ಯಲಬುರ್ಗಾದಲ್ಲಿ ರಂಗ ಮಂದಿರ ನಿರ್ಮಿಸಲು ರಂಗಕರ್ಮಿ ಶೆಟ್ಟರ್ ಮನವಿ
ಕೊಪ್ಪಳ :
ಯಲಬುರ್ಗಾ ಪಟ್ಟಣದಲ್ಲಿ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ರಂಗಮಂದಿರ ನಿರ್ಮಿಸಬೇಕು ಎಂದು ರಂಗಕರ್ಮಿ ಶರಣು ಶೆಟ್ಟರ್ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

,
ಯಲಬುರ್ಗಾ ತಾಲೂಕು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಐತಿಹಾಸಿಕವಾಗಿಯೂ ಕೂಡಾ ತುಂಬಾ ಮಹತ್ವ ಪಡೆದುಕೊಂಡ ಪ್ರದೇಶವಾಗಿದೆ. ಇಲ್ಲಿ ಅನೇಕ ವೃತ್ತಿರಂಗಭೂಮಿ ನಾಟಕ ಕಂಪನಿಗಳು ಹುಟ್ಟಿಕೊಂಡು ಈಗಾಗಲೇ ಪ್ರಸಿದ್ಧಿಪಡೆದಿವೆ. ಹಾಗೇನೆ ಗ್ರಾಮೀಣ ಹವ್ಯಾಸಿ ರಂಗಭೂಮಿ ಕಲಾಸಂಘಗಳು, ಜನಪದ ಕಲಾವಿದರು, ಯುವ ಕಲಾಪ್ರತಿಭೆಗಳು, ವಿವಿಧ ಸಾಂಸ್ಕೃತಿಕ ಸಂಘಟನೆಗಳು ಇಂದಿಗೂ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಕಲಾಪ್ರದರ್ಶನಕ್ಕಾಗಿ ಹಾಗೂ ಸಾಹಿತ್ಯಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಮರ್ಪಕ ಸೌಲಭ್ಯಗಳನ್ನೊಳಗೊಂಡ ಆಧುನಿಕ ಮಾದರಿಯ ರಂಗಮಂದಿರದ ಕೊರತೆಯಿರುವುದನ್ನ ಸ್ಥಳೀಯ ಸಾಹಿತಿಗಳು ಹಾಗೂ ಕಲಾವಿದರುಗಳು ಅಭಿವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಇಡೀ ತಾಲೂಕಿನ ಪ್ರತಿಭೆಗಳು, ಕಲಾವಿದರು ಸೂಕ್ತ ವೇದಿಕೆಗಾಗಿ ಅಲೆದಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಗಮನಿಸಿದಾಗ,
ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಕಲಬುರಗಿಯ ಎಸ್.ಎಂ ಪಂಡಿತ ರಂಗಮಂಮದಿರ, ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಧಾರವಾಡದ ಸೃಜನಾ ರಂಗಮಂದಿರದ ಮಾದರಿಯಲ್ಲಿ, ವಿಶಾಲ ವೇದಿಕೆ, ಆಧುನಿಕ ಧ್ವನಿವರ್ಧಕಗಳು ಮತ್ತು ಬೆಳಕು ವ್ಯವಸ್ಥೆ, ಆರಾಮದಾಯಕ ಆಸನಗಳ ವ್ಯವಸ್ಥೆ, ಸಭಾಂಗಣ, ಅಭ್ಯಾಸ ಕೊಠಡಿಗಳು ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ — ಸಮಗ್ರ ಸೌಲಭ್ಯಗಳನ್ನೊಳಗೊಂಡ ರಂಗಮಂದಿರವನ್ನು ಯಲಬುರ್ಗಾ ಪಟ್ಟಣದಲ್ಲಿ ನಿರ್ಮಿಸಿದರೆ, ಅದು ಈ ಭಾಗದ ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಮೈಲುಗಲ್ಲಾಗುತ್ತದೆ. ಅಂತಹ ಅನೇಕ ಮೈಲುಗಲ್ಲುಗಳ ಸ್ಥಾಪನೆಗೆ ತಾವುಗಳು ಎಂದಿಗೂ ಮುಂದಾಗಿರುವುದನ್ನ ತಾಲ್ಲೂಕಿನ ಜನತೆ ಎಂದಿಗೂ ಸ್ಮರಿಸುತ್ತಲೇ ಬಂದಿದ್ದಾರೆ. ಪ್ರಸ್ತುತವಾಗಿ
ಇಂತಹ ರಂಗಮಂದಿರ ನಿರ್ಮಾಣದ ಅವಶ್ಯಕತೆಯಿಂದಾಗಿ ಈ ಭಾಗದಲ್ಲಿ ಜಿಲ್ಲಾಮಟ್ಟ ಸೇರಿದಂತೆ ರಾಜ್ಯಮಟ್ಟದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಾರ್ವಜನಿಕ ಸಭೆ ಹಾಗೂ ಸಮ್ಮೇಳನಗಳನ್ನು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ತುಂಬಾ ಅನುಕೂಲವಾಗುತ್ತದೆ. ಈ ಎಲ್ಲಾ ಸದುದ್ದೇಶದಿಂದ ಯಲಬುರ್ಗಾ ಪಟ್ಟಣದಲ್ಲಿ, ರವೀಂದ್ರ ಕಲಾಕ್ಷೇತ್ರ ಹಾಗೂ ರಾಜ್ಯದ ಇತರೆ ಜಿಲ್ಲೆಯ ಮಾದರಿಯಲ್ಲಿರುವ ರಂಗಮಂದಿರಗಳಂತೆ ನೂತನ ರಂಗಮಂದಿರ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಶೀಘ್ರವಾಗಿಯೇ ನಿರ್ಮಾಣ ಮಾಡಲು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.
ಈ ಜನಪರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ತುರ್ತುಕ್ರಮ ಕೈಗೊಳ್ಳಬೇಕೆಂದು ರಂಗ ಕರ್ಮಿಗಳಾದ ಶರಣು ಶೆಟ್ಟರ್ ಲಕ್ಷ್ಮಣ್ ಪಿರ ಗಾರ್,
ಲೋಹಿತಕುಮಾರ ರಾಮಶೆಟ್ಟಿ,
ಶಿವಕುಮಾರ ಕಲ್ಲೂರು, ಅಮನ್ ಡಿ ಖಾಜಿ, ಮಂಜುನಾಥ ಪೂಜಾರ ಆಗ್ರಹಿಸಿದ್ದಾರೆ.