ರಸ್ತೆ ನಿಯಮಗಳನ್ನು ಭಯದಿಂದಲ್ಲ, ಜವಾಬ್ದಾರಿಯಿಂದ ಪಾಲಿಸೋಣ – ಕೆ ಎಸ್ ಆಸ್ಪತ್ರೆ

Let’s follow road rules responsibly, not out of fear – KS Hospital
ಕೊಪ್ಪಳ: ಪ್ರತಿ ವರ್ಷ ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ತಿಂಗಳಾಗಿ ಆಚರಿಸಲಾಗುತ್ತದೆ. ಆದರೂ ಇದರ ಮಹತ್ವ ಇನ್ನೂ ಅನೇಕ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ರಸ್ತೆ ಅಪಘಾತಗಳಿಂದಾಗುವ ಸಾವು ಮತ್ತು ಗಂಭೀರ ಗಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದ ಕೆ ಎಸ್ ಆಸ್ಪತ್ರೆಯು ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ರಸ್ತೆ ಸುರಕ್ಷತೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ದಿನಾಂಕ 24 ಜನವರಿ 2026 ಶನಿವಾರದಂದು ಆಯೋಜಿಸಿತು.
ಈ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ, ರಸ್ತೆ ಸುರಕ್ಷತೆಯ ಮಹತ್ವ, ನಿಯಮಗಳ ಪಾಲನೆಯ ಅಗತ್ಯತೆ ಮತ್ತು ತಮ್ಮ ವೈಯಕ್ತಿಕ ಅನುಭವಗಳನ್ನು ಪ್ರಬಂಧಗಳ ಮೂಲಕ ವ್ಯಕ್ತಪಡಿಸಿದರು. ಸ್ಪರ್ಧೆಗೆ ಭಾಗವಹಿಸಿದ ಪ್ರಬಂಧಗಳು ಸಮಾಜದಲ್ಲಿ ರಸ್ತೆ ಸುರಕ್ಷತೆ ಕುರಿತ ಜಾಗೃತಿಗೆ ಸಹಕಾರಿಯಾಗಿವೆ ಎಂದು ಆಯೋಜಕರು ಅಭಿಪ್ರಾಯಪಟ್ಟರು. ವಿಶೇಷವಾಗಿ ಯುವ ಪೀಳಿಗೆಯಲ್ಲಿ, ರಸ್ತೆ ಅಪಘಾತಗಳ ಭೀತಿದಾಯಕ ಏರಿಕೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.
ರಸ್ತೆ ಅಪಘಾತಗಳು ಭಾರತದಲ್ಲಿ ಇನ್ನೂ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 1.7 ಲಕ್ಷಕ್ಕಿಂತ ಹೆಚ್ಚು ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ, ಅಂದರೆ ಪ್ರತಿದಿನ ಸರಾಸರಿ 475 ಸಾವುಗಳು ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಮಾತ್ರವೇ ವರ್ಷಕ್ಕೆ ಸುಮಾರು 12,000 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದು, ನಿರಂತರ ಜಾಗೃತಿ ಮತ್ತು ತಡೆ ಕ್ರಮಗಳ ಅಗತ್ಯತೆಯನ್ನು ಇದು ಸ್ಪಷ್ಟಪಡಿಸುತ್ತದೆ.
ಪ್ರಬಂಧ ಸ್ಪರ್ಧೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಸತಾ ಬೀದಿ ನಾಟಕ, ಬೈಕ್ ರ‍್ಯಾಲಿ ಮುಕಾಂತರ ಹೆಲ್ಮೆಟ್ ವಿತರಣೆ ಇಂತಹ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಅರಿವನ್ನು ಮೂಡಿಸಲು ಸಜ್ಜಾಗಿದೆ. ರಸ್ತೆ ಅಪಘಾತಗಳಿಂದಾಗುವ ಸಾವು ನೋವುಗಳನ್ನು ತಡೆಯುವುದು ಕೆ ಎಸ್ ಆಸ್ಪತ್ರೆಯ ಮುಖ್ಯಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಬಸವರಾಜ್ ಎಸ್ ಕ್ಯಾವಟರ್, ರಸ್ತೆ ನಿಯಮಗಳನ್ನು ದಂಡ ಅಥವಾ ಭಯದಿಂದಲ್ಲ, ನಮ್ಮ ಹಾಗೂ ಇತರರ ಜೀವ ರಕ್ಷಣೆಗಾಗಿ ಜವಾಬ್ದಾರಿಯಿಂದ ಪಾಲಿಸಬೇಕು ಎಂದು ತಿಳಿಸಿದರು. ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧಾರಣೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಮತ್ತು ವೇಗ ನಿಯಂತ್ರಣದಂತಹ ಕ್ರಮಗಳು ಅಪಘಾತಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮತ್ತು ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಮುಂದಿನ ತಲೆಮಾರಿನಲ್ಲಿ ಶಿಸ್ತುಬದ್ಧ ಮತ್ತು ಸುರಕ್ಷಿತ ರಸ್ತೆ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೆ ಎಸ್ ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಸಹ ರಸ್ತೆ ಸುರಕ್ಷತೆ ಕುರಿತ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದಾಗಿ ತಿಳಿಸಿದೆ.
ಕಾರ್ಯಕ್ರಮದ ಅಂತ್ಯದಲ್ಲಿ, ಎಲ್ಲಾ ನಾಗರಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅತಿವೇಗ ಚಾಲನೆಯನ್ನು ತಪ್ಪಿಸಬೇಕು ಮತ್ತು ರಸ್ತೆಯಲ್ಲಿ ಸುರಕ್ಷಿತ ಆಚರಣೆಗಳನ್ನು ಉತ್ತೇಜಿಸಬೇಕು ಎಂದು ಮನವಿ ಮಾಡಲಾಯಿತು.
Comments are closed.