ಭೀಕರ ಅಪಘಾತ:  6 ಜನರ ದುರ್ಮರಣ

Get real time updates directly on you device, subscribe now.

ಕೊಪ್ಪಳ:  ಕೊಪ್ಪಳ ವಿಜಯನಗರ ಜಿಲ್ಲೆಗಳ ಗಡಿಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರ  ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ಕುಟುಂಬಸ್ಥರು ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಟ್ರ್ಯಾಕ್ಟರ್‌ನಲ್ಲಿ ಸುಮಾರು 16 ಜನರು ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ  ಲಾರಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದಿದೆ.

ಅಪಘಾತದ ತೀವ್ರತೆಗೆ ಮಗು ಸೇರಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾರೇಶ್ ಹಾಗೂ ಗೌರಮ್ಮ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ನಿವಾಸಿಗಳಾಗಿದ್ದಾರೆ ಎಂದು ಹೇಳಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಮತ್ತು ಸ್ಥಳೀಯರು ತಕ್ಷಣ ರಕ್ಷಣೆ ಮಾಡಿ ಅಂಬ್ಯುಲೆನ್ಸ್ ಮೂಲಕ ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ಸ್ಥಳಕ್ಕೆ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ವಿಜಯನಗರ ಹಾಗೂ ಬಳ್ಳಾರಿ ಸಂಸದ ಈ ತುಕಾರಾಂ ಭೇಟಿ ನೀಡಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ, ಹೊಸಪೇಟೆ ಡಿವೈಎಸ್ಪಿ ಕೆಪಿ ಮುರುಳಿಧರ್ ಹಾಗೂ ಕೊಪ್ಪಳ ಎಸ್‌ಪಿ ಎಲ್. ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೂ ಭೇಟಿ ನೀಡಿ ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.

ಅಪಘಾತದಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಸಮತೋಲನಕ್ಕೆ ತಂದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ  ಕುರಿತು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ..

ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

ದುರ್ಘಟನೆಯ ಬಗ್ಗೆ ಸಂಸದರಾದ ತುಕಾರಾಂ ಅವರೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದೇನೆ. ಮೃತರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರು, ಈ ಸಾವುಗಳು ಅವರ ಕುಟುಂಬದವರನ್ನು ಮತ್ತಷ್ಟು ಕಷ್ಟಕ್ಕೆ ನೂಕುವ ಹಿನ್ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು.

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!