ್ರಭುತ್ವವನ್ನು ಎಚ್ಚರಿಸುತ್ತಲೇ ನಮ್ಮ ನೈತಿಕತೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು. ಈ ಕಾರಣಕ್ಕಾಗಿ ಬಾಬಾ ಸಾಹೇಬರು ನಮಗೆ ಬಹಳ ದೊಡ್ಡ ಶಕ್ತಿಯಾಗಿ, ಮಾದರಿಯಾಗಿ ಕಾಣಿಸುತ್ತಾರೆ. ಅವರು ಏಕಕಾಲಕ್ಕೆ ಜ್ಞಾನದ ಜೊತೆಗೆ ಚರಿತ್ರೆಯನ್ನೂ ಹೊಂದಿದ್ದರು. ಜ್ಞಾನ ಮತ್ತು ಚರಿತ್ರೆ, ಇವೆರಡೂ ನಮ್ಮ ಅಸ್ತ್ರಗಳಾಗಬೇಕಿದೆ. ತೀರ್ಥಹಳ್ಳಿಯ ಪಕ್ಕದಲ್ಲೇ ಇದ್ದ ಕುವೆಂಪು ಎಂದಿಗೂ ಧರ್ಮಸ್ಥಳಕ್ಕೆ ಹೋಗಲಿಲ್ಲ. ಅದು ಅವರ ನೈತಿಕತೆಯನ್ನು ತೋರಿಸುತ್ತದೆ. ಹಾಗೆ ನಾವು ನೈತಿಕತೆಯನ್ನು ಬೆಳೆಸಿಕೊಳ್ಳಬೇಕಿದೆ, ಉಳಿಸಿಕೊಳ್ಳಬೇಕಿದೆ, ಎಂದರು. ಇಂತಹ ನೈತಿಕತೆಗಳಿದ್ದಲ್ಲಿ ಮಾತ್ರ ನಮ್ಮ ಬರಹ ಜೀವ ಪಡೆದುಕೊಳ್ಳಲು ಸಾಧ್ಯವಿದೆ, ಎಂದರು. “ನೀರಲ್ಲಿ ಮುಳುಗಿದರೆ ನಮ್ಮ ಪಾಪಗಳೆಲ್ಲವೂ ಕಳೆದು ಹೋಗುತ್ತವೆ ಅಂತ ಮಾತ್ರ ನಾವು ಅಂದುಕೊಂಡಿದ್ದೇವೆ, ಆದರೆ ನಾವು ಗೊತ್ತಿರದೇ ಪುಣ್ಯವನ್ನು ಕೂಡಾ ಮಾಡಿರುತ್ತೇವೆ, ನೀರಿನ ಗುಣವೆಂದರೆ ಎಲ್ಲವನ್ನೂ ತೊಳೆಯುವುದು, ಅದು ಬರೀ ಪಾಪವನ್ನಷ್ಟೇ ತೊಳೆಯುವುದಿಲ್ಲ. ನಮಗರಿವಿರದೆ ಮಾಡಿದ ಪುಣ್ಯವೂ ನೀರಿನಲ್ಲಿ ಮುಳುಗಿದಾಗ ತೊಳೆದು ಹೋಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇದು ಬುದ್ಧನ ಮಧ್ಯಮ ಮಾರ್ಗದ ಚಿಂತನೆಯಾಗಿದೆ. ಎಂದು ತಮ್ಮ ಮಾತುಗಳಲ್ಲಿ ಹೇಳಿದರು. ಈ ಕವಿ ಗೋಷ್ಠಿಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಯವರು, ಇಂದು ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯದ ಎಲ್ಲಾ ಮೂಲೆಗಳಲ್ಲೂ ವಿವಿಧ ಸಾಹಿತ್ಯಿಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ. ಮುಂದೆಯೂ ಕೂಡ ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ, ಎಂದರು. ಆಶಯ ನುಡಿಗಳನ್ನಾಡಿದ ಡಿ.ಎಮ್. ಬಡಿಗೇರ ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಲು ಪ್ರೇರಣೆ ಹೊಂದಿದೆ. ಹೀಗಾಗಿ ಇದು ರಾಜ್ಯವ್ಯಾಪಿ ಬೆಳೆಯಬೇಕಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದಿಂದಲೇ ನಾವು ಯಾಕೆ ಸಾಹಿತ್ಯ ಸಮ್ಮೇಳನಗಳನ್ನು ಮಾಡಬಾರದು..? ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕೊಪ್ಪಳ ಜಿಲ್ಲೆಯ ಸದಸ್ಯ ಸಂಚಾಲಕರಾದ ಶ್ರೀ ರಮೇಶ ಗಬ್ಬೂರ ಎಲ್ಲರನ್ನೂ ಸ್ವಾಗತಿಸಿದರು. ನಂತರ 28 ಕವಿಗಳು ತಮ್ಮ ಕವಿತೆಯನ್ನು ವಾಚನ ಮಾಡಿದರು. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಿರಿಯ ಪರಿಸರವಾದಿಗಳು ಹಾಗೂ ವೈದ್ಯರಾದ ಡಾ.ಸಂಜೀವ ಕುಲಕರ್ಣಿ ಅವರು ಮಾತನಾಡಿ, ಇಂದು ವಾಚನ ಮಾಡಿದ ಅನೇಕ ಕವಿತೆಗಳು ವರ್ತಮಾನವನ್ನು ಪ್ರತಿನಿಧಿಸುವಂತಹ ಕವಿತೆಗಳಾಗಿವೆ. ಕವಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿ ಏನು ಎಂಬುದನ್ನು ಇಂದಿನ ಕೆಲವು ಕವಿತೆಗಳು ಧ್ವನಿಸಿದವು ಎಂದರು. ಕೊನೆಗೆ ಅವರೂ ತಮ್ಮ ಕವಿತೆಯನ್ನು ವಾಚನ ಮಾಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀ ಈಶ್ವರ ಹತ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವನ್ ಕುಮಾರ್ ಬಿಸರಹಳ್ಳಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಮಾಲಾ ಬಡಿಗೇರ್ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಅನೇಕ ಕವಿಗಳು ಆಗಮಿಸಿ ಕಾವ್ಯ ವಾಚಿಸಿದರು. ಜಿಲ್ಲೆಯ ಅನೇಕ ಸಾಹಿತಿಗಳೂ ಕೂಡಾ ಇದರಲ್ಲಿ ಭಾಗವಹಿಸಿದ್ದರು.