ಬೀದರ್ ಮಾದರಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲೂ ಕಾರ್ಮಿಕ ಸಹಕಾರ ಸಂಘ ಸ್ಥಾಪನೆಗೆ ಸಿದ್ಧತೆ

Get real time updates directly on you device, subscribe now.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಹೊರಗುತ್ತಿಗೆ ನೌಕರರಿಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ರಚಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗಳು ಮತ್ತು ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ, ಕೊಪ್ಪಳ ಜಿಲ್ಲೆಯಲ್ಲೂ ಸಹ ಬೀದರ್ ಮಾದರಿಯಲ್ಲಿ ಸಂಘವನ್ನು ಸ್ಥಾಪಿಸಿ, ಈ ಸಂಘದ ಮೂಲಕ ಹೊರಗುತ್ತಿಗೆ ನೌಕರರನ್ನು ವಿವಿಧ ಇಲಾಖೆಗಳಿಗೆ ನಿಯೋಜಿಸಿದ್ದಲ್ಲಿ ಹೊರಗುತ್ತಿಗೆ ನೌಕರರ ವೇತನ ಪಾವತಿ ಹಾಗೂ ಶಾಸನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳ ಕುರಿತಾದ ಸಮಸ್ಯೆಯನ್ನು ಪರಿಹರಿಸಲು ಅನುಕೂಲವಾಗಲಿದೆ ಎಂದರು.
ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ರಚಿಸಿ, ಅದರಲ್ಲಿ ಒಂದು ಸಾವಿರ ಹೊರಗುತ್ತಿಗೆ ನೌಕರರನ್ನು ನೋಂದಾಯಿಸಲು ಅವಕಾಶವಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಕಾರ್ಮಿಕ ಇಲಾಖೆಯಿಂದ ಸೂಕ್ತ ಮಾಹಿತಿ ನೀಡುವಂತಾಗಬೇಕು. ಈ ಸಭೆಯ ನಡಾವಳಿ ಮತ್ತು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಎಲ್ಲಾ ಅಧಿಕಾರಿಗಳನ್ನೊಳಗೊಂಡು ಕೊಪ್ಪಳ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ರಚಿಸಲು ಬೈಲಾ ಸಿದ್ಧಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಕಾರ್ಮಿಕ ಇಲಾಖೆ ಮತ್ತು ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಸ್ಥಾಪನೆಗೆ ಮಾತ್ರ ಪ್ರಸ್ತುತ ಅವಕಾಶವಿದ್ದು, ಉಳಿದಂತೆ ನ್ಯಾಯಾಲಯಗಳಲ್ಲಿ ವಿವಿಧ ಸಂಸ್ಥೆ ಹಾಗೂ ಸಂಘಟನೆಗಳಿಂದ ರಿಟ್ ಪಿಟೀಷನಗಳು ದಾಖಲಾಗಿರುವುದರಿಂದ ಈ ಪ್ರಕರಣಗಳ ತಿರ್ಪಿನ್ನು ಆಧರಿಸಿ ಸಹಕಾರ ಸಂಘದ ಕಾರ್ಯ ಚಟುವಟಿಕೆ ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳಿಗೆ ಮತ್ತು ಕಾರ್ಮಿಕರ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವನ್ನು ರಚಿಸಲು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆವಾರು ಹಾಗೂ ಅಧೀನ ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ವಿವರ ಹಾಗೂ ಏಜನ್ಸಿ ಮತ್ತು ಟೆಂಡರ್ ಅವಧಿಯ ಸರಿಯಾಗಿ ಮಾಹಿತಿ ನೀಡಬೇಕೆಂದು ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಅವರು ಮಾತನಾಡಿ, ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಸಂಘಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಇರಲಿದ್ದು, ಕಾರ್ಯದರ್ಶಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಬಾಲಕಾರ್ಮಿಕ ಯೋಜನಾ ಸೋಸೈಟಿಯ ನಿರ್ದೇಶಕರು ಮತ್ತು ಯೋಜನಾ ನಿರ್ದೇಶಕರು ಹಾಗೂ ಐದು ಜನ ಚುನಾಯಿತ ಸದಸ್ಯರು ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ನಿರ್ದೇಶಕರಾಗುತ್ತಾರೆ. ಎಲ್ಲಾ ಕಾರ್ಮಿಕರು ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸೈಟಿಯ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಅವರು, ಸಹಕಾರ ಸಂಘ ರಚನೆಯ ಉದ್ದೇಶ, ಸರ್ಕಾರದ ನೀಡಿದ ನಿರ್ದೇಶನಗಳ ಕುರಿತು ಮತ್ತು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಭೆಗೆ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪರಶುರಾಮ್ ಶೆಟ್ಟಪ್ಪನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಟಿ.ಲಿಂಗರಾಜು, ಡಾ. ಬಿ.ಆರ್ ಅಂಬೇಡ್ಕರ್ ನಿಗಮದ ವ್ಯವಸ್ಥಾಕರಾದ ಪುಷ್ಪಲತಾ, ಕೊಪ್ಪಳ ವೃತ್ತದ ಕಾರ್ಮಿಕ ನಿರೀಕ್ಷಕರಾದ ಮಂಜುಳಾ ವಿಶ್ವನಾಥ, ಗಂಗಾವತಿ ವೃತ್ತದ ಕಾರ್ಮಿಕ ನಿರೀಕ್ಷಕರಾದ ಅಶೋಕ ಮಣಿಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಕಾರ್ಮಿಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!