ಕೇಂದ್ರದ ಅನುದಾನ ತರಲು ಕೈಜೋಡಿಸಿ: ಸಚಿವ ತಂಗಡಗಿ

Get real time updates directly on you device, subscribe now.

ಕನಕಗಿರಿ: ಸೆ.16

ಕೊಪ್ಪಳದಲ್ಲಿ ನಿರ್ಮಿಸಿರುವ ಏಷ್ಯಾದಲ್ಲೇ ದೊಡ್ಡದಾದ ರೈಸ್ ಟೆಕ್ನಾಲಜಿ ಪಾರ್ಕ್ ಗೆ ಕೇಂದ್ರದಿಂದ ಅನುದಾನ ತರಲು ಕೈ ಜೋಡಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿ ಅವರು ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಮಾಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಅದಾಪುರ ಗ್ರಾಮದಿಂದ ಹಿರೇಡಂಕನಕಲ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ
ಚಾಲನೆ ನೀಡಿ ಅವರು ಮಾತನಾಡಿದರು.

ಅಧಿಕಾರ ಬರುತ್ತದೆ, ಹೋಗುತ್ತದೆ. ನಾವು ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ.ನಾವು ಹೇಳುವುದನ್ನೇ ಮಾಡುತ್ತಿದ್ದೇವೆ.
ತಾನು ಈ ಹಿಂದೆ ಎಪಿಎಂಸಿ ಸಚಿವ‌ನಾಗಿದ್ದ ವೇಳೆ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಹಾಗೂ ಕೆರೆ ತುಂಬಿಸುವ ಕಾರ್ಯ ಮಾಡಿದ್ದೆ. ಆದರೆ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ರೈಸ್ ಪಾರ್ಕ್ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದಕ್ಕೆ ಕೇಂದ್ರದ ಅನುದಾನ ಅಗತ್ಯ ಇದೆ. ಈ ಜಿಲ್ಲೆಯ ಸಂಸದರಾಗಿರುವ ನೀವು ಕೇಂದ್ರದ ಅನುದಾನ ತರಲು ನಮ್ಮೊಟ್ಟಿಗೆ ಕೈ ಜೋಡಿಸಬೇಕು. ರೈಸ್ ಪಾರ್ಕ್ ಪುನಃ ಕೆಲಸ ಪ್ರಾರಂಭಿಸಿದರೆ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.‌

ಚುನಾವಣಾ ಪೂರ್ವದಲ್ಲಿ ನಾವು ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಿದ್ದೆವು. ನಮ್ಮ ಸರ್ಕಾರ
ಅಧಿಕಾರದ ಚುಕ್ಕಾಣಿ ಹಿಡಿದಾಗ ನಮ್ಮ‌ ಕೈನಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಲು ಸಾಧ್ಯವಿಲ್ಲ ಎಂದು ಅಪಪ್ರಚಾರ ಮಾಡಿದರು. ಆದರೆ ಗ್ಯಾರಂಟಿ ಯೋಜನೆಗಳನ್ನು ‌ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ತರಲಾಗಿದೆ. ಈ ಯೋಜನೆಗಳಿಂದ ನಾಡಿನ‌ ಕಟ್ಟಕಡೆಯ ವ್ಯಕ್ತಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.

ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪರಿಶ್ರಮದಿಂದಾಗಿ 371ಜೆ ಕಲಂ ಕೊಡುಗೆ ಈ ಭಾಗಕ್ಕೆ ದೊರಕಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪಟ್ಟು ಹಿಡಿದು ಖರ್ಗೆ ಅವರು 371ಜೆ ಕಲಂ ತರಲು ಕಾರಣರಾದರು. ಪರಿಣಾಮ ಸರ್ಕಾರಿ ಉದ್ಯೋಗ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಅನುಕೂಲವಾಗುವಂತೆ ಮಾಡಿದರು ಎಂದು ಶ್ಲಾಘಿಸಿದರು.

ಪಿಎಂಜಿಎಸ್ ವೈ ಯೋಜನೆಯಡಿ ಕೇಂದ್ರದ ಶೇ.60 ಹಾಗೂ ರಾಜ್ಯದ ಶೇ.40ರಷ್ಟು ಅನುದಾನದಲ್ಲಿ‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಗುಣಮಟ್ಟದಲ್ಲಿ‌ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ನಿಗದಿತ ಕಾಲ ಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಅಧಿಕಾರಿಗಳು‌ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.‌

ಈ ಹಿಂದೆ ಬಸವರಾಜ್ ರಾಯರೆಡ್ಡಿ ಅವರು ಲೋಕಸಭಾ ಸದಸ್ಯರಾಗಿದ್ದ ವೇಳೆ ಎರಡು ರೈಲ್ವೆ ಲೈನ್ ತರಲು ಶ್ರಮಿಸಿದ್ದರು. ಅವರ ಕಾರ್ಯವನ್ನು ನಾವು ನೆನೆಯಬೇಕು. ಕರಡಿ ಸಂಗಣ್ಣ ಅವರು ಸಂಸದರಾದ ಬಳಿಕ ಅದಕ್ಕೆ ಇನ್ನಷ್ಟು ವೇಗ ದೊರಕಿತು ಎಂದು ಇದೇ ವೇಳೆ ನೆನೆದರು.

ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶರಣೇಗೌಡ, ಗಂಗಾಧರ್ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!